ಭಾನುವಾರ, ಸೆಪ್ಟೆಂಬರ್ 22, 2019
23 °C
ಕಾರವಾರ ತಾಲ್ಲೂಕು

ಕದ್ರಾ ಗ್ರಾಮದ ಬೋರೆಯಲ್ಲಿ ಒಣಗಿದ ಬಾವಿಗಳು: ದಿನ ಬಿಟ್ಟು ದಿನ ಬಂದರೂ ಸಾಕಷ್ಟಿಲ್ಲ

Published:
Updated:
Prajavani

ಕಾರವಾರ: ಪಕ್ಕದಲ್ಲೇ ಕಾಳಿ ನದಿ ಹರಿಯುತ್ತಿದೆ. ಆದರೂ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡತೊಡಗಿದೆ. ತಾಲ್ಲೂಕಿನ ಕದ್ರಾ ಗ್ರಾಮ ಪಂಚಾಯ್ತಿಯ ಬೋರೆಯಲ್ಲಿ ಬೇಸಿಗೆ ಕಠಿಣ ದಿನಗಳು ಎದುರಾಗುತ್ತಿವೆ. ಬಾವಿಗಳ ತಳ ಕಾಣುತ್ತಿದೆ.

ಗ್ರಾಮದಲ್ಲಿರುವ ಒಂದು ತೆರೆದ ಬಾವಿ ಸಂಪೂರ್ಣ ಒಣಗಿದೆ. ಅದರ ಪಕ್ಕದಲ್ಲಿರುವ ಸಣ್ಣ ಟ್ಯಾಂಕ್ ಕೂಡ ನೀರು ಕಾಣದೇ ಬಹಳ ದಿನಗಳಾದವು. ಸದ್ಯಕ್ಕೆ ಗ್ರಾಮ ಪಂಚಾಯ್ತಿಯು ಮತ್ತೊಂದು ಬಾವಿಯಿಂದ ಹೊಂದಿಸಿಕೊಂಡು ಗ್ರಾಮಸ್ಥರಿಗೆ ನೀರು ಪೂರೈಸುತ್ತಿದೆ. ಬಾವಿಯಲ್ಲಿ ಲಭ್ಯವಿರುವ ನೀರನ್ನು ಎರಡು ದಿನಗಳಿಗೆ ಒಂದು ಬಾರಿ ಪೈಪ್‌ನಲ್ಲಿ ಹರಿಸಲಾಗುತ್ತಿದೆ. ಮೂರು ನಾಲ್ಕು ಕೊಡಗಳಷ್ಟು ನೀರು ಸಿಗುತ್ತಿದೆ. ಅದರಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥ ಗೋವಿಂದ ನಾಯ್ಕ.

ಬೋರೆಯಲ್ಲಿ ಸುಮಾರು 60 ಮನೆಗಳಿವೆ. ಸಮೀಪದಲ್ಲೇ ಇರುವ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಇಲ್ಲಿಗೆ ನೀರು ಪೂರೈಕೆಯಾಗುತ್ತಿಲ್ಲ. ಗ್ರಾಮದ ಬಾವಿಯಲ್ಲಿ ಸಾಕಷ್ಟು ನೀರಿದ್ದಾಗ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ಈ ಬಾರಿಯ ಬೇಸಿಗೆಯ ಬಿಸಿಲು ಎಲ್ಲ ಜಲಮೂಲಗಳನ್ನೂ ಒಣಗಿಸುತ್ತಿದೆ. ಇದು ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ.

‘ಸದ್ಯಕ್ಕೆ ಇರುವ ನೀರಿನಲ್ಲೇ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಆದರೆ, ಮಳೆ ಬರುವುದು ವಿಳಂಬವಾದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ. ಹೀಗಾಗಿ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಕುಡಿಯುವ ನೀರಿನ ಸೌಕರ್ಯ ಮಾಡಿಕೊಡಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು’ ಎಂದು ಸ್ಥಳೀಯ ನಿವಾಸಿ ಚಂದ್ರಕಾಂತ. 

ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೂ ಇದೆ. ಬೇಸಿಗೆ ರಜೆ ಮುಗಿದು ತರಗತಿಗಳು ಪುನರಾರಂಭವಾದಾಗ ಇಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ಅಧಿಕಾರಿಗಳು ಶೀಘ್ರವೇ ಗಮನ ಹರಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

‘ಕೊಳವೆ ಬಾವಿ ದುರಸ್ತಿ’: ‘ಬೋರೆ ಹಾಗೂ ಸುತ್ತಮುತ್ತ ಇರುವ ನೀರಿನ ಸಮಸ್ಯೆಯ ಬಗ್ಗೆ ಗಮನಕ್ಕೆ ಬಂದಿದೆ. ಗ್ರಾಮ ಪಂಚಾಯ್ತಿಯ ಕೊಳವೆಬಾವಿಯನ್ನು ದುರಸ್ತಿ ಮಾಡಲು ತಿಳಿಸಿದ್ದೇವೆ. ಸೋಮವಾರ ಬರುವುದಾಗಿ ಹೇಳಿದ್ದಾರೆ. ಅಲ್ಲದೇ ಟ್ಯಾಂಕರ್ ನೀರು ಪೂರೈಕೆ ಮಾಡುವಂತೆಯೂ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿಗೆ ಮತ್ತು ತಹಶೀಲ್ದಾರ್‌ಗೆ ಪತ್ರ ನೀಡಿದ್ದೇವೆ. ಒಂದೆರಡು ದಿನಗಳಲ್ಲಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಗ್ರಾಮದಲ್ಲಿ ತುರ್ತುಮಟ್ಟಿಗೆ ನೀರು ಇದೆ. ಸಮಸ್ಯೆ ಉಲ್ಬಣಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕದ್ರಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಶ್ವಿನಿ ಪೆಡ್ನೇಕರ್ ಪ್ರತಿಕ್ರಿಯಿಸಿದ್ದಾರೆ.

Post Comments (+)