ಕಾರವಾರ: ಮಳೆಯ ಕೊರತೆ ಎದುರಿಸುತ್ತಿರುವ ಜಿಲ್ಲೆಯ 9 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಸಿದ್ದಾಪುರ, ಹೊನ್ನಾವರ, ದಾಂಡೇಲಿ ತಾಲ್ಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಈಚೆಗೆ ಕಂದಾಯ, ಕೃಷಿ ಇಲಾಖೆ ಜಂಟಿಯಾಗಿ ನಡೆಸಿದ ಬೆಳೆ ಸಮೀಕ್ಷೆ ವರದಿ, ಮಳೆ ಪ್ರಮಾಣ ಆಧರಿಸಿ ನಾಲ್ಕು ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಎಂದು ಘೊಷಿಸಲಾಗಿದೆ. ಹಳಿಯಾಳ, ಮುಂಡಗೋಡ, ಶಿರಸಿ, ಯಲ್ಲಾಪುರ ಈ ಪಟ್ಟಿಗೆ ಸೇರಿದೆ. ಐದು ತಾಲ್ಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಿಸಲಾಗಿದ್ದು, ಕಾರವಾರ, ಅಂಕೋಲಾ, ಜೊಯಿಡಾ, ಭಟ್ಕಳ ಮತ್ತು ಕುಮಟಾ ಈ ಪಟ್ಟಿಯಲ್ಲಿವೆ.
ಜೂನ್‍ನಿಂದ ಸೆಪ್ಟೆಂಬರ್ ಮಧ್ಯಂತರದವರೆಗೆ ಜಿಲ್ಲೆಯಲ್ಲಿ ವಾಡಿಕೆಯಂತೆ 252 ಸೆಂ.ಮೀ ಮಳೆ ಸುರಿಯಬೇಕಿತ್ತು. ಆದರೆ 201 ಸೆಂ.ಮೀ ಮಳೆ ಸುರಿದಿದ್ದು ಶೇ.20ರಷ್ಟು ಕೊರತೆ ಉಂಟಾಗಿದೆ. ಹೊನ್ನಾವರ, ಸಿದ್ದಾಪುರದಲ್ಲಿಯೂ ಕ್ರಮವಾಗಿ ಶೇ6, ಶೇ4 ಷರಟು ಮಳೆ ಕೊರತೆ ಉಂಟಾಗಿದೆ. ಆದರೆ ಅವುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ಜಿಲ್ಲೆಯಲ್ಲಿ ಈ ಬಾರಿ ಮಳೆಯ ವಿಪರೀತ ಕೊರತೆ ಉಂಟಾಗಿದೆ. ಈಚಿನ ವರ್ಷಗಳಲ್ಲಿ ಇಂತಹ ಸ್ಥಿತಿ ಬಂದಿರಲಿಲ್ಲ. ಆಯ್ದ ತಾಲ್ಲೂಕುಗಳನ್ನಷ್ಟೆ ಬರ ಪೀಡಿತ ಎಂದು ಘೋಷಿಸುವ ಬದಲು ಇಡೀ ಜಿಲ್ಲೆಯನ್ನೇ ಬರ ಪೀಡಿತ ಎಂದು ಘೋಷಣೆ ಮಾಡಬೇಕಿತ್ತು’ ಎಂದು ರೈತ ಸಂಘದ ಪದಾಧಿಕಾರಿ ವೀರಭದ್ರ ನಾಯ್ಕ ಸಿದ್ದಾಪುರ ಪ್ರತಿಕ್ರಿಯಿಸಿದರು.
‘ಸಿದ್ದಾಪುರ ತಾಲ್ಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸದಿರುವ ಬಗ್ಗೆ ಪ್ರಶ್ನಿಸಿ ಶುಕ್ರವಾರ ಸಿದ್ದಾಪುರದಲ್ಲಿ ಪ್ರತಿಭಟಿಸಲಿದ್ದೇವೆ. ಈ ವೇಳೆ ಹೊನ್ನಾವರ, ದಾಂಡೇಲಿ ತಾಲ್ಲೂಕನ್ನೂ ಪಟ್ಟಿಗೆ ಸೇರಿಸಲು ಒತ್ತಾಯಿಸುತ್ತೇವೆ. ಮಳೆ ಇಲ್ಲದೆ ಈ ತಾಲ್ಲೂಕುಗಳಲ್ಲಿ ಭತ್ತದ ಬೆಳೆ ಒಣಗಿವೆ. ಜಲಮೂಲಗಳಲ್ಲಿ ನೀರು ಬತ್ತುತ್ತಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.