ಕಾರವಾರ: 2022ರ ಜುಲೈ ಬಳಿಕ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ವರದಿ ಆಧರಿಸಿ ಪರಿಷ್ಕೃತ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಯಿತು.
ನಿವೃತ್ತ ನೌಕರರ ಸಂಘದ ಕಚೇರಿ ಎದುರಿನಿಂದ ಹೊರಟ ಮೆರವಣಿಗೆಯು ಮುಖ್ಯ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ತಲುಪಿತು. ಅಲ್ಲಿ ಸೇರಿದ ನಿವೃತ್ತ ನೌಕರರು ತಮಗೆ ಪರಿಷ್ಕೃತ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಡಳಿತದ ಪರವಾಗಿ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಪೂಜಾರ ಮನವಿ ಸ್ವೀಕರಿಸಿದರು.
‘2022ರ ಜುಲೈ 1 ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದವರಿಗೆ ಹಳೆಯ ವೇತನ ಆಯೋಗದ ವರದಿ ಆಧರಿಸಿ ಪಿಂಚಣಿ, ಇನ್ನಿತರ ಸೌಲಭ್ಯ ನೀಡುವ ಬದಲು ಪರಿಷ್ಕೃತ ವರದಿ ಆಧರಿಸಿಯೇ ಪಿಂಚಣಿ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಸಂಘದ ಅಧ್ಯಕ್ಷ ವಿ.ಎಂ.ಹೆಗಡೆ, ಕಾರ್ಯದರ್ಶಿ ಅನಿಲ ನಾಯ್ಕ, ಗೌರವಾಧ್ಯಕ್ಷ ಶಿವಾನಂದ ಕದಂ, ಉಪಾಧ್ಯಕ್ಷ ಸತೀಶ ಗೋಸಾವಿ, ಖಜಾಂಚಿ ವಿ.ಆರ್.ರಾಣೆ, ಮೋಹನ ನಾಯ್ಕ, ಇತರರು ಇದ್ದರು.