ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ಸಂಪರ್ಕ ರಸ್ತೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ: ತಡೆಹಿಡಿದ ಅಧಿಕಾರಿಗಳು

ಬೊಗರಿಬೈಲ್‍ನಲ್ಲಿ ನಿರ್ಮಾಣವಾಗದ ಸಂಪರ್ಕ ರಸ್ತೆಯಿಂದ ಜನರಿಗೆ ಪಡಿಪಾಟಲು
Published 16 ಏಪ್ರಿಲ್ 2024, 4:41 IST
Last Updated 16 ಏಪ್ರಿಲ್ 2024, 4:41 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಬೊಗರಿಬೈಲ-ಉಪ್ಪಿನಪಟ್ಟಣ ಧಕ್ಕೆ ನಡುವಿನ ಅಘನಾಶಿನಿ ನದಿಯ ₹18 ಕೋಟಿ ಮೊತ್ತದ ಕೆ.ಆರ್.ಡಿ.ಸಿ.ಎಲ್ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸದಿರುವುದನ್ನು ಪ್ರತಿಭಟಿಸಿ ಸುತ್ತಲಿನ ನಾಗರಿಕರೇ ದೇಣಿಗೆ ಸಂಗ್ರಹಿಸಿ, ಶ್ರಮದಾನ ಮೂಲಕ ಸಂಪರ್ಕ ರಸ್ತೆ ನಿರ್ಮಿಸಲು ಮುಂದಾದಾಗ ಅಧಿಕಾರಿಗಳು ತಡೆದ ಘಟನೆ ನಡೆದಿದೆ.

ಸುಮಾರು ಆರು ವರ್ಷಗಳ ಹಿಂದೆ ಸೇತುವೆ ಕಾಮಗಾರಿಯನ್ನು ಡಿ.ಎನ್.ಆರ್ ಇನ್‍ಫ್ರಾಸ್ಟ್ರಕ್ಚರ್ ಕಂಪನಿ ಪಡೆದುಕೊಂಡಿತ್ತು. ಒಂದು ವರ್ಷದ ಹಿಂದೆ ಸೇತುವೆ ಕಾಮಗಾರಿ ಮುಗಿದರೂ ಗುತ್ತಿಗೆದಾರ ಕಂಪನಿ ಸಂಪರ್ಕ ರಸ್ತೆ ನಿರ್ಮಿಸದ ಪರಿಣಾಮ ಜನರು ಪರದಾಡುವಂತಾಗಿದೆ. ಸಂಪರ್ಕ ರಸ್ತೆಗಾಗಿ ಸುರಿದ ಮಣ್ಣಿನ ಏರು-ತಗ್ಗುಗಳ ಮೇಲೆ ನಿತ್ಯ ನೂರಾರು ವಾಹನಗಳು ಓಡಾಡುತ್ತಿವೆ. ಕಲ್ಲಬ್ಬೆ, ಅಳಕೋಡ, ಮೂರೂರು, ಸಂತೆಗುಳಿ ಗ್ರಾಮ ಪಂಚಾಯ್ತಿ ಸಂಪರ್ಕಿಸುವ ಈ ಸೇತುವೆ ಶಿರಸಿ-ಹೊನ್ನಾವರ ಜೋಡಿಸುವ ಅತಿ ಸಮೀಪದ ಕೊಂಡಿಯೂ ಆಗಿದೆ.

ಸಂಪರ್ಕ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿ ಹಣ ಸಂಗ್ರಹಿಸಿ ತಾವೇ ರಸ್ತೆ ನಿರ್ಮಿಸಿಕೊಳ್ಳಲು ನಿರ್ಧರಿಸಿದ್ದರು. ವಿಷಯ ಅರಿತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಮನವೊಲಿಸಿ ರಸ್ತೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸದಂತೆ ಮನವಿ ಮಾಡಿದರು.

‘ಸೇತುವೆ ನಿರ್ಮಾಣಕ್ಕೆ ಮಣ್ಣು, ಕಲ್ಲು, ಕಬ್ಬಿಣ ಸಾಗಿಸಲು ಭಾರಿ ವಾಹನ ಓಡಾಡಿ ಊರಿನ ರಸ್ತೆ ಹಾಳಾಗಿದೆ. ಸಂಪರ್ಕ ರಸ್ತೆ ನಿರ್ಮಿಸಲು ಸುರಿದ ಮಣ್ಣಿನ ಧೂಳಿನಿಂದ ರಸ್ತೆಯಂಚಿನ ಹತ್ತಾರು ಮನೆಗಳವರು ಒಂದು ವರ್ಷದಿಂದ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕುಡಿಯವ ನೀರಿಗೆ ತೊಂದರೆ ಇದ್ದರೂ ಧೂಳು ನಿವಾರಿಸಲು ನಿತ್ಯ ರಸ್ತೆಗೆ ನೀರು ಹಾಕುತ್ತಿದ್ದೇವೆ’ ಎಂದು ಸ್ಥಳೀಯರಾದ ಜಗದೀಶ ನಾಯ್ಕ, ಶ್ರೀರಮಣ ನಾಯ್ಕ ಹೇಳಿದರು.

‘ಸೇತುವೆ ನಿರ್ಮಾಣವಾಗಿ ವರ್ಷ ಕಳೆದರೂ ಸಂಪರ್ಕ ರಸ್ತೆ ನಿರ್ಮಾಣವಾಗದಿದ್ದಾಗ ಸುತ್ತಲಿನ ಕಲ್ಲಬ್ಬೆ, ಅಳಕೋಡ ಗ್ರಾಮ ಪಂಚಾಯ್ತಿಯ ಜನರು ಸೇರಿ ದೇಣಿಗೆ ಸಂಗ್ರಹಿಸಿ ವಾಹನಗಳ ಸುಗಮ ಓಡಾಟಕ್ಕೆ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಿದ್ದೆವು. ಆದರೆ, ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿ ಅಧಿಕಾರಿಗಳು ತಡೆದಿದ್ದಾರೆ’ ಎಂದು ಬೊಗರಿಬೈಲ ಗ್ರಾಮದ ವಕೀಲ ಜಯಂತ ನಾಯ್ಕ ಹೇಳಿದರು.

‘ಸೇತುವೆ ಕಾಮಗಾರಿ ಟೆಂಡರ್‌ನಲ್ಲಿ ಸಂಪರ್ಕ ರಸ್ತೆ ಸೇರಿದ್ದರೂ ಗುತ್ತಿಗೆದಾರ ಕಂಪನಿಯವರು ಈಗ ಸಂಪರ್ಕ ರಸ್ತೆ ನಿರ್ಮಾಣ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಅವರಿಗೆ ನೊಟೀಸ್ ನೀಡಲಾಗುವುದು. ಕಾಮಗಾರಿ ಬೇರೆ ಕಂಪನಿಗೆ ಟೆಂಡರ್ ನೀಡಿ, ಮಳೆಗಾಲದಲ್ಲಿ ಸೇತುವೆ ಬಳಕೆಗೆ ಅನುಕೂಲವಾಗುವಂತೆ ಸಂಪರ್ಕ ರಸ್ತೆ ದುರಸ್ತಿ ಮಾಡಿ ಕೊಡಲಾಗುವುದು’ ಎಂದು ಕೆ.ಆರ್.ಡಿ.ಸಿ.ಎಲ್ ಮುಖ್ಯ ಎಂಜಿನಿಯರ್ ವಸಂತ ನಾಯ್ಕ ಪ್ರತಿಕ್ರಿಯಿಸಿದ್ದಾರೆ

‘ಜಿಲ್ಲಾಧಿಕಾರಿಗೆ ದೂರು’

‘ಸಂಪರ್ಕ ರಸ್ತೆ ನಿರ್ಮಾಣವಾಗದಿದ್ದರೆ ಸ್ಥಳೀಯರು ಮತದಾನ ಬಹಿಷ್ಕಾರ ಮಾಡುವ ಬಗ್ಗೆಯೂ ಚರ್ಚಿಸಿದ್ದೆವು. ಇದನ್ನು ತಿಳಿದು ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸ್ವಲ್ಪ ದಿನ ಮಾತ್ರ ಕಾಯುತ್ತೇವೆ. ಪರಿಸ್ಥಿತಿ ಸುಧಾರಿಸದಿದ್ದರೆ ಜಿಲ್ಲಾಧಿಕಾರಿ ಅವರಿಗೂ ದೂರಲಾಗುವುದು’ ಎಂದರು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣಾನಂದ ವೆರ್ಣೇಕರ್ ಪ್ರಗತಿಪರ ರೈತ ಎಸ್.ಎಂ.ಭಟ್ಟ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ವಿನಾಯಕ ಅಂಬಿಗ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT