ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ದರ್ಶನ | ‘ಗ್ಯಾರಂಟಿ’ ವಿರುದ್ಧ ದೂರು: ಸಮಸ್ಯೆ ಪರಿಹಾರಕ್ಕೆ 10 ದಿನದ ಗಡುವು

Published 1 ಡಿಸೆಂಬರ್ 2023, 15:16 IST
Last Updated 1 ಡಿಸೆಂಬರ್ 2023, 15:16 IST
ಅಕ್ಷರ ಗಾತ್ರ

ಕಾರವಾರ: ‘ಗೃಹಲಕ್ಷ್ಮಿ’, ‘ಅನ್ನಭಾಗ್ಯ’ ಯೋಜನೆಯ ಮೊದಲ ಕಂತಿನ ಹಣವೇನೋ ಬಂದಿದೆ. ಆದರೆ, ಎರಡು, ಮೂರನೆ ಕಂತಿನ ಹಣ ಬಂದಿಲ್ಲ ಎಂಬ ದೂರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಸಾಗರ ದರ್ಶನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೇಳಿಬಂತು.

ಶಿರಸಿಯ ಮಹಿಳೆಯೊಬ್ಬರು ತನಗೆ ಪಡಿತರ ಚೀಟಿ ಇಲ್ಲ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ನನಗೆ ಯೋಜನೆಯ ಅಡಿ ಹಣ ಬರುವಂತೆ ಮಾಡಿಕೊಡಿ ಎಂದು ಕೇಳಿಕೊಂಡರು. ಇದೇ ವೇಳೆ ಸಮಸ್ಯೆಯ ಕುರಿತು ಗಮನಸೆಳೆದ ಕಾಂಗ್ರೆಸ್ ಮುಖಂಡ ಕೆ.ಶಂಭು ಶೆಟ್ಟಿ, ‘ಗ್ಯಾರಂಟಿ ಯೋಜನೆಯಲ್ಲಿ ಹಣ ಬಾರದಿರುವುದರ ಕುರಿತಾಗಿಯೆ ನಿತ್ಯ ಶಾಸಕರ ಕಚೇರಿಗೆ ಹಲವು ದೂರು ಬರುತ್ತಿವೆ. ಈ ಬಗ್ಗೆ ಗಮನಹರಿಸಿ. ಸರ್ಕಾರದ ಜನಪರ ಯೋಜನೆ ಜನರಿಗೆ ತಲುಪಿಸಲು ಮುತುವರ್ಜಿ ವಹಿಸಿ’ ಎಂದು ಮನವಿ ಮಾಡಿದರು.

ಶಾಸಕ ಸತೀಶ ಸೈಲ್, ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರ ಪಟ್ಟಿಯ ಜತೆಗೆ ಯೋಜನೆಯಡಿ ಕಂತಿನ ಹಣ ಪಡೆಯುತ್ತಿರುವವರ ಮಾಹಿತಿಯನ್ನು ವಾರದೊಳಗೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿಗೆ ಸೂಚಿಸಿದರು.

ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಆಗಿಲ್ಲ. ಸೌಕರ್ಯಗಳು ಸಕಾಲಕ್ಕೆ ಸಿಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘದವರು ಮನವಿ ಮಾಡಿದರು. ಬಿಣಗಾದಲ್ಲಿ ಹೆದ್ದಾರಿಗೆ ಸರ್ವಿಸ್ ರಸ್ತೆ ನಿರ್ಮಿಸಲು ವಿಷ್ಣು ಹರಿಕಾಂತ ಒತ್ತಾಯಿಸಿದರು. ಅಮದಳ್ಳಿಯಲ್ಲಿ ತಟರಕ್ಷಕ ದಳದ ವಸತಿ ನಿಲಯ ಕಟ್ಟಡ ಕಾಮಗಾರಿಯಿಂದ ಎದುರಾದ ತೊಂದರೆಯ ಕುರಿತು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ ಗೌಡ ಗಮನಸೆಳೆದರು.

ಕಂದಾಯ ಇಲಾಖೆಗೆ ಸಂಬಂಧಿಸಿದ 44, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 24, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 13 ಸೇರಿದಂತೆ ಸುಮಾರು 168 ಅರ್ಜಿಗಳು ಸಲ್ಲಿಕೆಯಾದವು.

‘ಜನರು ನೀಡಿರುವ ದೂರುಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಹತ್ತು ದಿನದೊಳಗೆ ಸಮಸ್ಯೆ ಇತ್ಯರ್ಥಪಡಿಸಬೇಕು. ಸ್ಪಂದಿಸಲು ಆಲಸ್ಯ ತೋರುವ ಅಧಿಕಾರಿಗಳು ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.

‘ಜನರು ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೆ ನಾವೂ ಆಸಕ್ತಿಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ’ ಎಂದು ಶಾಸಕ ಸತೀಶ ಸೈಲ್ ಹೇಳಿದರು.

‘ಜಿಲ್ಲಾಕೇಂದ್ರ ದೂರವಿರುವುದರಿಂದ ಜಿಲ್ಲೆಯ ಘಟ್ಟದ ಮೇಲಿನ ಭಾಗದ ಜನರಿಗೆ ಬರಲು ಸಮಸ್ಯೆ ಆಗಬಹುದು. ಹೀಗಾಗಿ ಶಿರಸಿ ಭಾಗದಲ್ಲಿಯೂ ಜಿಲ್ಲಾಮಟ್ಟದ ಜನತಾ ದರ್ಶನ ನಡೆಸಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಇತರ ಅಧಿಕಾರಿಗಳು ಇದ್ದರು.

ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಹೊನ್ನಾವರದ ಪ್ರಭಾತ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಭೂಮಿಗೆ ಮಂಜೂರಾದ ಜಾಗದ ಹಕ್ಕುಪತ್ರವನ್ನು ಸಮುದಾಯದ ಪ್ರಮುಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಾಸಕರಾದ ಭೀಮಣ್ಣ ನಾಯ್ಕ ಸತೀಶ ಸೈಲ್ ಹಸ್ತಾಂತರಿಸಿದರು
ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಹೊನ್ನಾವರದ ಪ್ರಭಾತ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಭೂಮಿಗೆ ಮಂಜೂರಾದ ಜಾಗದ ಹಕ್ಕುಪತ್ರವನ್ನು ಸಮುದಾಯದ ಪ್ರಮುಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಾಸಕರಾದ ಭೀಮಣ್ಣ ನಾಯ್ಕ ಸತೀಶ ಸೈಲ್ ಹಸ್ತಾಂತರಿಸಿದರು
20 ವರ್ಷದ ಸಮಸ್ಯೆಗೆ ಎರಡು ತಿಂಗಳಲ್ಲಿ ಪರಿಹಾರ
ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಮೊದಲ ಜನತಾ ದರ್ಶನದಲ್ಲಿ ಅಂಕೋಲಾದ ಬೊಗ್ರಿಬೈಲ್ ಹೊನ್ನಾವರ ಪಟ್ಟಣದ ಪ್ರಭಾತ ನಗರದ ಕ್ರಿಶ್ಚಿಯನ್ ಸಮುದಾಯದ ಜನರು ಸ್ಮಶಾನ ಭೂಮಿಗೆ ಜಾಗ ಸಿಗದ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ಎರಡು ದಶಕಗಳಿಂದ ಜಾಗಕ್ಕೆ ಪ್ರಯತ್ನಿಸುತ್ತಿದ್ದರೂ ಪರಿಹರ ಸಿಗುತ್ತಿಲ್ಲ ಎಂದು ಬೇರಿಸಿದ್ದರು. ಅವರಿಗೆ ತಲಾ ನಾಲ್ಕು ಗುಂಟೆ ಜಮೀನು ಮಂಜೂರು ಮಾಡಿ ಹಕ್ಕುಪತ್ರ ನೀಡಲಾಯಿತು. ಅಲ್ಲದೆ ಉದ್ಯೋಗಕ್ಕಾಗಿ ಮನವಿ ಮಾಡಿದ್ದ ಮೂವರಿಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿ ಕೆಲಸದ ನೇಮಕಾತಿ ಪತ್ರ ನೀಡಲಾಯಿತು. ಕುಮಟಾದ ಆಡಳಿತ ಸೌಧ ಆವರಣದಲ್ಲಿ ಅಂಗವಿಕಲರೊಬ್ಬರಿಗೆ ಮಿಲ್ಕ್ ಪಾರ್ಲರ್ ನಡೆಸಲು ಅನುಮತಿ ಪತ್ರ ನೀಡಲಾಯಿತು.
₹180 ಕೋಟಿ ವೆಚ್ಚದಲ್ಲಿ ಆಸ್ಪತ್ರೆ
‘ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾರವಾರದಲ್ಲಿರುವ ಕ್ರಿಮ್ಸ್ ಸಂಸ್ಥೆಯನ್ನು ₹180 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕ್ಯಾಥಲ್ಯಾಬ್ ನರರೋಗ ವಿಭಾಗ ಸೇರಿದಂತೆ ಪ್ರಮುಖ ಸೌಲಭ್ಯಗಳನ್ನು ಒಳಗೊಂಡ ಯೋಜನೆ ಇದಾಗಿದ್ದು ವಿಧಾನಸಭೆ ಅಧಿವೇಶನದಲ್ಲಿಯೂ ಈ ವಿಷಯದ ಕುರಿತು ಚರ್ಚಿಸಲಾಗುವುದು’ ಎಂದು ಶಾಸಕ ಸತೀಶ ಸೈಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT