ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ ಬಾಕಿ ಮೊತ್ತ ಬಿಡುಗಡೆಗೆ ಆಗ್ರಹ: ಗುತ್ತಿಗೆದಾರರಿಂದ ಪ್ರತಿಭಟನಾ ಮೆರವಣಿಗೆ

Last Updated 27 ಅಕ್ಟೋಬರ್ 2021, 14:56 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದಾದ್ಯಂತ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಸುಮಾರು ₹ 22 ಸಾವಿರ ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಒತ್ತಾಯಿಸಿದೆ.

ಗುತ್ತಿಗೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮತ್ತು ರಾಜ್ಯ ಸಂಘದ ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು.

ಮಾಲಾದೇವಿ ಮೈದಾನದಿಂದ ಮೆರವಣಿಗೆಯಲ್ಲಿ ಬಂದ ಗುತ್ತಿಗೆದಾರರು, ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದರು. ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿ, ಫಲಕಗಳನ್ನು ಪ್ರದರ್ಶಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ಯಾಮಸುಂದರ ಎಂ.ಭಟ್, ‘ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ನೊಂದಾಯಿತ ಸಿವಿಲ್ ಗುತ್ತಿಗೆದಾರರಿದ್ದಾರೆ. ಸರ್ಕಾರಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತಿದ್ದಾರೆ. ಆದರೂ ಸರ್ಕಾರದ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್. ಮತ್ತು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ನೀಡಲಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದಂತಾಗುತ್ತಿದೆ’ ಎಂದು ದೂರಿದರು.

‘ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯಾಗಿದೆ. ಸಿಮೆಂಟ್, ಕಬ್ಬಿಣ, ಡಾಂಬರು ಸೇರಿದಂತೆ ವಿವಿಧ ಕಚ್ಚಾವಸ್ತುಗಳ ಬೆಲೆ, ಕಾರ್ಮಿಕ ವೇತನ ಹೆಚ್ಚಳವಾಗಿದೆ. ಹಾಗಾಗಿ ಮಾರ್ಗದರ್ಶಿ ದರ (ಎಸ್.ಆರ್. ರೇಟ್) ಪರಿಷ್ಕರಿಸಬೇಕು. ಈಗ ನಿರ್ವಹಿಸುತ್ತಿರುವ ಕಾಮಗಾರಿಗಳಿಗೆ ಶೇ 15ರಷ್ಟು ಹೆಚ್ಚುವರಿ ದರ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, ‘ಗುತ್ತಿಗೆದಾರರು ಮಾಡಿದ ಸಾಲದ ಕಂತು ಪಾವತಿಸಲಾಗುತ್ತಿಲ್ಲ. ಕಾರ್ಮಿಕರು ಉದ್ಯೋಗವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಆರ್ಥಿಕ ಸ್ಥಿತಿಗಳ ಅರಿವು ನಮಗಿದೆ. ಹಾಗಾಗಿ ಹಂತ ಹಂತವಾಗಿಯಾದರೂ ಹಣ ಬಿಡುಗಡೆ ಮಾಡಬೇಕು. ಈ ಬಗ್ಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗೂ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

‘₹ 900 ಕೋಟಿ ಬಾಕಿ’:

ಉತ್ತರ ಕನ್ನಡದಲ್ಲಿ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ₹ 900 ಕೋಟಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಿದೆ. ಲೋಕೋಪಯೋಗಿ ಇಲಾಖೆಯಿಂದ ₹ 300 ಕೋಟಿ, ನೀರಾವರಿ ಇಲಾಖೆಯಿಂದ ₹ 200 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ₹ 100 ಕೋಟಿ ಬರಬೇಕಿದೆ ಎಂದು ಗುತ್ತಿಗೆದಾರರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಎಸ್.ಸಂಕಾ ಗೌಡ ಶಾನಿ, ದಿನೇಶ್, ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪ್ರಮುಖರಾದ ಶಶಿಧರ, ಧೀರು ಶಾನುಭಾಗ, ವಿ.ಎನ್.ಹೆಗಡೆ, ರಮೇಶ ಮೊಕಾಶಿ, ಎಂ.ಪಿ.ನಾಯ್ಕ, ದೀಪಕ್ ಕುಡಾಲಕರ್, ಮಾಧವ ನಾಯಕ, ಸತೀಶ ಇದ್ದರು.

----

* ಕೆ.ಆರ್.ಐ.ಡಿ.ಎಲ್.ಗೆ ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ ನೀಡುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲೇಬೇಕು.

- ಡಿ.ಕೆಂಪಣ್ಣ, ಅಧ್ಯಕ್ಷ, ರಾಜ್ಯ ಗುತ್ತಿಗೆದಾರರ ಸಂಘ.

-------

ಪ್ರಮುಖ ಬೇಡಿಕೆಗಳು

* ಟೆಂಡರ್ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು

‌* ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು

* ರಾಜಧನ ನಿಯಮವನ್ನು ಸರಳಗೊಳಿಸಬೇಕು

* ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಇರುವ ಅಧಿಕಾರಿಗಳು, ನೌಕರರ ವರ್ಗಾವಣೆ

* ಜಿ.ಎಸ್.ಟಿ ಗೊಂದಲವನ್ನು ಪರಿಹರಿಸಬೇಕು

* ಗುತ್ತಿಗೆದಾರರಿಗೆ ವರ್ಷಪೂರ್ತಿ ಮರಳು ಸಿಗುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT