ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ರೈತರಿಗೆ ವರವಾದ ಅಡಿಕೆ ಸುಲಿಯುವ ಉದ್ಯಮ

Published 20 ಮೇ 2024, 6:04 IST
Last Updated 20 ಮೇ 2024, 6:04 IST
ಅಕ್ಷರ ಗಾತ್ರ

ಕುಮಟಾ: ಒಣ ಅಡಿಕೆ ಸುಲಿದು ಚಾಲಿ ತಯಾರಿಸುವ ಕೂಲಿಗಳ ಕೊರತೆ ನೀಗಿಸಲು ಕೆಲ ಪ್ರಗತಿಪರ ರೈತರು ಸ್ವತಃ ಯಂತ್ರ ಅಳವಡಿಸಿಕೊಂಡು ನಡೆಸುತ್ತಿರುವ ಅಡಿಕೆ ಸುಲಿಯುವ ಉದ್ಯಮಕ್ಕೆ ಸುತ್ತಲಿನ ಹಳ್ಳಿಗಳಿಂದ ನಿತ್ಯ ಲಾರಿಗಟ್ಟಲೆ ಅಡಿಕೆ ಬರುತ್ತಿದೆ.

ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಒಣಗಿದ ಅಡಿಕೆಯನ್ನು ಸುಲಿಮಣೆ ಬಳಸಿ ಕೈಯಿಂದ ಸುಲಿದು ಚಾಲಿ ಮಾಡುವ ನುರಿತ ಕೂಲಿ ಮಹಿಳೆಯರು ಮಾಡುತ್ತಿದ್ದಾರೆ. ಹೆಚ್ಚಿನ ಕೂಲಿ ಮಹಿಳೆಯರು ಈಗ ಅಡಿಕೆ ಸುಲಿಯುವುದು ಬಿಟ್ಟಿದ್ದರಿಂದ ಅಡಿಕೆ ಸುಲಿಯುವ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಕೂಲಿ ಕೊರತೆ ನೀಗಿಸಲು ತಾಲ್ಲೂಕಿನ ಕೆಲವೆಡೆ ಮಾತ್ರ ಇದ್ದ ಅಡಿಕೆ ಸುಲಿಯುವ ಉದ್ಯಮ ಈಗ ಎರಡು-ಮೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಂದರಂತೆ ವಿಸ್ತರಿಸುತ್ತಿದೆ.

‘ನಮ್ಮ ಮನೆಯ ಅಡಿಕೆ ಸುಲಿಯಲು ನುರಿತ ಕೂಲಿಯಾಳುಗಳು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಹಾಗೂ ಸುತ್ತಲಿನ ರೈತರ ಅಡಿಕೆ ಸುಲಿಯುವ ಅಗತ್ಯ ಕಂಡ ನಾವು ತಾಲ್ಲೂಕಿನ ಅಂತ್ರವಳ್ಳಿ ಹಾಗೂ ಬರಗದ್ದೆ ಗ್ರಾಮದ ಮನೆಯ ಶೆಡ್‌ನಲ್ಲಿ ಅಡಿಕೆ ಸುಲಿಯುವ ಯಂತ್ರ ಅಳವಡಿಸಿಕೊಂಡು ಕಾರ್ಯಾರಾಂಭ ಮಾಡಿದ್ದು ಅನೇಕ ರೈತರಿಗೆ ಪ್ರಯೋಜನವಾಗಿದೆ’ ಎಂದು ಕೃಷಿಕರಾದ ನಾರಾಯಣ ಭಟ್ಟ ಹಾಗೂ ಗಜು ಭಟ್ಟ ಸಹೋದರರು ತಿಳಿಸಿದರು.

‘ದೊಡ್ಡ ಯಂತ್ರಕ್ಕೆ ₹ 4 ಲಕ್ಷ, ಸಣ್ಣ ಯಂತ್ರಕ್ಕೆ ₹ 2.50 ಲಕ್ಷ ವಿನಿಯೋಗಿಸಿದ್ದೇವೆ. ಎರಡೂ ಯಂತ್ರಗಳಿಗೆ ಬೇಸಿಗೆಯಿಡಿ ಕೆಲಸ ಸಿಗುತ್ತದೆ. ಅಡಿಕೆ ಸುಲಿದು ಒಂದು ಕೆ.ಜಿ. ಚಾಲಿ ತಯಾರಿಸಿ ಗ್ರೇಡಿಂಗ್ ಮಾಡಿಕೊಡಲು ನಾವು ₹ 9 ಶುಲ್ಕ ಆಕರಿಸುತ್ತೇವೆ. ಕೈಯಿಂದ ಸುಲಿದರೆ ಸಮಾರು ಅದರ ಶುಲ್ಕ ₹ 11 ಆಗುತ್ತದೆ, ಗ್ರೇಡಿಂಗ್ ಶುಲ್ಕ ಪ್ರತ್ಯೇಕವಾಗಿದೆ. ಸದ್ಯ ಮೇ ಅಂತ್ಯದವರೆಗೆ ಸುಲಿಯುವ ಅಡಿಕೆ ಬುಕಿಂಗ್ ಆಗಿದೆ. ಎರಡೂ ಯಂತ್ರಗಳಿಂದ ನಿತ್ಯ ಸುಮಾರು 12 ಕ್ವಿಂಟಲ್‌ ಚಾಲಿ ಅಡಿಕೆ ತಯಾರಿಸುತ್ತೇವೆ’ ಎಂದರು.

ಯಂತ್ರ ಬಳಕೆಯಿಂದ ಹಲವು ಉಪಯೋಗ
ಅಡಿಕೆಗೆ ಉತ್ತಮ ದರ ಬಂದಾಗ ಸುಲಿಮಣೆ ಬಳಸಿ ಕೈಯಿಂದ ಸುಲಿದು ಒಂದೆರಡು ಕ್ವಿಂಟಲ್‌ ಚಾಲಿ ತಯಾರಿಸಲು ಕನಿಷ್ಠ ಒಂದು ವಾರ ಬೇಕಾಗುತ್ತದೆ. ಅಲ್ಲಿಯವರೆಗೆ ಅಡಿಕೆ ದರ ಕಡಿಮೆಯಾಗಿ ರೈತರಿಗೆ ಹಾನಿಯಾಗುತ್ತದೆ. ಯಂತ್ರ ಬಳಕೆ ಮಾಡಿದರೆ ಒಂದೇ ದಿನದಲ್ಲಿ ಐದಾರು ಕ್ವಿಂಟಲ್ ಚಾಲಿ ತಯಾರಿಸಬಹುದು. ಅದನ್ನು ಶುಚಿಗೊಳಿಸುವ ಕೆಲಸ ಕೂಡ ಒಂದೇ ದಿನದಲ್ಲಿ ಮುಗಿಯುತ್ತದೆ. ಕೂಲಿಯವರು ಬಂದು ವಾರಗಟ್ಟಲೆ ಅಡಿಕೆ ಸುಲಿಯುವುದರಿಂದ ಮನೆಯೆಲ್ಲ ಅಡಿಕೆ ದೂಳಿನಿಂದ ಗಲೀಜಾಗುತ್ತಿತ್ತು. ಕೂಲಿಯಾಳುಗಳಗೆ ನಿತ್ಯ ಊಟ ತಿಂಡಿ ಪೂರೈಸುವುದು ಎಲ್ಲ ಉಳಿಯುತ್ತದೆ. ಅಡಿಕೆ ಸುಲಿದ ಜಾಗಕ್ಕೆ ಬಂದು ಅಡಿಕೆ ಖರೀದಿ ಮಾಡುವ ವ್ಯಾಪಾರಿಗಳು ಇದ್ದಾರೆ’ ಎಂದು ರೈತ ನಾರಾಯಣ ನಾಯ್ಕ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT