ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಚಿಣ್ಣರು ಮೆಚ್ಚುವ ಶಿಕ್ಷಕಿ ‘ಶಕುಂತಲಾ’

47 ವರ್ಷಗಳಿಂದ ಏಕಾಂಗಿಯಾಗಿ ಶಿಶುವಿಹಾರ ನಿರ್ವಹಣೆ
Last Updated 7 ಮಾರ್ಚ್ 2022, 19:52 IST
ಅಕ್ಷರ ಗಾತ್ರ

ಶಿರಸಿ: ಸರ್ಕಾರದ ನೆರವಿಲ್ಲದೆ ಸ್ವಂತ ಬಲದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿರುವ ನಗರದ ಪಡ್ತಿಗಲ್ಲಿಯ ಶಕುಂತಲಾ ಪಾವಸ್ಕರ ಸಾವಿರಾರು ವಿದ್ಯಾರ್ಥಿಗಳ ಬಾಳಿನಲ್ಲಿ ನೆಚ್ಚಿನ ಶಿಕ್ಷಕಿಯಾಗಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ.

62ರ ಹರೆಯದ ಶಕುಂತಲಾ ಕಳೆದ 46 ವರ್ಷಗಳಿಂದ ಅಶೋಕ ನಗರದ ಮನೆಯೊಂದರ ಮಾಳಿಗೆಯ ಮೇಲೆ ಜೈ ಸಂತೋಷಿಮಾ ಶಿಶುವಿಹಾರ ಕೇಂದ್ರ ಮುನ್ನಡೆಸುತ್ತಿದ್ದಾರೆ. ಅತಿ ಕಡಿಮೆ ಶುಲ್ಕದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವ ಕಾರಣಕ್ಕೆ ಈ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಲು ಪಾಲಕರು ಆಸಕ್ತಿ ತೋರುತ್ತಾರೆ. ಬಡ ಕುಟುಂಬದ ಹಲವು ವಿದ್ಯಾರ್ಥಿಗಳಿಗೆ ಶುಲ್ಕ ಪಡೆಯದೆ ಪ್ರವೇಶಾತಿ ನೀಡಿದ ಉದಾಹರಣೆಯೂ ಇದೆ.

ಸಾವಿರಾರು ಮಕ್ಕಳು ಇಲ್ಲಿ ಆಡಿ ಬೆಳೆದಿದ್ದಾರೆ. ಈ ಪೈಕಿ ಹಲವರು ನ್ಯಾಯಾಧೀಶ, ವೈದ್ಯ, ಉದ್ಯಮಿ, ಪತ್ರಕರ್ತ, ರಾಜಕೀಯ ನಾಯಕ ಹೀಗೆ ಬೇರೆ ಹುದ್ದೆಗೆ ಏರಿದ್ದರೂ ಈಗಲೂ ಶಕುಂತಲಾ ಅವರನ್ನು ಗೌರವಿಸಲು ಹಿಂದೇ ಬೀಳುವುದಿಲ್ಲ.

‘ಅಂಗನವಾಡಿಗೆ ದಾಖಲಾಗುವವರೆಲ್ಲ ತನ್ನ ಮಕ್ಕಳು’ ಎಂಬುದನ್ನು ನುಡಿಯಲ್ಲಷ್ಟೇ ಅಲ್ಲದೆ, ನಡೆಯಲ್ಲೂ ಸಾಬೀತುಪಡಿಸಿದ್ದಾರೆ. ಕೋವಿಡ್ ಪರಿಸ್ಥಿತಿ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ಮಕ್ಕಳಿಗೆ ತರಗತಿ ನಡೆಸಿರುವ ಅವರ ಬಳಿ ಹಲವರು ಮಕ್ಕಳನ್ನು ಬಿಟ್ಟು ಹೋಗುತ್ತಾರೆ.

‘ನನ್ನಿಂದ ಕಲಿತವರು ಒಳ್ಳೆಯ ವ್ಯಕ್ತಿಗಳಾಗಲಿ ಎಂಬುದಷ್ಟೇ ನನ್ನ ಬಯಕೆ. ಹಣ ಗಳಿಕೆ ಜೀವನದ ಉದ್ದೇಶವಾಗಬಾರದು. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ರೂಪಿಸಬೇಕು ಎಂಬುದೇ ಧ್ಯೇಯವಾಗಿರಬೇಕು’ ಎಂಬುದು ಶಕುಂತಲಾ ಅವರ ಮಾತು.

‘ಜೀವನದಲ್ಲಿ ಬಡತನ, ಕಷ್ಟದ ದಿನಗಳನ್ನು ಕಂಡಿದ್ದೇನೆ. ಮಕ್ಕಳೊಂದಿಗೆ ಬೆರೆತರೆ ಆ ನೋವುಗಳನ್ನು ಮರೆಯಬಹುದು ಎಂಬ ಕಾರಣಕ್ಕೆ ಸ್ವಂತ ಶ್ರಮದಿಂದ ಅಂಗನವಾಡಿ ಕೇಂದ್ರ ಆರಂಭಿಸಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT