ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ವರವಾದ ನರೇಗಾ ಯೋಜನೆ: ಶಾಲೆ ಅಂಗಳದಲ್ಲರಳಿದ ಬ್ಯಾಸ್ಕೆಟ್ ಬಾಲ್ ಅಂಕಣ

Published 9 ಡಿಸೆಂಬರ್ 2023, 5:57 IST
Last Updated 9 ಡಿಸೆಂಬರ್ 2023, 5:57 IST
ಅಕ್ಷರ ಗಾತ್ರ

ಕಾರವಾರ: ಮಹಾನಗರಗಳ ಖಾಸಗಿ ಶಾಲೆ, ಕಾಲೇಜುಗಳಿಗೆ ಸೀಮಿತವಾದಂತಿದ್ದ ಬ್ಯಾಸ್ಕೆಟ್ ಬಾಲ್ ಕ್ರೀಡೆಯನ್ನು ಹಳ್ಳಿ ಮಕ್ಕಳಿಗೂ ಪರಿಚಯಿಸಬೇಕು ಎಂಬ ಹಂಬಲ ಕೈಗೂಡುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ನರೇಗಾ ಯೋಜನೆ ವರವಾಗಿದೆ.

ನರೇಗಾ ಯೋಜನೆ ಅಡಿ ಗ್ರಾಮೀಣ ಭಾಗದ ಶಾಲೆ, ಪ್ರೌಢಶಾಲೆಗಳ ಅಂಗಳದಲ್ಲಿ ಆಟದ ಮೈದಾನ ಅಥವಾ ಆಟದ ಅಂಕಣ ನಿರ್ಮಿಸುವ ಯೋಜನೆ ಜಿಲ್ಲೆಯಲ್ಲಿಯೂ ಸಾಕಾರಗೊಳ್ಳುತ್ತಿದೆ. ಜಿಲ್ಲೆಯ ಸುಮಾರು 60ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಆಟದ ಅಂಕಣಗಳು ನಿರ್ಮಾಣ ಹಂತದಲ್ಲಿವೆ.

ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಪರಿಚಿತವಾಗಿದ್ದ ಬ್ಯಾಸ್ಕೆಟ್ ಬಾಲ್ ಕ್ರೀಡೆಯ ಅಂಕಣ ನಿರ್ಮಿಸುತ್ತಿರುವುದು ಗಮನಸೆಳೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ನರೇಗಾ ಅಡಿ ಜಿಲ್ಲೆಯ 15 ಕಡೆಗಳಲ್ಲಿ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈ ಪೈಕಿ ಏಳು ಕಡೆಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಇನ್ನು ಎಂಟು ಕಡೆಗಳಲ್ಲಿ ಅಂಕಣ ನಿರ್ಮಾಣ ಹಂತದಲ್ಲಿದೆ.

‘ಮುಂಡಗೋಡ ತಾಲ್ಲೂಕಿನ ಮಳಗಿ, ಸಿದ್ದಾಪುರದ ಕಾನಗೋಡ, ಅಂಕೋಲಾದ ಅಗಸೂರು, ಹಳಿಯಾಳದ ಅರ್ಲವಾಡಾ, ಹೊನ್ನಾವರದ ಚಂದಾವರ, ಜೊಯಿಡಾದ ರಾಮನಗರದಲ್ಲಿ ಸುಸಜ್ಜಿತ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಾಣಗೊಂಡಿದೆ. ನರೇಗಾ ನಿಯಮದಂತೆ ಪ್ರತಿ ಅಂಕಣಕ್ಕೆ ಸರಾಸರಿ ₹5.50 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ನರೇಗಾ ಯೋಜನೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನರೇಗಾ ಅಡಿ ಗ್ರಾಮ ಪಂಚಾಯ್ತಿಗಳು ಸ್ಥಳೀಯ ಬೇಡಿಕೆ ಆಧರಿಸಿ ಬೇರೆ ಬೇರೆ ಆಟದ ಅಂಕಣ ಅಭಿವೃದ್ಧಿಪಡಿಸಲು ಅವಕಾಶವಿದೆ. ₹2.80 ಲಕ್ಷ ವೆಚ್ಚದಲ್ಲಿ ಕಬಡ್ಡಿ ಅಂಕಣ, ₹5,67 ಲಕ್ಷದಲ್ಲಿ ಓಟದ ಪಥ, ₹3.60 ಲಕ್ಷ ವೆಚ್ಚದಲ್ಲಿ ಕೊಕ್ಕೊ ಅಂಕಣ, ₹5.40 ಲಕ್ಷ ವೆಚ್ಚದಲ್ಲಿ ವಾಲಿಬಾಲ್ ಅಂಕಣ ನಿರ್ಮಿಸಲು ಅವಕಾಶವಿದೆ. ಆದರೆ ಶೇ40ರಷ್ಟು ಸಾಮಗ್ರಿ ಮತ್ತು ಶೇ60ರಷ್ಟು ಕಾರ್ಮಿಕ ಕೆಲಸ ಕಡ್ಡಾಯವಾಗಿರುತ್ತದೆ’ ಎಂದು ವಿವರಿಸಿದರು.

‘ನರೇಗಾ ಯೋಜನೆಯಲ್ಲಿ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಿಸಲು ಅವಕಾಶವಿದ್ದ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರ ಜತೆಯೂ ಚರ್ಚಿಸಲಾಯಿತು. ಅವರ ಬೇಡಿಕೆಯಂತೆ ಕಾನಗೋಡಿನ ಪ್ರೌಢಶಾಲೆ ಆವರಣದಲ್ಲಿ ಅಂಕಣ ನಿರ್ಮಿಸಲಾಗಿದ್ದು ಸದುಪಯೋಗವಾಗುತ್ತಿದೆ’ ಎಂದು ಕಾನಗೋಡ ಗ್ರಾಮ ಪಂಚಾಯ್ತಿ ಪಿಡಿಒ ಪ್ರೀತಿ ಶೆಟ್ಟಿ ತಿಳಿಸಿದರು.

ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ನಿರ್ಮಿಸಲಾಗಿರುವ ಬ್ಯಾಸ್ಕೆಟ್ ಬಾಲ್ ಅಂಕಣ
ಜೊಯಿಡಾ ತಾಲ್ಲೂಕಿನ ರಾಮನಗರದಲ್ಲಿ ನಿರ್ಮಿಸಲಾಗಿರುವ ಬ್ಯಾಸ್ಕೆಟ್ ಬಾಲ್ ಅಂಕಣ
ಗ್ರಾಮೀಣ ಭಾಗದ ಮಕ್ಕಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ಜತೆಗೆ ಕಾರ್ಮಿಕರಿಗೆ ಕೆಲಸ ನೀಡಲು ನರೇಗಾ ಯೋಜನೆ ಸದ್ಬಳಕೆ ಆಗುತ್ತಿದೆ. ಜನರ ಬೇಡಿಕೆ ಆಧರಿಸಿ ಇನ್ನಷ್ಟು ಹೆಚ್ಚು ಆಟದ ಮೈದಾನ ನಿರ್ಮಿಸಲು ಯೋಜನೆ ರೂಪಿಸಲಾಗುವುದು
ಈಶ್ವರ ಕಾಂದೂ ಜಿಲ್ಲಾ ಪಂಚಾಯ್ತಿ ಸಿಇಒ
ಸೂಕ್ತ ತರಬೇತಿ ಅಗತ್ಯ
‘ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಿಸಿದರೆ ಸಾಲದು. ಗ್ರಾಮೀಣ ಭಾಗದಲ್ಲಿ ಬ್ಯಾಸ್ಕೆಟ್ ಬಾಲ್ ಕ್ರೀಡೆಯ ಬಗ್ಗೆ ಹೆಚ್ಚು ಅರಿವಿಲ್ಲ. ಅಂಕಣ ಬಳಕೆ ಸಲುವಾಗಿ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಕೇವಲ ಒಂದೆರಡು ಶಾಲೆ ಗಮನದಲ್ಲಿಟ್ಟು ಅಂಕಣ ನಿರ್ಮಿಸದೆ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಯೋಜನೆ ಇರಬೇಕು. ಬ್ಯಾಸ್ಕೆಟ್ ಬಾಲ್ ತರಬೇತಿ ನೀಡುವ ದೈಹಿಕ ಶಿಕ್ಷಣ ಶಿಕ್ಷಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲು ಬಳಕೆ ಮಾಡಿಕೊಳ್ಳಬೇಕು. ಇದರಿಂದ ಹಳ್ಳಿ ಭಾಗದ ಮಕ್ಕಳಿಗೂ ಅನುಕೂಲವಾಗುತ್ತದೆ’ ಎಂದು ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT