ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಅಭಿವೃದ್ಧಿಯ ನಿರೀಕ್ಷೆಯಲ್ಲಿ ಅತ್ತಿವೇರಿ ಪಕ್ಷಿಧಾಮ

Published 15 ಫೆಬ್ರುವರಿ 2024, 6:59 IST
Last Updated 15 ಫೆಬ್ರುವರಿ 2024, 6:59 IST
ಅಕ್ಷರ ಗಾತ್ರ

ಮುಂಡಗೋಡ: ವಲಸೆ ಹಕ್ಕಿಗಳ ಹೆರಿಗೆ ಆಸ್ಪತ್ರೆ ಎಂದೇ ಗುರುತಿಸಿಕೊಂಡಿರುವ, ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಪ್ರವಾಸಿಗರನ್ನು ಇನ್ನಷ್ಟು ಸೆಳೆಯಲು ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಮುಂದಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಪ್ರತಿ ವರ್ಷ 20ಕ್ಕೂ ಹೆಚ್ಚು ದೇಶಗಳಿಂದ 80ಕ್ಕೂ ಹೆಚ್ಚು ಪ್ರಬೇಧದ ಹಕ್ಕಿಗಳು ಈ ಜಲಾಶಯದ ನಡುಗಡ್ಡೆಯಲ್ಲಿ ಸಂಸಾರ ಹೂಡುತ್ತವೆ. ಆದರೆ, ಈ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿರುವುದರಿಂದ ವಲಸೆ ಹಕ್ಕಿಗಳು ಇಲ್ಲಿಗೆ ಬರುವ ದಾರಿಯನ್ನು ಬದಲಿಸಿಕೊಂಡಿವೆ. ಶೇ.20-30ರಷ್ಟು ವಲಸೆ ಹಕ್ಕಿಗಳು ಈ ವರ್ಷ ಬಂದಿಲ್ಲ ಎಂದು ಪಕ್ಷಿವೀಕ್ಷಕರು ದಾಖಲಿಸಿದ್ದಾರೆ.

ಅಲ್ಲದೇ, ಕಳೆದ ವರ್ಷ ಬೇಸಿಗೆ ಅಂತ್ಯದ ವೇಳೆಗೆ ಇದ್ದ ನೀರಿನಷ್ಟು ಪ್ರಮಾಣವು ಸದ್ಯ ಜಲಾಶಯದಲ್ಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಅತ್ತಿವೇರಿ ಜಲಾಶಯದ ದಡದಲ್ಲಿ ದಿನೇ ದಿನೆ ನೀರು ಹಿಂದಕ್ಕೆ ಸರಿಯುತ್ತಿದ್ದರೆ, ಮತ್ತೊಂದೆಡೆ ಜಲಾಶಯದ ಆಸುಪಾಸಿನಲ್ಲಿರುವ ಕೆರೆಕಟ್ಟೆಗಳಲ್ಲಿಯೂ ನೀರು ಕಡಿಮೆ ಆಗಿದೆ.

‘ನವಂಬರ್‌ ತಿಂಗಳಿಂದ ಮೇ ಅಂತ್ಯದವರೆಗೂ ಪ್ರವಾಸಿಗರು ಮುಂಡಗೋಡ-ಯಲ್ಲಾಪುರ ಮಾರ್ಗವಾಗಿ ಗೋವಾ ಸೇರಿದಂತೆ ವಿವಿಧೆಡೆ ಪ್ರವಾಸ ಕೈಗೊಳ್ಳುತ್ತಾರೆ. ಮಾರ್ಗಮಧ್ಯೆ ಸಿಗುವ ಅತ್ತಿವೇರಿಗೂ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಪಟ್ಟಣದಿಂದ 15-18 ಕಿ.ಮೀ ಅರಣ್ಯ ಪ್ರದೇಶದಲ್ಲಿ ಕ್ರಮಿಸಿದರೂ, ಪಕ್ಷಿಗಳ ಕಲರವ ಕೇಳದೇ ನಿರಾಸೆಯಿಂದ ಮರಳಬೇಕಾಗುತ್ತದೆ. ಪ್ರಚಾರದ ಕೊರತೆ, ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸದಿರುವುದು, ಜಲಾಶಯದಲ್ಲಿ ಬೋಟ್‌ಗಳ ಮೂಲಕ ಪಕ್ಷಿಗಳನ್ನು ಸನಿಹದಿಂದ ವೀಕ್ಷಿಸುವ ಸೌಲಭ್ಯ ನಿರಂತರವಾಗಿ ಇಲ್ಲದಿರುವುದು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವಂತ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಸಂಬಂಧಿಸಿದ ಇಲಾಖೆಗಳು ಹಿಂದೆ ಬಿದ್ದಿವೆ. ಇದರಿಂದ ಪಕ್ಷಿಧಾಮಕ್ಕೆ ಮತ್ತೆ ಮತ್ತೆ ಬರಬೇಕೆನ್ನುವ ಪ್ರವಾಸಿಗರ ಸಂಖ್ಯೆ ಕುಸಿತಗೊಂಡಿದೆ’ ಎನ್ನುತ್ತಾರೆ ಯುವಬ್ರಿಗೆಡ್‌ ಮುಖಂಡ ಶ್ರೀಧರ ಉಪ್ಪಾರ.

‘ಪಕ್ಷಿಧಾಮಕ್ಕೆ ಹೋಗುವ ರಸ್ತೆಯೇ ವರ್ಷಗಟ್ಟಲೇ ದುರಸ್ತಿ ಕಾಣುವುದಿಲ್ಲ. ಜನರ ಗೌಜು ಗದ್ದಲ ಹೆಚ್ಚಾದರೆ ಪಕ್ಷಿಗಳಿಗೆ ತೊಂದರೆ ಆಗುತ್ತದೆ ಎನ್ನುವ ಅರಣ್ಯ ಸಿಬ್ಬಂದಿಯ ವಾದವನ್ನು ಒಪ್ಪಿದರೂ, ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯವನ್ನು ಒದಗಿಸದಿದ್ದರೆ ಪಕ್ಷಿಧಾಮವು ಪ್ರವಾಸಿಗರನ್ನು ಸೆಳೆಯುವುದಾದರೂ ಹೇಗೆ’ ಎಂದು ಪ್ರಶ್ನಿಸುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಹರಮಲಕರ್.‌

ಅತ್ತಿವೇರಿ ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತ ಇನ್ನಷ್ಟು ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.
ರವಿ ಹುಲಕೋಟಿ ಎಸಿಎಫ್ ಮುಂಡಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT