ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡ ಬೆಳೆಸಿ ಕೋಟಿ ಸಂಪಾದಿಸಿದರು...!

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: ಐದು ವರ್ಷದಲ್ಲಿ ₹1.27 ಕೋಟಿ ಸಹಾಯಧನ ಹಂಚಿಕೆ
Published 4 ಜೂನ್ 2023, 23:36 IST
Last Updated 4 ಜೂನ್ 2023, 23:36 IST
ಅಕ್ಷರ ಗಾತ್ರ

ಗಣಪತಿ ಹೆಗಡೆ

ಕಾರವಾರ: ಸಸಿ ನೆಟ್ಟು, ಅದರ ಪೋಷಣೆ ಮಾಡಿಯೂ ಹಣ ಗಳಿಸಲು ಅರಣ್ಯ ಇಲಾಖೆ ದಾರಿ ಮಾಡಿಕೊಡುತ್ತಿದೆ. ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಅಡಿ ಕಳೆದ ಐದು ವರ್ಷದಲ್ಲಿ ಜಿಲ್ಲೆಯಲ್ಲಿ ₹1.27 ಕೋಟಿಯಷ್ಟು ಸಹಾಯಧನವನ್ನು ಗಿಡ ನೆಟ್ಟು ಬೆಳೆಸಿದವರು ಪಡೆದುಕೊಂಡಿದ್ದಾರೆ.

ಸಸಿಗಳನ್ನು ಬೆಳೆಸುವ ಜತೆಗೆ ರೈತರಿಗೂ ಆದಾಯ ಒದಗಿಸಲು ಅರಣ್ಯ ಇಲಾಖೆ 2011 ರಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಗೆ ತಂದಿದೆ. ಕಡಿಮೆ ದರದಲ್ಲಿ ಹಣ್ಣಿನ ಸಸಿ, ಉರುವಲು ಬಳಕೆಗೆ ಯೋಗ್ಯವಿರುವ ಸಸಿಗಳನ್ನು ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಐದು ಅರಣ್ಯ ಉಪವಿಭಾಗಗಳಿದ್ದು 2018 ರಿಂದ ಕಳೆದ ಸಾಲಿನವರೆಗೆ 2,63,605 ಸಸಿಗಳಿಗೆ ಯೋಜನೆ ಅಡಿ ಸಹಾಯಧನ ಒದಗಿಸಲಾಗಿದೆ. ಕಳೆದ ಸಾಲಿನಿಂದ ಸಾಮಾಜಿಕ ಅರಣ್ಯ ವಿಭಾಗದಿಂದಲೂ ಸಸಿಗಳ ವಿತರಣೆ ನಡೆಯುತ್ತಿದೆ. ಒಟ್ಟೂ 1,102 ಫಲಾನುಭವಿಗಳು ₹1,27,71,362 ಮೊತ್ತದ ಸಹಾಯಧನ ಪಡೆದುಕೊಂಡಿದ್ದಾರೆ.

ಏನಿದು ಯೋಜನೆ?

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ಮಾಲ್ಕಿ (ಸ್ವಂತ) ಜಮೀನು ಹೊಂದಿರುವವವರಿಗೆ ಸಸಿಗಳನ್ನು ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ನೀಡುತ್ತದೆ. ಪಹಣಿ ಪತ್ರದ ದಾಖಲೆ ನೀಡಿ ಫಲಾನುಭವಿಗಳು ಅಗತ್ಯದಷ್ಟು ಸಸಿಗಳನ್ನು ಪಡೆದುಕೊಳ್ಳುತ್ತಾರೆ. ಸಸಿಗಳನ್ನು ನಾಟಿ ಮಾಡಿ ಒಂದು ವರ್ಷದ ಬಳಿಕ ಅರಣ್ಯ ಇಲಾಖೆ ಅದರ ಬೆಳವಣಿಗೆ ಗಮನಿಸಿ ಸಹಾಯಧನ ನೀಡುತ್ತದೆ. ಮೊದಲ ಮೂರು ವರ್ಷ ಸಸಿಗಳ ಬೆಳವಣಿಗೆ ಹಂತ ಗಮನಿಸಿ ಒಟ್ಟೂ ₹125 ಮೊತ್ತದಷ್ಟು ಸಹಾಯಧನ ನೀಡಲಾಗುತ್ತದೆ.

‘ಇಲಾಖೆಯಿಂದ ಪಡೆದ ಸಸಿಗಳನ್ನು ಫಲಾನುಭವಿಗಳು ನೆಟ್ಟ ಬಳಿಕ ತಪಾಸಣೆ ನಡೆಸಲಾಗುತ್ತದೆ. ಮೊದಲ ವರ್ಷ ₹35, ಎರಡನೇ ವರ್ಷ ₹40 ಮತ್ತು ಮೂರನೆ ವರ್ಷ ₹50 ಮೊತ್ತವನ್ನು ಸಹಾಯಧನ ರೂಪದಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಸಸಿ ಖರೀದಿ, ನಾಟಿ, ಪೋಷಣೆಗೆ ಮಾಡಿದ ವೆಚ್ಚ ಸಹಾಯಧನದ ಮೂಲಕ ರೈತರಿಗೆ ದೊರೆಯುತ್ತದೆ. ನಂತರ ಇದೇ ಗಿಡಗಳಿಂದ ದೊರೆಯುವ ಹಣ್ಣು, ಹಂಪಲ, ಉರುವಲುಗಳನ್ನು ಅವರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ’ ಎನ್ನುತ್ತಾರೆ ಕೆನರಾ ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ವಸಂತ ರೆಡ್ಡಿ.

ಕೆ.ವಿ.ವಸಂತ ರೆಡ್ಡಿ
ಕೆ.ವಿ.ವಸಂತ ರೆಡ್ಡಿ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ವರ್ಷದಿಂದ ವರ್ಷಕ್ಕೆ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದ್ದು ರೈತರಿಗೆ ಅನುಕೂಲವಾಗುವ ಜತೆಗೆ ಹಸಿರೀಕರಣ ಹೆಚ್ಚಳಕ್ಕೂ ಅನುಕೂಲವಾಗಿದೆ. ಕೆ.ವಿ.ವಸಂತ ರೆಡ್ಡಿ ಸಿಸಿಎಫ್ ಕೆನರಾ ಅರಣ್ಯ ವೃತ್ತ

7.10 ಲಕ್ಷ ಸಸಿಗಳು ಸಿದ್ಧ ಮಳೆಗಾಲದ ವೇಳೆ ರೈತರು ಸಂಘ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಸೇರಿದಂತೆ ವಿವಿಧ ಜನರಿಗೆ ಹಂಚಿಕೆ ಮಾಡಲು ಅರಣ್ಯ ಇಲಾಖೆ ಸಸ್ಯಕ್ಷೇತ್ರಗಳಲ್ಲಿ 7.10 ಲಕ್ಷ ಸಸಿಗಳನ್ನು ಬೆಳೆಸಿದೆ. ಜಿಲ್ಲೆಯ ಐದು ಅರಣ್ಯ ಉಪವಿಭಾಗ ಸಾಮಾಜಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿರುವ ಸಸ್ಯ ಕ್ಷೇತ್ರಗಳಲ್ಲಿ ಬೀಟೆ ನೇರಳೆ ಸಾಲದೂಪ ಕಾಯಿದೂಪ ಜಂಬನೆರಲೆ ಪೇರಲೆ ಹಲಸು ಮಾವು ಸಿಲ್ವರ್ ಓಕ್ ರಕ್ತಚಂದನ ಗೇರು ತಪಸಿ ಸೇರಿ 35ಕ್ಕೂ ವಿವಿಧ ಬಗೆಯ ಸಸಿಗಳನ್ನು ಬೆಳೆಸಲಾಗಿದೆ.

ಹೆಚ್ಚಿದ ಸಸಿಗಳ ದರ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ವಿತರಿಸಲಾಗುವ ಸಸಿಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 5*8 ಸುತ್ತಳತೆ ಹಾಗೂ ಇಂಚು 6*9 ಸುತ್ತಳತೆ ಹಾಗೂ ಇಂಚು ಎತ್ತರದ ಪ್ಯಾಕ್‍ನಲ್ಲಿದ್ದ ಸಿಸಗಳಿಗೆ ₹1 ದರ ಇದ್ದುದು ಈ ಬಾರಿ ಕ್ರಮವಾಗಿ ₹5 ಮತ್ತು ₹8ಕ್ಕೆ ಏರಿಕೆ ಆಗಿದೆ. 8 ಇಂಚು ಸುತ್ತಳತೆ ಮತ್ತು 12 ಇಂಚು ಎತ್ತರದ ಪ್ಯಾಕೆಟ್‍ನಲ್ಲಿದ್ದ ಸಸಿಗಳ ದರ ₹3ರ ಬದಲಾಗಿದೆ ₹23ಕ್ಕೆ ಏರಿಕೆಯಾಗಿದೆ. ‘ಸಸಿಗಳ ದರ ಏರಿಕೆ ಮಾಡಿದಂತೆ ಪ್ರೋತ್ಸಾಹಧನದ ಮೊತ್ತವನ್ನೂ ಹೆಚ್ಚಳ ಮಾಡಬೇಕು’ ಎಂಬುದು ರೈತರ ಆಗ್ರಹ.

5 ವರ್ಷಗಳಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಸಾಧನೆ ಅರಣ್ಯ ಉಪವಿಭಾಗ;ಹಂಚಿಕೆಯಾದ ಸಸಿ;ವಿತರಿಸಿದ ಸಹಾಯಧನ ಯಲ್ಲಾಪುರ;96457; ₹5544140 ಕಾರವಾರ;83192; ₹3554010 ಶಿರಸಿ;53303; ₹2341210 ಹೊನ್ನಾವರ;19992; ₹1113426 ಹಳಿಯಾಳ;9379; ₹122426 ಸಾಮಾಜಿಕ ಅರಣ್ಯ ವಿಭಾಗ;1282; ₹96150 ಒಟ್ಟು;263605; ₹12771362

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT