ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಬರಿದಾಗುತ್ತಿರುವ ಕೆರೆಗಳು: ಅವಧಿಗೂ ಮುನ್ನ ಕೆರೆ ಬೇಟೆ ಹಬ್ಬ

Published 15 ಜನವರಿ 2024, 4:33 IST
Last Updated 15 ಜನವರಿ 2024, 4:33 IST
ಅಕ್ಷರ ಗಾತ್ರ

ಶಿರಸಿ: ಬೇಸಿಗೆಯ ಅಂತ್ಯದಲ್ಲಿ ನಡೆಯುತ್ತಿದ್ದ ಗ್ರಾಮೀಣ ಕೆರೆ ಬೇಟೆ ಹಬ್ಬ ಈ ಬಾರಿ ಜನವರಿ ಎರಡನೇ ವಾರದಲ್ಲಿಯೇ ಆರಂಭಗೊಂಡಿದೆ. ಇದು ತಾಲ್ಲೂಕಿನ ಪೂರ್ವ ಭಾಗದ ಜಲಕ್ಷಾಮದ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಪೂರ್ವ ಭಾಗದ ಬನವಾಸಿ ಹೋಬಳಿಯ ಕಂಡ್ರಾಜಿ, ಕೊರ್ಲಕಟ್ಟಾ, ಹಳ್ಳಿಕೊಪ್ಪ, ಹೆಬ್ಬತ್ತಿ, ಕಲಕರಡಿ, ನರೂರು, ರಾಮಾಪುರ, ಕಿರವತ್ತಿ, ದಾಸನಕೊಪ್ಪ, ಬೀಳೂರು, ಮಾಳಂಜಿ, ಕಾಯಗುಡ್ಡೆ ಮೊದಲಾದ ಹಳ್ಳಿಗಳಲ್ಲಿ ಏಪ್ರಿಲ್- ಮೇ ತಿಂಗಳ ವಿಶೇಷ ಸಂಭ್ರಮ ಕೆರೆ ಬೇಟೆ ಹಬ್ಬ. ಪರಸ್ಪರ ಸಾಮರಸ್ಯ ಮೂಡಿಸುವ ಮತ್ಸ್ಯ ಶಿಕಾರಿಯಲ್ಲಿ ಮಾಂಸಾಹಾರಿ ಸಮುದಾಯಗಳ ಎಲ್ಲ ಜನರೂ ಸಡಗರದಿಂದ ಭಾಗವಹಿಸುತ್ತಾರೆ. ಕೆರೆಯಲ್ಲಿ ನೀರಿನ ಸಂಗ್ರಹ ತಳ ಕಾಣುವ ಸಂದರ್ಭ ಆಧರಿಸಿ ಈ ಕೆರೆ ಬೇಟೆ ಹಬ್ಬದ ದಿನಾಂಕ ನಿಗದಿಯಾಗುತ್ತದೆ.

ದನ–ಕರುಗಳು, ಪ್ರಾಣಿ ಪಕ್ಷಿಗಳಿಗೆ ಜಲದಾಹ ನೀಗಿಸುತ್ತಿದ್ದ ಹಲಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಕೊಪ್ಪ–ಸೋನಾಪುರ ಕೆರೆ ಬೇಸಿಗೆ ಬರುವ ಪೂರ್ವದಲ್ಲೇ ಬಹುತೇಕ ಬತ್ತುವ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೆರೆ ಬೇಟೆ ಹಬ್ಬ ನಡೆಯಿತು. ಹಳ್ಳಿಕೊಪ್ಪ ಸೇರಿದಂತೆ ಸುತ್ತಲಿನ ಊರುಗಳು ನೂರಾರು ಉತ್ಸಾಹಿಗಳು ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.

'ಮುಂಗಾರಿನಲ್ಲಿ ಸರಿಯಾಗಿ ಮಳೆ ಬಿದ್ದಿದ್ದರೆ ಮಾರ್ಚ್ ತಿಂಗಳ ಕೊನೆಯಲ್ಲಿ ಕೆರೆಯಲ್ಲಿ ಮತ್ಸ್ಯ ಬೇಟೆ ನಡೆಯುತ್ತಿತ್ತು. ಈ ಬಾರಿ ಪೂರ್ವ ಭಾಗದಲ್ಲಿ ಮಳೆಯ ಕೊರತೆ, ಬರಗಾಲದ ಪರಿಣಾಮ ಜನವರಿಯಲ್ಲೇ ಕೆರೆ ನೀರು ಗಣನೀಯ ಇಳಿಕೆಯಾಗಿದೆ. ಹೀಗಾಗಿ ಮುಂಚಿತವಾಗಿ ಕೆರೆ ಬೇಟೆ ನಡೆಯಿತು. ಇಷ್ಟು ಬೇಗ ಕೆರೆ ಬೇಟೆ ನಡೆಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು' ಎನ್ನುತ್ತಾರೆ ಹಳ್ಳಿಕೊಪ್ಪ‍ದ ದಿನಕರ ಗೌಡ. 

'ಪೂರ್ವ ಭಾಗದ ಇನ್ನುಳಿದ ಕೆರೆಗಳಲ್ಲೂ ನೀರಿನ ಪ್ರಮಾಣ ತೀರಾ ಕಡಿಮೆಯಿದೆ. ಮೇ ಕೊನೆಯಲ್ಲಿ ಕೆರೆ ಬೇಟೆ ನಡೆಯುತ್ತಿದ್ದ ದೊಡ್ಡ ಕೆರೆಗಳಲ್ಲಿ ಈ ಬಾರಿ ಏಪ್ರಿಲ್ ಕೊನೆಯ ವೇಳೆಗೆ ಹಬ್ಬ ನಡೆಯಬಹುದು. ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಪ್ರತಿ ವಾರ ಒಂದಿಲ್ಲೊಂದು ಕೆರೆಯಲ್ಲಿ ಸಾಮೂಹಿಕ ಮತ್ಸ್ಯ ಶಿಕಾರಿ ನಡೆಯುತ್ತಿತ್ತು. ಈ ಬಾರಿ ಫೆಬ್ರುವರಿಯಿಂದಲೇ ಇದು ಶುರುವಾಗುವ ಸಾಧ್ಯತೆಯಿದೆ' ಎಂದು ಅವರು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

'ಕೆರೆ ಬೇಟೆ ಕೇವಲ ಮನರಂಜನೆ ಮಾತ್ರವಲ್ಲ. ಊರಿನ ಅಭಿವೃದ್ಧಿಗೆ ಆದಾಯದ ಮೂಲವೂ ಆಗಿದೆ. ₹500 ನಿಗದಿಪಡಿಸಿ ಮೂರು ಖೂಣಿಗಳನ್ನು ನೀಡಲಾಗುತ್ತದೆ. ಅವರು ಅದನ್ನು ಸಂಬಂಧಿಗಳು, ಸ್ನೇಹಿತರು, ಆತ್ಮೀಯರಿಗೆ ನೀಡಬಹುದು, ಖೂಣಿ ಹಾಕುವ ಪರಿಣತರಿಗೆ ಅದೃಷ್ಟದೇವಿ ಒಲಿಯುತ್ತಾಳೆ. ಕೆಲವರಿಗೆ 1-2 ಕೆ.ಜಿ ಮೀನು ಸಿಕ್ಕರೆ ಇನ್ನು ಕೆಲವರಿಗೆ 3-4 ಕೆ.ಜಿ ಮೀನು ಸಿಗುತ್ತದೆ' ಎಂದು ಗ್ರಾಮಾಭಿವೃದ್ಧಿ ಸಮಿತಿಯ ಪದಾಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು. 

ಕೆರೆಯಲ್ಲಿ ನೀರು ಕಡಿಮೆಯಿದ್ದರೂ ಮೀನು ಸಂತತಿ ವೃದ್ಧಿಗೆ ಕೊರತೆಯಾಗಿಲ್ಲ. ಖೂಣಿಗೆ ಭರಪೂರ ಮೀನು ಸಿಕ್ಕಿವೆ. ಆದರೆ ಅವಧಿಗೆ ಮೊದಲೇ ಕೆರೆಬೇಟೆ ನಡೆಸಿದ್ದರಿಂದ ಮೀನುಗಳು ಚಿಕ್ಕದಿವೆ.
ಚಂದ್ರಶೇಖರ ಗೌಡ, ಗ್ರಾಮಸ್ಥ
ಕೆರೆ ಬೇಟೆ ಹಬ್ಬದಲ್ಲಿ ಮೀನು ಹಿಡಿದು ಸಂಭ್ರಮಿಸಿದ ಯುವಕ
ಕೆರೆ ಬೇಟೆ ಹಬ್ಬದಲ್ಲಿ ಮೀನು ಹಿಡಿದು ಸಂಭ್ರಮಿಸಿದ ಯುವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT