ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ‘ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಆಘಾತಕಾರಿ, ಖಂಡನೀಯ’

ಎ.ಯು.ಎ.ಬಿ ಪದಾಧಿಕಾರಿಗಳಿಂದ ತಿರುಗೇಟು
Last Updated 12 ಆಗಸ್ಟ್ 2020, 18:04 IST
ಅಕ್ಷರ ಗಾತ್ರ

ಕಾರವಾರ: ‘ಬಿ.ಎಸ್.ಎನ್.ಎಲ್.ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ’ ಎಂಬ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆಯನ್ನು ಬಿ.ಎಸ್.ಎನ್.ಎಲ್ನ ಎಲ್ಲ ಒಕ್ಕೂಟಗಳು ಮತ್ತು ಸಂಘದ (ಎ.ಯು.ಎ.ಬಿ) ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಸಂಘಟನೆಯ ಸಮನ್ವಯಾಧಿಕಾರಿ ಪಿ.ಅಭಿಮನ್ಯು ಈ ಬಗ್ಗೆ ಪ್ರಕಟಣೆ ನೀಡಿದ್ದು, ‘ಸಂಸದರು ಬಿ.ಎಸ್.ಎನ್.ಎಲ್.ನ ಎಲ್ಲ ಅಧಿಕಾರಿಗಳಿಗೂ ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿರುವುದು ಭಾರಿ ಆಘಾತ ತಂದಿದೆ. ದೇಶದಲ್ಲಿ ಪ್ರವಾಹ, ಚಂಡಮಾರುತ ಮುಂತಾದ ಪ್ರಾಕೃತಕ ವಿಕೋಪ ಉಂಟಾದಾಗ ಖಾಸಗಿ ದೂರವಾಣಿ ಸಂಸ್ಥೆಗಳು ಸೇವೆ ಸ್ಥಗಿತಗೊಳಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್. ಸೇವೆ ನೀಡಿದೆ. ಪರಿಹಾರ ಕಾರ್ಯಗಳಿಗೆ ನೆರವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಸರ್ಕಾರಗಳ ಬಿ.ಎಸ್.ಎನ್.ಎಲ್. ವಿರೋಧಿ ಹಾಗೂ ಖಾಸಗಿ ಆಪರೇಟರ್‌ಗಳ ಪರವಾದ ಧೋರಣೆಯೇ ಸಂಸ್ಥೆಯನ್ನು ದುರ್ಬಲಗೊಳಿಸಿದ ಅಂಶವನ್ನು ಒಪ್ಪದಿರಲು ಸಾಧ್ಯವೇ ಇಲ್ಲ. ಈ ನಡುವೆ, ದೇಶಭಕ್ತ ಬಿ.ಎಸ್.ಎನ್.ಎಲ್. ಸಿಬ್ಬಂದಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆದರೂ ಸಂಸದರು ಸಿಬ್ಬಂದಿಯನ್ನು ದೇಶದ್ರೋಹಿಗಳು ಎಂದು ಕರೆದಿರುವುದು ಸಂಸ್ಥೆಯ ಬಗ್ಗೆ ಅವರ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

‘2019ರ ಅ.23ರಂದು ಸರ್ಕಾರವು ಬಿ.ಎಸ್.ಎನ್.ಎಲ್. ಹಾಗೂ ಎಂ.ಟಿ.ಎನ್.ಎಲ್. ಪುನಶ್ಚೇತನದ ಪ್ಯಾಕೇಜ್ ಪ್ರಕಟಿಸಿತು. ಅದರಲ್ಲಿ 79 ಸಾವಿರ ಸಿಬ್ಬಂದಿಯನ್ನು ಸ್ವಯಂ ನಿವೃತ್ತಿ ಯೋಜನೆಗೆ ಎಳೆದು ತಂದಿದ್ದನ್ನು ಹೊರತು ಪಡಿಸಿ ಇತರ ಎಲ್ಲ ಆಶ್ವಾಸನೆಗಳು ಇನ್ನೂ ಪತ್ರದಲ್ಲೇ ಉಳಿದಿವೆ. ಬಿ.ಎಸ್.ಎನ್.ಎಲ್.ಗೆ ಸರ್ಕಾರವು ಹಣಕಾಸು ಮತ್ತು ತಂತ್ರಜ್ಞಾನ ನೀಡಿದೆ ಎಂದು ಸಂಸದರು ಹೇಳಿದ್ದಾರೆ. ಆದರೆ, ಸರ್ಕಾರದಿಂದ ಒಂದು ನಯಾ ಪೈಸೆಯೂ ಸಿಕ್ಕಿಲ್ಲ’ ಎಂದು ಆರೋಪಿಸಿದ್ದಾರೆ.

‘ಸರ್ಕಾರವು ಬಿ.ಎಸ್.ಎನ್.ಎಲ್.ಗೆ 4ಜಿ ಸ್ಪೆಕ್ಟ್ರಂ ಅನ್ನು ಹಂಚಿಕೆ ಮಾಡಿತ್ತು. ಇದರ ಆಧಾರದಲ್ಲಿ ಸೇವೆ ನೀಡಲು ಪರಿಕರಗಳನ್ನು ಪೂರೈಕೆಗೆ ಈ ವರ್ಷ ಮಾರ್ಚ್‌ನಲ್ಲಿ ₹ 9 ಸಾವಿರ ಕೋಟಿ ಮೌಲ್ಯದ ಟೆಂಡರ್ ಅನ್ನು ಸಂಸ್ಥೆ ಪ್ರಕಟಿಸಿತ್ತು. ಆದರೆ, ಮರುಕ್ಷಣವೇ ಸರ್ಕಾರವು ಈ ಟೆಂಡರ್ ಅನ್ನು ರದ್ದು ಮಾಡಿತ್ತು. ಇದರಿಂದ 4ಜಿ ಸ್ಪೆಕ್ಟ್ರಂನಿಂದ ವಂಚಿತವಾಗಬೇಕಾಯಿತು’ ಎಂದು ದೂರಿದ್ದಾರೆ.

‘ಈ ಎಲ್ಲ ವಿಚಾರಗಳು, ಸಿಬ್ಬಂದಿಗೆ ಕೆಲಸ ಮಾಡಲು ಮನಸ್ಸಿಲ್ಲ ಎಂಬುದು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ಸಂಸದರು ಮುಂದಿನ ದಿನಗಳಲ್ಲಿ ಇಂಥ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಡಬಾರದು’ ಎಂದು ಅವರು ಆಗ್ರಹಿಸಿದ್ದಾರೆ.

ಆ.10ರಂದು ಕುಮಟಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತಕುಮಾರ ಹೆಗಡೆ, ಬಿ.ಎಸ್.ಎನ್.ಎಲ್‌.ನಲ್ಲಿ ದೇಶದ್ರೋಹಿಗಳೇ ತುಂಬಿದ್ದಾರೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT