ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಮೈನವಿರೇಳಿಸಿದ ಸಮುದ್ರ ಕಾರ್ಯಾಚರಣೆ

Published 3 ಫೆಬ್ರುವರಿ 2024, 14:08 IST
Last Updated 3 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ಕಾರವಾರ: ಆಳಸಮುದ್ರದಲ್ಲಿ ಆಯತಪ್ಪಿ ಬಿದ್ದ ಮೀನುಗಾರನೊಬ್ಬನನ್ನು ನಾಲ್ವರು ಯೋಧರು ಸಣ್ಣ ದೋಣಿ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೆ ಅದನ್ನು ದೂರದಿಂದ ನೋಡುತ್ತಿದ್ದ ಜನರು ನಿಬ್ಬೆರಗಾಗಿ ಚಪ್ಪಾಳೆ ತಟ್ಟುತ್ತಿದ್ದರು.

ಇದು ಯಾವುದೋ ಸಿನಿಮಾವೊಂದರ ದೃಶ್ಯವಲ್ಲ. ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಕಾರವಾರದಿಂದ 12 ನಾಟಿಕಲ್ ಮೈಲು ದೂರದಲ್ಲಿ ಭಾರತೀಯ ತಟರಕ್ಷಕ ದಳ (ಇಂಡಿಯನ್ ಕೋಸ್ಟ್ ಗಾರ್ಡ್) ಶನಿವಾರ ನಡೆಸಿದ ಅಣಕು ಕಾರ್ಯಾಚರಣೆಯ ದೃಶ್ಯ.

ತಟರಕ್ಕ ಪಡೆಯ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ತಟರಕ್ಷಕ ದಳವು ತನ್ನ ಕಾರ್ಯಾಚರಣೆಯ ಕಾರ್ಯವಿಧಾನ ವಿವರಿಸುವ ಅಣಕು ಪ್ರದರ್ಶನವನ್ನು ಆಯೋಜಿಸಿತ್ತು. ‘ಐಸಿಜಿಎಸ್ ವಿಕ್ರಮ್’ ನೇತೃತ್ವದಲ್ಲಿ ‘ಸಾವಿತ್ರಿಬಾಯಿ ಫುಲೆ’, ‘ಕಸ್ತೂರಬಾ ಗಾಂಧಿ’ ಎಂಬ ಎರಡು ಸಣ್ಣ ಹಡಗು ಮತ್ತು ‘ಚಾರ್ಲಿ–448’ ಎಂಬ ಇಂಟರಸೆಪ್ಟರ್ ಬೋಟ್ ಬಳಸಿ 130ಕ್ಕೂ ಹೆಚ್ಚು ಜನರನ್ನು ಆಳ ಸಮುದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ತಟರಕ್ಷಕ ದಳವು ತಾನು ನಡೆಸುವ ವಿವಿಧ ಕಾರ್ಯಾಚರಣೆಗಳ ಝಲಕ್ ತೋರಿಸಿತು.

ದೇಶದ ಸಮುದ್ರ ವ್ಯಾಪ್ತಿಯಲ್ಲಿ ಆಗಂತುಕರು ನುಗ್ಗಿದರೆ ಅವರನ್ನು ತಡೆದು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಲಾಯಿತು. ಸಣ್ಣ ಹಡಗುಗಳಿಂದ ಸ್ಪೀಡ್ ಬೋಟ್ ಮೂಲಕ ಸಮುದ್ರಕ್ಕೆ ಇಳಿದು ಉಗ್ರರತ್ತ ನುಗ್ಗಿ ಅವರನ್ನು ಎದುರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

ಸಮುದ್ರಕ್ಕೆ ಬಿದ್ದ ಮೀನುಗಾರನೊಬ್ಬ ಬಣ್ಣದ ಬಾಂಬ್ ಸಿಡಿಸಿ ರಕ್ಷಣೆಗೆ ಮೊರೆ ಇಡುತ್ತಿದ್ದರೆ, ಆತನನ್ನು ಯೋಧರು ಸುರಕ್ಷಿತವಾಗಿ ಹಡಗಿಗೆ ಏರಿಸುವ ದೃಶ್ಯ ಕಂಡು ಜನರು ನಿಬ್ಬೆರಗಾಗುವ ಜತೆಗೆ ಕೋಸ್ಟ್ ಗಾರ್ಡ್ ಯೋಧರ ಸಾಹಸಕ್ಕೆ ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿದರು. ಗುಂಡು ಸಿಡಿಸುವ ಜತೆಗೆ, ಹಡಗುಗಳಿಗೆ ಬೆಂಕಿ ಬಿದ್ದರೆ ಆರಿಸುವ ಕಾರ್ಯಾಚರಣೆಯನ್ನೂ ತೋರಿಸಲಾಯಿತು.

‘ತಟರಕ್ಷಕ ದಳವು ಗಸ್ತು ತಿರುಗುವ ಕೆಲಸ ಮಾಡುತ್ತದೆ ಎಂಬ ತಪ್ಪು ಕಲ್ಪನೆ ಇತ್ತು. ಅಣಕು ಕಾರ್ಯಾಚರಣೆ ವೀಕ್ಷಿಸಿದ ಬಳಿಕ ನೌಕಾದಳದಂತೆ ಸಮುದ್ರ ವ್ಯಾಪ್ತಿಯಲ್ಲಿ ನಡೆಸುವ ರಕ್ಷಣಾ ಚಟುವಟಿಕೆಯಲ್ಲಿ ತಟರಕ್ಷಕ ದಳದ ಪಾತ್ರವು ಎಷ್ಟು ಮಹತ್ವವಿದೆ ಎಂಬುದು ಅರಿವಾಯಿತು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಮಹೇಂದ್ರಕುಮಾರ ಪ್ರತಿಕ್ರಿಯಿಸಿದರು.

ಭಾರತೀಯ ತಟರಕ್ಷಕ ದಳದ ಹಡಗು (ಐಸಿಜಿಎಸ್) ‘ವಿಕ್ರಮ್’ ಮೇಲೆ ನಿಂತು ಅಣಕು ಕಾರ್ಯಾಚರಣೆ ವೀಕ್ಷಿಸುತ್ತಿರುವ ಜನರು–ಪ್ರಜಾವಾಣಿ ಚಿತ್ರ
ಭಾರತೀಯ ತಟರಕ್ಷಕ ದಳದ ಹಡಗು (ಐಸಿಜಿಎಸ್) ‘ವಿಕ್ರಮ್’ ಮೇಲೆ ನಿಂತು ಅಣಕು ಕಾರ್ಯಾಚರಣೆ ವೀಕ್ಷಿಸುತ್ತಿರುವ ಜನರು–ಪ್ರಜಾವಾಣಿ ಚಿತ್ರ
ಸಣ್ಣ ಗಾತ್ರದ ಸ್ಪೀಡ್ ಬೋಟ್‍ನಲ್ಲಿ ತಟರಕ್ಷಕ ದಳದ ಯೋಧರು ಆಳಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು
ಸಣ್ಣ ಗಾತ್ರದ ಸ್ಪೀಡ್ ಬೋಟ್‍ನಲ್ಲಿ ತಟರಕ್ಷಕ ದಳದ ಯೋಧರು ಆಳಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT