ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲಗಿ ಈಗ ಎದ್ದಿರುವ ಅನಂತಕುಮಾರಗೆ ಬಿಜೆಪಿ ಟಿಕೆಟ್ ನೀಡಲಿ: ಮಧು ಟೀಕೆ

Published 20 ಜನವರಿ 2024, 10:33 IST
Last Updated 20 ಜನವರಿ 2024, 10:33 IST
ಅಕ್ಷರ ಗಾತ್ರ

ಶಿರಸಿ: ನಾಲ್ಕು ವರ್ಷಗಳ ಕಾಲ ಮಲಗಿ ಈಗ ಎದ್ದಿರುವ ಸಂಸದ ಅನಂತಕುಮಾರ ಹೆಗಡೆಗೆ ಈ ಬಾರಿಯ ಲೋಕಸಭೆಗೆ ಬಿಜೆಪಿ ಟಿಕೆಟ್ ನೀಡಲಿ. ನಾವೂ ಅವರ ಉಪಚಾರಕ್ಕೆ ಬರುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದರು.

ಶನಿವಾರ ನಗರದಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆರಿಸಿ ಬಂದ ಮೇಲೆ ನಾಲ್ಕು ವರ್ಷ ಸುಮ್ಮನೆ ಕುಳಿತುಕೊಳ್ಳುವುದು, ಬಳಿಕ ಜನರ ಮುಂದೆ ಬಂದು ಬಾಯಿಗೆ ಬಂದಂತೆ ಮಾತನಾಡುವುದು ಅನಂತಕುಮಾರ ಹೆಗಡೆ ಚಾಳಿ. ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಅವರಿಗೇ ದ್ರೋಹ ಮಾಡಿದ ಮೊದಲ ವ್ಯಕ್ತಿ ಅವರು. ನಾಲ್ಕು ವರ್ಷ ಜನರ ಮರೆತು ಮನೆಯಲ್ಲಿ ಮಲಗಿದ್ದವರು ಇಡೀ ದೇಶದಲ್ಲಿ ಯಾರೂ ಇಲ್ಲ. ಅಂಥವರನ್ನು ರಾಜಕೀಯ ವ್ಯವಸ್ಥೆಯಿಂದ ಧಿಕ್ಕಾರ ಮಾಡಲೇಬೇಕು. ಈ ಬಾರಿ ಟಿಕೆಟ್ ನೀಡಿದರೆ ಜನರೇ ಅವರನ್ನು ನಿಶ್ಚಿತವಾಗಿ ಬದಲಾವಣೆ ಮಾಡುತ್ತಾರೆ. ಅವರ ಸೋಲಿಗಾಗಿ ನಾವೂ ಪ್ರಚಾರ ಮಾಡುತ್ತೇವೆ ಎಂದರು.

ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ. ಚುನಾವಣೆಯಲ್ಲಿ ನಾವೂ ಸಹ ಸೋತಿದ್ದೆವು. ಆದರೆ, ಈ ರೀತಿ ಸಂಪ್ರದಾಯ, ಮಾನ ಮರ್ಯಾದೆ ಬಿಟ್ಟು ಹೋಗುವುದು ಸರಿಯಲ್ಲ. ನಮ್ಮ ದೇಶದಲ್ಲಿ ಎಲ್ಲ ಜಾತಿ ಧರ್ಮದವರೂ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಈ ದೇಶದ ಸಂಸ್ಕೃತಿಯಲ್ಲಿ ಬದುಕಲು ಅದೃಷ್ಟ ಮಾಡಿದ್ದೇವೆ. ಅನಂತಕುಮಾರ ಹೆಗಡೆ ಸಂಸ್ಕೃತಿ ಇಲ್ಲದೇ ಮಾತನಾಡುತ್ತಿದ್ದು, ಅವರು ಮನುಷ್ಯನೇ ಅಲ್ಲ. ಯಾರು ಸಂಸ್ಕೃತಿ ಬೇಡ ಎನ್ನುತ್ತಾರೆ ಅವರು ಬಾಳಲು ಸಾಧ್ಯವಿಲ್ಲ. ಸಂಸ್ಕೃತಿ ಇಲ್ಲದ, ಮಾನ ಇಲ್ಲದ ವ್ಯಕ್ತಿ ಅವರು. ಆತ ಮನುಷ್ಯನೇ ಅಲ್ಲ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲೇಬೇಕು. ಈ ಮೂಲಕ ಎಲ್ಲರಿಗೂ ಸಮಾನತೆ ನೀಡಬೇಕು. ಕಾನೂನು ಗೆಲ್ಲಬೇಕು ಎಂದು ಹೇಳಿದರು.

ಶಿಕ್ಷಕರಿಗೆ ಮುಂಭಡ್ತಿಯನ್ನು ಶಾಲಾ ಅವಧಿಯಲ್ಲಿ ನೀಡುವುದರಿಂದ ಶಿಕ್ಷಕರ ಕೊರತೆ ಉಂಟಾಗುತ್ತದೆ ಎಂಬ ಮಾತೂ ಕೇಳಿ ಬಂದಿದೆ. ಈ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT