ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ಶೂನ್ಯ ನೆರಳಿನ ದಿನ’ ದಾಖಲು

Last Updated 30 ಏಪ್ರಿಲ್ 2021, 13:29 IST
ಅಕ್ಷರ ಗಾತ್ರ

ಕಾರವಾರ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ತಲೆ ಸುಡುವಂಥ ಬಿಸಿಲಿದ್ದರೂ ನೆರಳು ಗೋಚರಿಸಲೇ ಇಲ್ಲ. ಈ ವಿದ್ಯಮಾನವನ್ನು ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಾಖಲಿಸಲಾಯಿತು.

ಮಧ್ಯಾಹ್ನ 12.31ಕ್ಕೆ ಸೂರ್ಯ ಶಿರೋಬಿಂದುವಿನ ಮೇಲೆ ಹಾದು ಹೋದ ಪರಿಣಾಮ ಸುಮಾರು ಒಂದು ನಿಮಿಷದ ಅವಧಿಗೆ ನೆರಳು ಅತ್ಯಂತ ಕನಿಷ್ಠ ಪ್ರಮಾಣದಲ್ಲಿತ್ತು. ಈ ರೀತಿಯ ದಿನಗಳನ್ನು ‘ಶೂನ್ಯ ನೆರಳಿನ ದಿನ’ ಎಂದು ಕರೆಯಲಾಗುತ್ತದೆ.

ಕೋವಿಡ್ ನಿಯಂತ್ರಣದ ಕ್ರಮವಾಗಿ ಕರ್ಫ್ಯೂ ಹೇರಿರುವ ಕಾರಣ ಶಾಲಾ ವಿದ್ಯಾರ್ಥಿಗಳು ಹಾಗೂ ಇತರ ಸಾರ್ವಜನಿಕರಿಗೆ ಕೇಂದ್ರಕ್ಕೆ ಬರಲು ಅವಕಾಶ ಇರಲಿಲ್ಲ. ಅವರಿಗೆ ಮನೆಗಳಲ್ಲೇ ಇದ್ದು ಇದನ್ನು ಪ್ರಯೋಗದ ಮೂಲಕ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

‘ಸೂರ್ಯ ಗರಿಷ್ಠ ಎತ್ತರಕ್ಕೆ ತಲುಪಿದಾಗ ಅದು ಶಿರೋಬಿಂದುವಿನ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುತ್ತದೆ. ಭೂಮಿಯ ಆವರ್ತನೆಯ ಅಕ್ಷ ಅದರ ಕಕ್ಷಾತಲಕ್ಕೆ 23.5 ಡಿಗ್ರಿ ಓರೆಯಾಗಿರುವುದೇ ಇದಕ್ಕೆ ಕಾರಣ. ಋತುಮಾನಗಳಿಗೂ ಇದೇ ಕಾರಣವಾಗಿದೆ. ಡಿ.21ರಂದು ದಕ್ಷಿಣದ ಗರಿಷ್ಠವನ್ನು ತಲುಪಿ ಉತ್ತರಕ್ಕೆ ಹೊರಳುವುದರಿಂದ ಆ ಘಟನೆಗೆ ‘ಉತ್ತರಾಯಣ’ ಎಂದು ಹೆಸರಿದೆ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದರು.

‘ಆ ಮಧ್ಯಾಹ್ನದ ನೆರಳು ಯಾವುದೇ ಮಧ್ಯಾಹ್ನದ ನೆರಳಿಗೆ ಹೋಲಿಸಿದರೆ ಗರಿಷ್ಠವಾಗಿರುತ್ತದೆ. ಜೂನ್ 21ರಂದು ಉತ್ತರದ ಗರಿಷ್ಠ ತಲುಪಿ ದಕ್ಷಿಣಕ್ಕೆ ಹೊರಳುತ್ತದೆ. ಆಗ ಅದಕ್ಕೆ ‘ದಕ್ಷಿಣಾಯನ’ ಎಂದು ಕರೆಯಲಾಗುತ್ತದೆ. ಆ ಮಧ್ಯಾಹ್ನದ ನೆರಳು ಕನಿಷ್ಠವಾಗಿರುತ್ತದೆ. ಸೂರ್ಯನ ಈ ಉತ್ತರ- ದಕ್ಷಿಣ ಚಲನೆಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದೇ ಗುರುತಿಸಲಾಗುತ್ತದೆ’ ಎಂದು ಹೇಳಿದರು.

‘ಕರ್ಕಾಟಕ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ನಡುವೆ ಇರುವ ಸ್ಥಳಗಳಲ್ಲಿ ವರ್ಷದ ಎರಡು ನಿರ್ದಿಷ್ಟ ದಿನಗಳಲ್ಲಿ ಸೂರ್ಯ ಶಿರೋಬಿಂದುವಿನ ಮೇಲೆ ಹಾದು ಹೋಗುತ್ತದೆ. ಹಾಗಾಗಿ ಆ ದಿನಗಳಲ್ಲಿ ಮಧ್ಯಾಹ್ನದ ನೆರಳು ಇಲ್ಲದಾಗುತ್ತದೆ. ಇದೇ ಶೂನ್ಯ ನೆರಳಿನ ದಿನದ ತತ್ವ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT