ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕೊರತೆ ಆಗದಂತೆ ಗಮನ ಹರಿಸಿ: ಆರೋಗ್ಯಾಧಿಕಾರಿ ಮನವಿ

ಜಿ.ಪಂ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯಾಧಿಕಾರಿ ಮನವಿ
Last Updated 15 ಏಪ್ರಿಲ್ 2021, 14:27 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯಲ್ಲಿ ನಿತ್ಯ 2 ಸಾವಿರದಿಂದ 2,200 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಕಂಡುಬರುತ್ತಿದ್ದು, ಇದರತ್ತ ಗಮನ ಹರಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಅವರು ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಜಯಶ್ರೀ ಮೊಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿಯ ತಿಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಪ್ರತಿಕ್ರಿಯಿಸಿ, ಆದಷ್ಟು ಬೇಗ ಲಸಿಕೆ ಪೂರೈಕೆ ಮಾಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

‘ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪಿ.ಎಫ್, ಇ.ಎಸ್‍.ಐ ಕಡ್ಡಾಯವಾಗಿ ಸಿಗಬೇಕು. ಒಂದು ವೇಳೆ ಸಿಗದಿರುವವರು ಇದ್ದರೆ, ಮಾಹಿತಿಯನ್ನು ಜಿಲ್ಲಾ ಪಂಚಾಯಿತಿ ಆಡಳಿತದ ಗಮನಕ್ಕೆ ತರಬೇಕು’ ಎಂದು ಪ್ರಿಯಾಂಗಾ ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ , ಮೇ ತಿಂಗಳ ಒಳಗಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗುವುದು. ರಸಗೊಬ್ಬರವನ್ನು ಹಳೆಯ ದರದಲ್ಲೇ ಮಾರಾಟ ಮಾಡಲಾಗುವುದು’ ಎಂದು ತಿಳಿಸಿದರು. ಅಕಾಲಿಕ ಮಳೆಯಿಂದ 45 ಎಕರೆ ಮಾವಿನ ಬೆಳೆ ನಾಶವಾಗಿರುವುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ದೊಡ್ಮನಿ, ‘ಮೊರಾರ್ಜಿ ವಸತಿಶಾಲೆಗಳಿಗೆ ದಾಖಲಾತಿ ಮಾಡುವಾಗ ಆಯಾ ತಾಲ್ಲೂಕಿನ ಮಕ್ಕಳಿಗೆ ಆದ್ಯತೆ ನೀಡಬೇಕು ಎಂದು ಮಾರ್ಗಸೂಚಿಯಿದೆ. ಆದರೆ, ನಮ್ಮ ಜಿಲ್ಲೆಯಲ್ಲಿ ಹಾವೇರಿ, ಗದಗ ಜಿಲ್ಲೆಗಳ ವಿದ್ಯಾರ್ಥಿಗಳನ್ನು ಶಿರಸಿಗೆ ಹಾಗೂ ಶಿರಸಿಯವರನ್ನು ಮುರುಡೇಶ್ವರದಲ್ಲಿ ದಾಖಲಾತಿ ಮಾಡಲಾಗಿದೆ’ ಎಂದು ಗಮನ ಸೆಳೆದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಪುರುಷೋತ್ತಮ ಪ್ರತಿಕ್ರಿಯಿಸಿ, ‘ಶಾಲೆಗಳ ಆಯ್ಕೆಗೆ ಆನ್‌ಲೈನ್ ಮೂಲಕ ಅವಕಾಶ ಇರುವ ಕಾರಣ ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ಹೀಗೆ ಆಗುತ್ತಿದೆ. ಈ ಬಗ್ಗೆ ಚರ್ಚಿಸಲಾಗುವುದು’ ಎಂದರು.

ಬಸ್‌ಗಳಿಲ್ಲದೇ ಹಾಜರಾತಿ ಕೊರತೆ

ಶಿಕ್ಷಣ ಇಲಾಖೆಯ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಹರೀಶ ಗಾಂವ್ಕರ್ ಮಾತನಾಡಿ, ‘6ರಿಂದ 9ನೇ ತರಗತಿಗಳು ನಡೆಯುತ್ತಿಲ್ಲ. 10ನೇ ತರಗತಿಗಳು ಮಾತ್ರ ತೆರೆದಿದ್ದು, ಸಾರಿಗೆ ಇಲಾಖೆ ಸಿಬ್ಬಂದಿಯ ಮುಷ್ಕರದಿಂದ ಬಸ್‌ಗಳಿಲ್ಲ. ಇದರಿಂದ ಹಾಜರಾತಿಯಲ್ಲಿ ಶೇ 20ರಷ್ಟು ಇಳಿಕೆಯಾಗಿದೆ’ ಎಂದರು.

‘ಶಿಕ್ಷಕರು ಹಾಗೂ ಮಕ್ಕಳಿಗೆ ಕೋವಿಡ್ ಪರೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ. ಸೋಂಕು ದೃಢಪಟ್ಟ ಮಕ್ಕಳನ್ನು ಮನೆಗಳಲ್ಲೇ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಯಾನಿಟೈಸರ್, ಮುಖಗವಸುಗಳನ್ನು ಕಡ್ಡಾಯ ಮಾಡಲಾಗಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಸಂತೋಷ ರೇಣಕೆ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಷಾ ನಾಯ್ಕ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT