ಭಾನುವಾರ, ಆಗಸ್ಟ್ 18, 2019
25 °C
ಮುಂಗಾರು ಮಳೆಯಲ್ಲಿ ಪ್ರಕೃತಿಯ ಅಲಂಕಾರ

ಮಲೆನಾಡಿನಲ್ಲಿ ತೆರೆದ ವನ ಪುಷ್ಪಲೋಕ

Published:
Updated:

ಕಾರವಾರ: ಮುಂಗಾರು ಮಳೆಯು ಮಲೆನಾಡಿನಲ್ಲಿ ತನ್ನ ಲೀಲೆಯನ್ನು ಪ್ರಾರಂಭಿಸುತ್ತಿದ್ದಂತೆ ಪೃಕೃತಿಯು ಕಣ್ಮನ ತಣಿಸುವ ಹೊಸ ದೃಶ್ಯ ಕಾವ್ಯದೊಂದಿಗೆ ಚೈತನ್ಯದ ಚಿಲುಮೆಯಾಗುತ್ತದೆ. ಭೂದೇವಿಯು ಹಸಿರಿನ ಚಿತ್ತಾರದ, ವಿಭಿನ್ನ ವಿನ್ಯಾಸದ ವಸ್ತ್ರ ತೊಟ್ಟ ವಧುವಿನಂತೆ ಕಂಗೊಳಿಸುವ ಸಂದರ್ಭ ಇದು.  

ಬೇಸಿಗೆಯ ಬಿಸಿಲಿನ ಝಳಕ್ಕೆ ಒಣಗಿದ್ದ ತರು ಲತೆಗಳು ಮಳೆಯ ಹನಿಗಳು ತಾಕುತ್ತಿದ್ದಂತೇ ನಳನಳಿಸಿ ಅರಳತೊಡಗುತ್ತವೆ. ಇದೇ ಸಮಯದಲ್ಲಿ ಮಲೆನಾಡಿನಾದ್ಯಂತ ಅನೇಕ ವಿಧದ ಅಂದವಾದ ಹೂವುಗಳು ಅರಳತೊಡಗುತ್ತವೆ. 

ತೇರು ಹೂವು: ಈ ಹೂವು ನಸುಗೆಂಪಿನ ಬಣ್ಣದಲ್ಲಿರುತ್ತದೆ. ಬಹುತೇಕ ಜೂನ್ ತಿಂಗಳ ಪ್ರಾರಂಭದಲ್ಲಿ ಒಂದೆರಡು ಮಳೆ ಬಿದ್ದ ಕೂಡಲೇ ಅಡಕೆ ತೋಟಗಳಲ್ಲಿನ ಬಸಿ ಕಾಲುವೆಯ ಇಕ್ಕೆಲಗಳಲ್ಲಿ ಅರಳುತ್ತವೆ. ಅಡಕೆ ಸೋಗೆಯ ಸಂದಿಯಿಂದ ಇಣುಕಿ ಅರಳುವ ಈ ಹೂವು ರಥದ ಆಕೃತಿಯಲ್ಲಿರುತ್ತದೆ. 

ಹಳದಿ ಕುಸುಮಾವಳಿ: ಬಲು ಆಕರ್ಷಕವಾಗಿರುವ ಈ ಹೂವು ಗ್ರಾಮೀಣ ಭಾಗದ ಬೇಣ, ಬೆಟ್ಟಗಳ ಹುಲ್ಲುಗಾವಲಿನಲ್ಲಿ ಇರುತ್ತವೆ. ದೊಡ್ಡ ಗಾತ್ರದ ಮರದ ಅಡಿಯಲ್ಲಿರುವ ಸಸ್ಯಗಳ ಆಸರೆಯಲ್ಲೂ ಅರಳುತ್ತವೆ. ಅಚ್ಚ ಹಳದಿ ಬಣ್ಣದಿಂದ ಕೂಡಿರುತ್ತದೆ.

ನಂದಿ ಬಟ್ಟಲು ಹೂವು: ಈ ಹೂವು ವಿಶೇಷವಾಗಿ ಬೆಟ್ಟದ ಸಾಲುಗಳಲ್ಲಿನ ಸಣ್ಣ ಪೊದೆಗಳ ನಡುವೆ ಮಳೆಗಾಲದ ಪ್ರಾರಂಭದ ಹಂತದಲ್ಲಿ ಕಂಡುಬರುತ್ತದೆ. ಈ ಹೂವಿನ ವಿಶೇಷವೆಂದರೆ, ಹೂವಿನ ಪೊಕಳೆಗಳ ನಡುವೆ ನಂದಿಯ ಮುಖವನ್ನು ಹೋಲುವ ಆಕೃತಿಯು ಕಂಡುಬರುತ್ತದೆ. ಹೀಗಾಗಿ ಈ ಹೂವಿಗೆ ನಂದಿಬಟ್ಟಲ ಹೂವೆಂದು ಪ್ರಸಿದ್ಧವಾಗಿದೆ.

ಕಾಡು ಡೇರೆ ಹೂವು: ಕಂದು ಬಣ್ಣ ಈ ಹೂವು, ಅಗಲವಾದ ಪೊಕಳೆಯನ್ನು ಹೊಂದಿದೆ. ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ. ಸದಾ ಹರಿಯುವ ನೀರಿನ ಅಥವಾ ಅಡಕೆ ತೋಟದ ಅಂಚಿನಲ್ಲಿರುವ ಕೆರೆ, ಕಾಲುವೆಯ ಪಕ್ಕದಲ್ಲಿ ಇವು ಅರಳುತ್ತದೆ. ಈ ಹೂವಿನ ದಳಗಳ ಮೇಲೆ ಸೂಕ್ಷ್ಮ ರೀತಿಯ ಆಕರ್ಷಕ ಚಿತ್ತಾರಗಳು, ಒಂದಕ್ಕೊಂದು ಅಡ್ಡಲಾಗಿ ಎಳೆಯಲಾದ ಗೆರೆಗಳ ಆಕೃತಿಯಿದೆ.

ಸೀತೆ ದಂಡೆ ಹೂವು: ‘ಮುಂಗಾರಿನ ಸಿಂಗಾರಿ’ ಎಂದೇ ಕರೆಸಿಕೊಳ್ಳುವ, ಮರಗಳ ಪೊಟರೆಗಳಲ್ಲಿ ಅರಳುವ ಸೀತೆ ದಂಡೆ ಹೂವು ಕೂಡ ಪ್ರಮುಖವಾಗಿದೆ. ಕಾಡಿನಲ್ಲಿ ನೆಲಕ್ಕೆ ಬಿದ್ದುಕೊಂಡಿರುವ ಒಣ ಮರಗಳ ಸಂದಿಯಲ್ಲಿ ಅರಳುವ ‘ಫಲವಂತೀ ಹೂವು’ ಕೂಡ ಮಳೆಗಾಲದ ಆಕರ್ಷಣೆಯಾಗಿದೆ.

–ಚಿತ್ರ, ಬರಹ: ಜ್ಯೋತಿರಾದಿತ್ಯ ಜಿ. ಭಟ್, ಯಲ್ಲಾಪುರ.

Post Comments (+)