ಕಾರವಾರ: ‘ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ನಿಗದಿತ ಮಾನವ ದಿನಗಳ ಗುರಿ ಸಾಧನೆಯತ್ತ ಗಮನಹರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರು ಮತ್ತು ತಾಂತ್ರಿಕ ವರ್ಗದವರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ‘ಮಾನವ ದಿನಗಳ ಪ್ರಮಾಣ ಕಡಿಮೆ ಇರುವ ಗ್ರಾಮ ಪಂಚಾಯತಿಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಮಳೆಗಾಲವೂ ಮುಗಿದಿದ್ದು ಅಗತ್ಯ ಕಾಮಗಾರಿಗಳನ್ನು ಮುಂದುವರೆಸಬೇಕು’ ಎಂದು ಹೇಳಿದರು.
‘ಯೋಜನೆ ಅಡಿಯಲ್ಲಿ ಆದ್ಯತೆ ಮೇಲೆ ಕೈಗೊಳ್ಳಬಹುದಾದ ಶಾಲೆ ಕಾಂಪೌಂಡ್ ನಿರ್ಮಾಣ, ಶೌಚಾಲಯ, ಆಟದ ಮೈದಾನ, ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಅವುಗಳನ್ನು ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಬೇಕು’ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರಿಂ ಆಸಾದಿ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ನಾಯ್ಕ, ಶಿವಾಜಿ ಬೊಬಲಿ, ಕಿರಣ ಜೋತೆಪ್ಪನವರ, ಎ.ಎಂ.ವಿಘ್ನೇಶ್, ಇತರರು ಇದ್ದರು.