ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಪೊಲೀಸ್ ಸಿಬ್ಬಂದಿಗೆ ‘ಹೊಸ ಸೂರು’ ಮರೀಚಿಕೆ

ಶಿಥಿಲ ಸ್ಥಿತಿಯಲ್ಲಿ ಪೊಲೀಸ್ ವಸತಿ ಗೃಹಗಳು: ಮೂಲ ಸೌಕರ್ಯಗಳ ಕೊರತೆ
Published 28 ಜೂನ್ 2024, 4:41 IST
Last Updated 28 ಜೂನ್ 2024, 4:41 IST
ಅಕ್ಷರ ಗಾತ್ರ

ಶಿರಸಿ: ವಸತಿ ಗೃಹಗಳ ದುರಸ್ತಿ ಹಾಗೂ ನಿರ್ವಹಣೆಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಹೊಸ ಕಟ್ಟಡ ನಿರ್ಮಿಸಲು ಇಲಾಖೆ ಮುಂದಾಗಿಲ್ಲ. ಹೀಗಾಗಿ ಕರ್ತವ್ಯ ಪೂರೈಸಿ ಮನೆಗೆ ಬಂದರೆ ಇಲ್ಲಿನ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ನೆಮ್ಮದಿ ಜೀವನ ಮರೀಚಿಕೆಯಾಗಿದೆ.

ಕೆಲ ವರ್ಷಗಳ ಹಿಂದೆ ಶಿರಸಿ ನಗರ ಪೊಲೀಸ್ ಠಾಣೆ ಹಿಂಬಾಗ ಹಾಗೂ ಜೂ ಸರ್ಕಲ್ ಸಮೀಪ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಸತಿ ಗೃಹಗಳನ್ನು ನಿರ್ಮಿಸಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗಿದೆ. ಉಳಿದಂತೆ ನಗರದ ಗ್ರಾಮೀಣ ಮತ್ತು ಮಾರುಕಟ್ಟೆ ಪೊಲೀಸ್ ಠಾಣೆ ನಡುವೆ 40 ಪೊಲೀಸ್ ಸಿಬ್ಬಂದಿ ಪುರಾತನವಾದ ಹಾಗೂ ಶಿಥಿಲಗೊಂಡ ಹಳೆಯ ವಸತಿ ಗೃಹಗಳಲ್ಲಿ ವಾಸಿಸುತ್ತಿದ್ದಾರೆ. ಈ ವಸತಿ ಗೃಹಗಳು ನಿರ್ಮಾಣಗೊಂಡು ಹಲವು ದಶಕ ಕಳೆದರೂ ದುರಸ್ತಿ ಭಾಗ್ಯ ಕಾಣದೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಆದರೂ ಇವುಗಳ ನಿರ್ವಹಣೆ ಕಾರ್ಯ ಇಲಾಖೆಯಿಂದ ಆಗಿಲ್ಲ. 

‘ಇಲ್ಲಿನ ಕೆಲ ಮನೆಯ ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಬಾಗಿಲು, ಪಕಾಸು, ರೀಪು ಗೆದ್ದಲು ತಿಂದು ಜೀರ್ಣಗೊಂಡಿವೆ. ಅಲ್ಲದೇ, ವಸತಿ ಗೃಹಗಳಿಗೆ ತೆರಳುವ ಒಳ ರಸ್ತೆಗಳು ಸಮರ್ಪಕವಾಗಿಲ್ಲ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಕಾಂಪೌಂಡ್ ಇಲ್ಲದ್ದರಿಂದ ಹಂದಿ, ನಾಯಿಗಳು ದಾಳಿಯಿಡುತ್ತಿವೆ. ಸ್ವಚ್ಛತೆಯ ಕೊರತೆಯಿಂದ ಹಾವು-ಚೇಳುಗಳ ಕಾಟವಿದೆ. ಮುರಿದ ಕಿಟಿಕಿ, ಒಡೆದ ಗಾಜು ಹೊಂದಿರುವ ಜತೆಗೆ ಹಲವು ವರ್ಷಗಳಿಂದ ಸುಣ್ಣ ಬಣ್ಣ ಕಂಡಿಲ್ಲ. ಗೋಡೆಗಳು ಪಾಚಿ ಹಿಡಿದು, ಎಲ್ಲೆಂದರಲ್ಲಿ ಬಿರುಕು ಬಿಟ್ಟಿವೆ. ಆವರಣದಲ್ಲಿ ಬೀದಿ ದೀಪಗಳಿಲ್ಲ. ವಾಹನಗಳ ಪಾರ್ಕಿಂಗ್‌ಗೆ ಜಾಗವಿಲ್ಲ.
ಪೊಲೀಸ್ ಸಂಬಳದಲ್ಲಿ ಬಾಡಿಗೆ, ವಿದ್ಯುತ್, ನೀರು ಬಿಲ್‌ಗೆ ಹೀಗೆ ಹಣ ಕಡಿತಗೊಳಿಸುವ ಇಲಾಖೆಯು ಸಮರ್ಪಕ ಸೌಲಭ್ಯ ಒದಗಿಸದಿರುವುದು ಖೇದಕರ’ ಎಂದು ಇಲ್ಲಿ ವಾಸಿಸುವ ಸಿಬ್ಬಂದಿ ಅಳಲು ತೋಡಿಕೊಂಡರು.

‘ಪೊಲೀಸ್ ಗೃಹಗಳಲ್ಲಿ ಬಿಸಿಲು ಒಂದು ರೀತಿ ಕಾಡಿದರೆ ಮಳೆಯಲ್ಲಂತೂ ಹೇಳತೀರದಾಗಿದೆ. ಮಳೆ ಬಂತೆಂದರೆ ಸಾಕು ಮನೆಯ ಅಡುಗೆ ಪಾತ್ರೆಗಳು ನೆಲ ತುಂಬ ಇಡುವಂತಾಗಿದೆ. ಅಲ್ಲಲ್ಲಿ ಒಂದಿಷ್ಟು ಜನ ತಮ್ಮ ಮನೆಯಲ್ಲಿರುವ ಬಟ್ಟೆಗಳನ್ನು, ತಗಡಿನ ಶೀಟ್‌ಗಳನ್ನು ಮನೆ ಹಂಚಿನ ಮೇಲೆ ಮಳೆ ನೀರು ಒಳಗೆ ಬರದಂತೆ ಹೊದಿಸಲಾಗಿದೆ. ಮಳೆಯಲ್ಲಿ ರಾತ್ರಿಯಂತೂ ಪುಟ್ಟ ಮಕ್ಕಳನ್ನು ಮೇಲೆತ್ತಿಕೊಂಡು ನಿದ್ದೆಯಿಲ್ಲದೆ ಹಾಗೆ ಕುಳಿತ ನಿದರ್ಶನಗಳಿವೆ. ಅಲ್ಲದೇ ಇಲ್ಲಿರುವ ಸಮಸ್ಯೆಗಳನ್ನು ಬರಿ ನೋಡಿ ಹೋಗುವಂತಾಗಿದೆ, ಹೊರತು ಇಲ್ಲಿರುವ ಸಮಸ್ಯೆಗಳನ್ನು ಸರಿಪಡಿಸುವ ಗೋಜಿಗೆ ಯಾರೋ ಬರುತ್ತಿಲ್ಲ’ ಎಂದು ಪೊಲೀಸ್‌ ಸಿಬ್ಬಂದಿ ಕುಟುಂಬಸ್ಥರ ಅಳಲಾಗಿದೆ.

ಪೊಲೀಸ್ ವಸತಿ ಗೃಹಗಳ ದುರಸ್ತಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು. ಹೊಸ ವಸತಿ ಗೃಹಗಳನ್ನು ನಿರ್ಮಿಸಿ ಶಿಥಿಲಗೊಂಡ ಕಟ್ಟಡದಲ್ಲಿ ವಾಸಿಸುತ್ತಿರುವ ಸಿಬ್ಬಂದಿಗೆ ನೀಡಬೇಕು
ಪಿ.ಎಸ್.ಹೆಗಡೆ ಸಾಮಾಜಿಕ ಕಾರ್ಯಕರ್ತ
ನೂತನ ವಸತಿ ಗೃಹ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಈಗಾಗಲೇ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಅನುಮತಿಯ ನಂತರ ಕಾರ್ಯಾನುಷ್ಠಾನ ಮಾಡಲಾಗುವುದು
ಗಣೇಶ ಕೆ.ಎಲ್ ಶಿರಸಿ ಡಿಎಸ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT