ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಗಳ ಮಾತೃಸ್ಥಾನದಲ್ಲಿ ಸಂವಿಧಾನ

‘ಸಂವಿಧಾನ ದಿನಾಚರಣೆ’ ಉದ್ಘಾಟಿಸಿದ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್
Last Updated 26 ನವೆಂಬರ್ 2022, 15:49 IST
ಅಕ್ಷರ ಗಾತ್ರ

ಕಾರವಾರ: ‘ಸಂವಿಧಾನವು ಎಲ್ಲ ಕಾನೂನುಗಳಿಗೆ ಮಾತೃ ಸ್ಥಾನದಲ್ಲಿದೆ. ಅದರಡಿಯಲ್ಲಿ ಸಾವಿರಾರು ಕಾಯ್ದೆಗಳಿವೆ. ಯಾವುದೇ ಕಾನೂನನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಹಕ್ಕು ಚಲಾವಣೆಗೆ ಬರುತ್ತದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಹೇಳಿದರು.

‘ಸಂವಿಧಾನ ದಿನಾಚರಣೆ’ಯ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಶನಿವಾರ ಆಯೋಜಿಸಿದ, ಮೀನುಗಾರರಿಗೆ ಕಾನೂನು ಸೇವೆಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘ಮೀನುಗಾರರು ಬಹಳ ಶ್ರಮಿಜೀವಿಗಳು. ಆದರೆ, ಜೀವನದಲ್ಲಿ ಯಶಸ್ಸಿಗೆ ಶ್ರಮವೊಂದೇ ಸಾಲದು, ವೈಯಕ್ತಿಕ ಮತ್ತು ಹಣಕಾಸು ಶಿಸ್ತು ಕೂಡ ಮುಖ್ಯ. ಅದರೊಂದಿಗೆ ಕಾನೂನಿನ ಜ್ಞಾನವೂ ಬೇಕು. ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿ ಹೊಂದಿರಬೇಕು. ಮೂಢ ನಂಬಿಕೆಗಳನ್ನು ಬದಿಗಿಟ್ಟು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸಂಘಟಿತರಾಗಿ ಕೆಲಸ ಮಾಡಿದಾಗ ಸಾಧನೆ ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ‘ಜಿಲ್ಲೆಯಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸರ್ಕಾರವು ಹತ್ತಾರು ಯೋಜನೆಗಳನ್ನು ಜಾರಿ ಮಾಡಿದೆ. ಆಳ ಸಮುದ್ರ ಮೀನುಗಾರಿಕೆಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತಿದೆ. ಇಂಥ ಯೋಜನೆಗಳನ್ನು ಬಳಸಿಕೊಂಡರೆ ಜಿಲ್ಲೆಯು ಮೀನುಗಾರಿಕೆಯಲ್ಲಿ ಮುಂಚೂಣಿಗೆ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಉಚಿತ ಕಾನೂನು ಸೇವೆಗಳ ಮಾಹಿತಿ ನೀಡಲಾಯಿತು. ವಿದ್ಯಾನಿಧಿ ಯೋಜನೆಗೆ ನೋಂದಣಿ, ಉಚಿತ ವೈದ್ಯಕೀಯ ತಪಾಸಣೆ, ಆಧಾರ್ ಹಾಗೂ ಪಿಂಚಣಿ ನೋಂದಣಿ, ಮತದಾರರ ಗುರುತಿನ ಚೀಟಿ ನೋಂದಣಿ, ಕಟ್ಟಡ ಕಾರ್ಮಿಕ ನೋಂದಣಿ, ಅಸಂಘಟಿತ ಕಾರ್ಮಿಕರಿಗೆ ‘ಇ– ಶ್ರಮ’ ಯೋಜನೆಗೆ ನೋಂದಣಿ ಮಾಡಲಾಯಿತು.

ನ್ಯಾಯಾಧೀಶರಾದ ಶಿವಾಜಿ ಎ.ನಾಲವಾಡೆ, ಬಿ.ಗಣೇಶ, ರೇಣುಕಾ ಡಿ.ರಾಯ್ಕರ್, ಶ್ರೀನಿವಾಸ ಪಾಟೀಲ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರವಿಂದ ಜಿ.ನಾಯಕ, ತಹಶೀಲ್ದಾರ್ ಎನ್.ಎಫ್.ನರೋನಾ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ಮೀನುಗಾರಿಕೆ ಇಲಾಖೆ ಉ‍ಪ ನಿರ್ದೇಶಕಿ ಕವಿತಾ ಆರ್.ಕೆ, ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದಪ್ಪ ಬಿಳಗಿ ಇದ್ದರು.

ವಕೀಲ ಆರ್.ಎಸ್.ಹೆಗಡೆ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಜೆ.ರೊಡ್ರಗೀಸ್ ಮತ್ತು ಮಹಾಂತೇಶ ಎಸ್.ದರಗದ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT