ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ ಮೂಲಸತ್ವ ಉಳಿಯಲಿ

ಮೂರು ದಿನಗಳ ಯಕ್ಷೋತ್ಸವದಲ್ಲಿ ಸ್ವರ್ಣವಲ್ಲಿ ಶ್ರೀ ಅಭಿಮತ
Last Updated 6 ಸೆಪ್ಟೆಂಬರ್ 2019, 14:12 IST
ಅಕ್ಷರ ಗಾತ್ರ

ಶಿರಸಿ: ಯಕ್ಷಗಾನ ಕಲೆಯಲ್ಲಿರುವ ಸಾತ್ವಿಕತೆ ಉಳಿಸಿ ಬೆಳೆಯಲು ಈ ಕಲೆಯ ಮೂಲಸತ್ವವನ್ನು ಉಳಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.

ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಯಕ್ಷೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನರಂಜನೆಗೆ ಸೀಮಿತವಾಗಿರುವ ಮೌಲ್ಯ ಕಟ್ಟಿಕೊಡದ ಕಲೆಗಳು ಸಮಾಜದಲ್ಲಿ ಹೆಚ್ಚು ವಿಜೃಂಭಿಸುತ್ತಿವೆ. ಹೀಗೆ ಜೀವನ ಮೌಲ್ಯ ಕಟ್ಟಿಕೊಡದ ಕಲೆಗಳು ಎಷ್ಟೇ ಉಚ್ಛ್ರಾಯ ಸ್ಥಿತಿಗೆ ತಲುಪಿದರೂ ವ್ಯರ್ಥ. ಆದರೆ ಯಕ್ಷಗಾನ ಕಲೆ ನಿಜಸ್ವರೂಪದಲ್ಲಿ ಉದಾತ್ತ ಚಿಂತನೆಗಳನ್ನು ಹೊತ್ತು ಸಾಗುತ್ತಿದೆ ಎಂದರು.

ಕುಟುಂಬ ವ್ಯವಸ್ಥೆ, ಪಾತಿವ್ರತ್ಯ, ಯಜ್ಞ, ತಪಸ್ಸು, ದಾನದಂತಹ ಮೌಲ್ಯಗಳನ್ನು ಅನುಸರಿಸಿದರೆ ಜೀವನ ಉದಾತ್ತಗೊಳ್ಳುತ್ತದೆ. ಭಾರತೀಯ ಸಂಸ್ಕೃತಿಯಲ್ಲಿರುವ ಇಂತಹ ಅಮೂಲ್ಯ ಮೌಲ್ಯವನ್ನು ಯಕ್ಷಗಾನ ಜನರ ಮನಸ್ಸಿಗೆ ನೀಡುತ್ತದೆ ಎಂದು ನುಡಿದರು.

ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶ್ಯಾಮ ಭಟ್ಟ ಮಾತನಾಡಿ, ‘ಕಾಲಮಿತಿ ಹಾಗೂ ಇತರ ಪ್ರದರ್ಶನಗಳ ವ್ಯಾಪ್ತಿಗೆ ಸೀಮಿತವಾಗುತ್ತಿರುವ ಯಕ್ಷಗಾನದಲ್ಲಿ ವೃತ್ತಿಪರ ಮೇಳಗಳ ಜೀವಿತಾವಧಿ ಪೂರ್ಣಗೊಳ್ಳುತ್ತಿದೆಯೇ ಎಂಬ ಭಾವನೆ ಬರುತ್ತಿದೆ. ಆದರೆ ಇಂಥ ಸಂದರ್ಭದಲ್ಲಿಯೂ ಶಾಲಾ ಮಕ್ಕಳು ಯಕ್ಷಗಾನ ಹಾಗೂ ತಾಳಮದ್ದಲೆ ಕಲಿತು ಪ್ರದರ್ಶನ ನೀಡುವುದು ಆಶಾಭಾವನೆ ಮೂಡಿಸಿದೆ’ ಎಂದರು.
ನಿವೃತ್ತ ಅಧಿಕಾರಿ ವಿ.ಆರ್.ಭಟ್ಟ, ‘ಯಕ್ಷಗಾನಕ್ಕೆ ಶಾಸ್ತ್ರೀಯತೆ, ವ್ಯಾಕರಣ ಎರಡೂ ಇದೆ. ಆದರೆ ಅದನ್ನು ಪ್ರತಿಬಿಂಬಿಸುವ ಕಾರ್ಯವಾಗಿಲ್ಲ. ಹಾಗಾಗಿ ಯಕ್ಷಗಾನ ಲಕ್ಷಣ ಗ್ರಂಥ ರಚನೆ ಆಗಬೇಕಾಗಿದೆ’ ಎಂದರು.

ಹಿರಿಯ ಯಕ್ಷಗಾನ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ ಹಾಗೂ ನಾಗೇಶ ನಾಯ್ಕ ಮಿರ್ಜಾನ್ ಅವರಿಗೆ ‘ಯಕ್ಷಶಾಲ್ಮಲಾ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಗೋಳಿಕೊಪ್ಪ ಬರೆದ 'ಶಂಕರ ವಿಜಯ' ಕೃತಿ ಲೋಕಾರ್ಪಣೆಗೊಂಡಿತು. ನಂತರ 'ಜ್ವಾಲಾ ಪ್ರತಾಪ' ಯಕ್ಷಗಾನ ಆಖ್ಯಾನ ಪ್ರದರ್ಶನಗೊಂಡಿತು.

ಯಕ್ಷಗಾನ ವಿದ್ವಾಂಸ ಎಂ.ಎ.ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಜೋಶಿ ನಿರೂಪಿಸಿದರು. ಜಿ.ಜಿ.ಹೆಗಡೆ ಕನೇನಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT