ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಹೌಸ್‍ನಲ್ಲಿ ವಿದೇಶಿ ತಳಿಯ ತರಕಾರಿ ಬೆಳೆ: ಅನಿತಾ ಹೆಗಡೆಯ ಸ್ವಾವಲಂಬಿ ಜೀವನ

‘ಹಸಿರು’ ಸಂಪತ್ತು ಗಳಿಕೆಯೇ ಹವ್ಯಾಸ
Last Updated 21 ಜುಲೈ 2022, 19:30 IST
ಅಕ್ಷರ ಗಾತ್ರ

ಶಿರಸಿ: ಐಷಾರಾಮಿ ಜೀವನ ನಡೆಸುವ ಸವಲತ್ತು, ಆರಾಯದಾಯಕವಾಗಿ ಜೀವನ ಸಾಗಿಸುವ ವಾತಾವರಣ ಎಲ್ಲವೂ ಇದ್ದರೂ ಯಲ್ಲಾಪುರ ಪಟ್ಟಣದ ಮಹಿಳೆಯೊಬ್ಬರು ಕೃಷಿ ಮೂಲಕ ಸ್ವಾವಲಂಬಿ ಜೀವನ ನಡೆಸುವ ಕನಸು ಕಟ್ಟಿಕೊಂಡಿದ್ದಾರೆ. ಹಲವು ವರ್ಷದ ಶ್ರಮದಿಂದ ಅದನ್ನು ನನಸಾಗಿಸಿಯೂ ಕೊಂಡಿದ್ದಾರೆ.

ಯಲ್ಲಾಪುರ ಪಟ್ಟಣದ ಅನಿತಾ ಹೆಗಡೆ ಕಳೆದ ಮೂರ್ನಾಲ್ಕು ವರ್ಷದಿಂದ ಕೃಷಿ, ನರ್ಸರಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ರಾಘವೇಂದ್ರ ಹೆಗಡೆ ಯಲ್ಲಾರಗದ್ದೆ ಆಟೊಮೊಬೈಲ್ ಕ್ಷೇತ್ರದ ಉದ್ಯಮದಲ್ಲಿದ್ದಾರೆ. ಪಟ್ಟಣದ ಧಾರವಾಡ ರಸ್ತೆಯ ನಾಯಕನಕೆರೆ ಸಮೀಪ ತೋಟಗಾರಿಕಾ ಇಲಾಖೆಯಿಂದ ಮಾನ್ಯತೆ ಪಡೆದಿರುವ ‘ಮಹಾಗಣಪತಿ ನರ್ಸರಿ ಮತ್ತು ಗಾರ್ಡನ್ ವಿನ್ಯಾಸ’ ಉದ್ಯಮವನ್ನು ಅನಿತಾ ಏಕಾಂಗಿಯಾಗಿ ಮುನ್ನಡೆಸುತ್ತಿದ್ದಾರೆ.

ಒಂದು ಎಕರೆ ಜಾಗದಲ್ಲಿ ನೂರಾರು ಬಗೆಯ ಅಲಂಕಾರಿಕ ಸಸಿಗಳು, ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇದು ಉಪಾದಾಯಕ್ಕೆ ದಾರಿಯಾದರೆ, ಹವ್ಯಾಸದ ಸಲುವಾಗಿ ಇದೇ ಜಾಗದ ಪಕ್ಕದಲ್ಲಿ ಐದು ಗುಂಟೆ ವಿಸ್ತೀರ್ಣದ ಜಾಗದಲ್ಲಿ ಪಾಲಿಹೌಸ್ ನಿರ್ಮಿಸಿದ್ದು ಅಲ್ಲಿಯೂ ಬಗೆಬಗೆಯ ತರಕಾರಿ, ಹಣ್ಣಿನ ಕೃಷಿ ಮಾಡುತ್ತಿದ್ದಾರೆ.

ಮೂರು ವರ್ಷದ ಹಿಂದೆ ನಿರ್ಮಿಸಿದ್ದ ಪಾಲಿಹೌಸ್‍ನಲ್ಲಿ ಆರಂಭಿಕ ಹಂತದಲ್ಲೇ ನಾಲ್ಕು ಬೆಗಯ ಮೆಣಸಿನಕಾಯಿ ಬೆಳೆ ತೆಗೆಯುವ ಮೂಲಕ ಅನಿತಾ ಯಶಸ್ಸು ಸಾಧಿಸಿದ್ದರು. ನಾಲ್ಕು ಕ್ವಿಂಟಲ್‍ಗೂ ಅಧಿಕ ಪ್ರಮಾಣದ ಬೆಳೆ ಬೆಳೆದಿದ್ದರು. ನಂತರ ಹಂತ ಹಂತವಾಗಿ ಮ್ಯಾಂಗೋಸ್ಟೀನ್, ರಂಬುಟನ್, ಥಾಯ್ ಗೌವಾ, ಪಲ್ಸನ್ ಫ್ರುಟ್ ಸೇರಿದಂತೆ ಹಲವು ವಿದೇಶಿ ತಳಿಯ ಹಣ್ಣುಗಳನ್ನೇ ಬೆಳೆದು ಗಮನಸೆಳೆದಿದ್ದಾರೆ.

‘ಪಾಲಿಹೌಸ್‍ನಲ್ಲಿ ನಾಲ್ಕು ಕ್ವಿಂಟಲ್‍ಗೂ ಹೆಚ್ಚು ಇಂಗ್ಲೀಷ್ ಕುಕುಂಬರ್ (ವಿದೇಶಿ ತಳಿಯ ಸೌತೆಕಾಯಿ) ಬೆಳೆದಿದ್ದೆ. ಹೆಚ್ಚು ಇಳುವರಿ ದೊರೆತಿದ್ದು ಕೃಷಿಯಲ್ಲಿ ಇನ್ನಷ್ಟು ಆಸಕ್ತಿ ಮೂಡಲು ಕಾರಣವಾಯಿತು. ಸದ್ಯ ಐದು ಗುಂಟೆ ಜಾಗದಲ್ಲಿ ಅಮೇರಿಕಾ ಮೂಲದ ಮೆಣಸಿನಕಾಯಿ (ಫ್ಲೈಯಿಂಗ್ ಸಾಸರ್ ಚಿಲ್ಲಿ) ಬೆಳೆಸುತ್ತಿದ್ದೇನೆ. ಉತ್ತಮ ಇಳುವರಿಯ ನಿರೀಕ್ಷೆಯೂ ಇದೆ’ ಎಂದು ಅನಿತಾ ಹೆಗಡೆ ಹೇಳಿದರು.

ಅನಿತಾ ಹೆಗಡೆ
ಅನಿತಾ ಹೆಗಡೆ

ವಿದೇಶಿ ತಳಿಯ ಹೂವು, ಹಣ್ಣು:ಅನಿತಾ ಅವರು ವಿದೇಶಿ ತಳಿಯ ಹಣ್ಣುಗಳಾದ ಕಮ್‍ಕ್ವಾಟ್, ಲಾಂಗಸ್ಯಾಟ್, ವೈಟ್ ಕಿಂಗ್ ಮಲ್ಬೆರ‍್ರಿ, ಆಚಾಚಾರು, ರಾಂಬೈ, ರೊಲಿನಿಯಾ, ಐಸ್‍ಕ್ರೀಮ್ ಬೀನ್, ಕಫಿರ್ ಲೆಮನ್, ರೆಡ್ ಲೆಮನ್, ಸ್ನೇಕ್ ಫ್ರುಟ್ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸುತ್ತಿದ್ದಾರೆ. ವಾಟರ್ ಲಿಲ್ಲಿ ಸೇರಿದಂತೆ ನೂರಾರು ಬಗೆಯ ಹೂವಿನ ಗಿಡಗಳನ್ನೇ ಬೆಳೆಸುತ್ತಿದ್ದಾರೆ. ಮನೆಯ ಸೀಮಿತ ಜಾಗದಲ್ಲಿ ಸುಂದರ ಉದ್ಯಾನ ರೂಪಿಸಲು ಸಲಹೆಗಳನ್ನೂ ನೀಡುತ್ತಿದ್ದಾರೆ. ಅನಿತಾ ಅವರ ಸಂಪರ್ಕ ಸಂಖ್ಯೆ:8762200517

ಕೃಷಿ ಚಟುವಟಿಕೆಯಲ್ಲಿ ಆದಾಯದ ಜತೆಗೆ ಸಂತಸ, ನೆಮ್ಮದಿ ಸಿಗುತ್ತದೆ. ಹಸಿರು ಬೆಳೆಸುವುದೇ ನಿಜವಾದ ಸಂಪತ್ತು ಎಂಬುದು ಅರಿವಿಗೆ ಬಂದಿದೆ.

- ಅನಿತಾ ಹೆಗಡೆ, ಯಲ್ಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT