ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಜಿಲ್ಲಾ ರಂಗಮಂದಿರ ತೆರವಿಗೆ ಸಲಹೆ

Published 15 ಫೆಬ್ರುವರಿ 2024, 7:05 IST
Last Updated 15 ಫೆಬ್ರುವರಿ 2024, 7:05 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲಾಮಟ್ಟದ ಸರ್ಕಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುತ್ತಿದ್ದ ಜಿಲ್ಲಾ ರಂಗಮಂದಿರ ತೆರವುಗೊಳಿಸಲು ಕ್ಷಣಗಣನೆ ಆರಂಭಗೊಂಡಿದೆ!

ಕಟ್ಟಡ ಶಿಥಿಲಗೊಂಡಿದ್ದು ನವೀಕರಣ ಸಾಧ್ಯವಿಲ್ಲ ಎಂದು ತಾಂತ್ರಿಕ ಸಮಿತಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಹಳೆಯ ಕಟ್ಟಡ ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ.

ಸುಮಾರು 38 ವರ್ಷಗಳ ಹಿಂದೆ ನಿರ್ಮಾಣಗೊಂಡ ಜಿಲ್ಲಾ ರಂಗಮಂದಿರ ಕಟ್ಟಡವನ್ನು 2011–12ರಲ್ಲಿ ನವೀಕರಣ ಮಾಡಲಾಗಿತ್ತು. ಲಕ್ಷಾಂತರ ರೂಪಾಯಿ ವ್ಯಯಿಸಿ ನವೀಕರಣಗೊಳಿಸಿದ್ದರೂ ಇಷ್ಟು ಬೇಗ ಕಟ್ಟಡವನ್ನೇ ತೆರವುಗೊಳಿಸುವ ಸ್ಥಿತಿ ಬಂದಿರುವುದು ಕಲಾವಿದರ ವಲಯದಲ್ಲಿ ಬೇಸರ ತಂದಿದೆ.

ಏಕಕಾಲಕ್ಕೆ 600 ಜನರು ಕುಳಿತುಕೊಳ್ಳಬಹುದಾದಷ್ಟು ಆಸನ ವ್ಯವಸ್ಥೆ, ದೊಡ್ಡ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಹಾಗೂ ಗ್ರಂಥಾಲಯವನ್ನು ಜಿಲ್ಲಾ ರಂಗಮಂದಿರವು ಒಳಗೊಂಡಿದೆ.

ಕಟ್ಟಡದ ಚಾವಣಿಗೆ ಅಳವಡಿಸಿದ್ದ ಶೀಟ್‍ಗಳು ಹಾಳಾಗಿದ್ದರಿಂದ ಮಳೆಗಾಲದಲ್ಲಿ ಸೋರುತ್ತಿತ್ತು. ಹೀಗಾಗಿ, ಕಳೆದ ಜೂನ್‍ನಿಂದ ಕಾರ್ಯಕ್ರಮಗಳ ಆಯೋಜನೆ ಸ್ಥಗಿತಗೊಳಿಸಲಾಗಿತ್ತು. ಮಳೆಗಾಲ ಮುಗಿದ ಬಳಿಕ ಬೆರಳೆಣಿಕೆಯಷ್ಟು ಸಭೆ, ಕಾರ್ಯಕ್ರಮಗಳು ಮಾತ್ರ ನಡೆದಿದ್ದವು.

‘ರಂಗಮಂದಿರ ದುರಸ್ತಿ ಕಾರ್ಯ ನಡೆಸಿ, ನವೀಕರಿಸುವ ಬಗ್ಗೆ ಯೋಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಪಿಡಬ್ಲ್ಯೂಡಿ ಎಂಜಿನಿಯರ್ ನೇತೃತ್ವದ ತಾಂತ್ರಿಕ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಲಾಗಿತ್ತು. ಸಮಿತಿಯು ಕಟ್ಟಡ ಶಿಥಿಲಗೊಳ್ಳುವ ಹಂತದಲ್ಲಿದ್ದು, ನವೀಕರಣ ಕಷ್ಟ ಎಂಬ ವರದಿ ನೀಡಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ರಾಮಚಂದ್ರ ತಿಳಿಸಿದರು.

‘ಜಿಲ್ಲಾ ರಂಗಮಂದಿರ ಕಟ್ಟಡವು ಶಿಥಿಲಗೊಳ್ಳುವ ಹಂತ ತಲುಪಿದ್ದರಿಂದ ಸದ್ಯಕ್ಕೆ ಇಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ರಂಗಮಂದಿರ ನಿರ್ವಹಣಾ ಸಮಿತಿ ನಿರ್ಣಯಿಸಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ’ ಎಂದರು.

ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಸುಮಾರು ₹10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
‘ಮಾದರಿ ರಂಗಮಂದಿರ ನಿರ್ಮಾಣವಾಗಲಿ’
‘ರಾಜ್ಯದ ಗಡಿಭಾಗದಲ್ಲಿರುವ ಕಾರವಾರದಲ್ಲಿ ಸಾಂಸ್ಕೃತಿಕ ಕಲಾತ್ಮಕ ಚಟುವಟಿಕೆಗೆ ಪೂರಕವಾಗಿರುವ ಜಿಲ್ಲಾ ರಂಗಮಂದಿರ ಶಿಥಿಲಾವಸ್ಥೆಗೆ ತಲುಪಿದೆ ಎಂಬುದು ಬೇಸರದ ವಿಚಾರ. ನಿರ್ಮಾಣಗೊಂಡು ಹೆಚ್ಚು ಸಮಯವಾಗದಿದ್ದರೂ ಕಟ್ಟಡವು ಬಳಕೆಗೆ ಬಾರದಿರುವುದು ವ್ಯವಸ್ಥೆಯ ದೋಷಕ್ಕೆ ಹಿಡಿದ ಕೈಗನ್ನಡಿ’ ಎಂದು ಕಲಾವಿದರಾದ ಅನಿಲ ಮಡಿವಾಳ ದೀಪಕ ಹಳದಿಪುರಕರ ಇತರರು ಬೇಸರ ವ್ಯಕ್ತಪಡಿಸಿದ್ದಾರೆ. ‘ಹೊಸದಾಗಿ ಕಟ್ಟಡ ನಿರ್ಮಿಸಲು ವಿಳಂಬ ಮಾಡಬಾರದು. ಹೊಸ ರಂಗಮಂದಿರವು ಕಲೆ ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾಗಿರಬೇಕು. ರಾಜ್ಯದಲ್ಲೇ ಮಾದರಿ ರಂಗಮಂದಿರವಾಗಿ ರೂಪುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT