ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಬಿಸಿಲಿಗೆ ಕಂಗೆಟ್ಟ ‘ಹಸಿರು’ ನೆಲ

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ಕಾಳಜಿ ವಹಿಸಲು ಜಿಲ್ಲಾಡಳಿತ ಸೂಚನೆ
Published 8 ಏಪ್ರಿಲ್ 2024, 8:33 IST
Last Updated 8 ಏಪ್ರಿಲ್ 2024, 8:33 IST
ಅಕ್ಷರ ಗಾತ್ರ

ಕಾರವಾರ: ಅತಿ ಹೆಚ್ಚು ಮಳೆ ಬೀಳುವ, ಹಚ್ಚ ಹಸಿರಿನ ಪ್ರಾಕೃತಿಕ ಸಿರಿ ಸಂಪತ್ತು ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಈ ಬಾರಿಯ ಸೆಕೆಗೆ ತತ್ತರಿಸಿದೆ. ಕರಾವಳಿ, ಮಲೆನಾಡು ಭಾಗದ ಜನರು ಬಿಸಿಲ ಝಳಕ್ಕೆ ಹೈರಾಣಾಗಿದ್ದಾರೆ.

ಅರಬ್ಬಿ ಸಮುದ್ರದ ಕಾವಿನಿಂದ ಆರ್ದೃತೆ ಹೆಚ್ಚಿರುವ ಕರಾವಳಿಯಲ್ಲಿ ಸದ್ಯ ಸರಾಸರಿ 35–37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ವಿಪರೀತ ಸೆಕೆಯ ಅನುಭವ ಜನರಿಗೆ ಆಗುತ್ತಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸರಾಸರಿ 38–40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು ಇದು ಈವರೆಗಿನ ದಾಖಲೆ ಮಟ್ಟದ ತಾಪಮಾನವಾಗಿದೆ.

ಈಚೆಗಷ್ಟೆ ಶಿರಸಿ ತಾಲ್ಲೂಕಿನ ಹುಸರಿ ಗ್ರಾಮದಲ್ಲಿ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಶಿರಸಿ ಸೇರಿದಂತೆ ಮಲೆನಾಡು ಭಾಗದ ಹಳ್ಳಿಗಳು ಬೇಸಿಗೆಯಲ್ಲೂ ತಂಪು ವಾತಾವರಣ ಹೊಂದಿರುತ್ತಿದ್ದ ಕಾಲವೊಂದಿತ್ತು. ಆದರೆ, ಈ ಬಾರಿ ಬಿಸಿಲ ಝಳ ಜಿಲ್ಲೆಯಾದ್ಯಂತ ಬಾಧಿಸಲಾರಂಭಿಸಿದೆ. ಕರಾವಳಿ ಭಾಗಕ್ಕೆ ಸರಿಸಮನಾಗಿ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿರುವ ಪ್ರದೇಶಗಳಲ್ಲಿ ಸೆಕೆ ವಾತಾವರಣ ಕಂಡುಬರುತ್ತಿದೆ.

ವಿಪರೀತ ಸೆಕೆಯಿಂದ ಆರೋಗ್ಯ ಸಮಸ್ಯೆಯಲ್ಲಿ ಏರುಪೇರಾಗುತ್ತಿದೆ. ಚರ್ಮ ತುರಿಕೆ ಸೇರಿದಂತೆ ಬಿಸಿಲ ಝಳಕ್ಕೆ ಎದುರಾಗುತ್ತಿರುವ ಕಾಯಿಲೆಗಳ ಜತೆಗೆ ಅಧಿಕ ಉಷ್ಣಾಂಶದ ಪರಿಣಾಮ ಆಹಾರ, ಜೀವನ ಕ್ರಮದಲ್ಲಿ ಉಂಟಾದ ಏರುಪೇರಿನಿಂದ ಜ್ವರ, ಉಷ್ಣ ನೆಗಡಿ ಸೇರಿದಂತೆ ಹಲವು ಕಾಯಿಲೆಗೆ ಜನರು ತುತ್ತಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಹೆಚ್ಚಿನ ಜನಜಂಗುಳಿಯೂ ಕಂಡುಬರುತ್ತಿದೆ.

ಬಿಸಿಲ ಝಳದಿಂದ ಕೃಷಿ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಪರೀತ ಸೆಕೆಗೆ ಸಸಿಗಳು ಒಣಗುತ್ತಿರುವುದು ಒಂದೆಡೆಯಾದರೆ, ಪ್ರಖರ ಬಿಸಿಲಿನಲ್ಲಿ ಕೆಲಸ ಮಾಡಲಾಗದೆ ಕಾರ್ಮಿಕರು ಕೆಲಸಕ್ಕೆ ಗೈರಾಗುತ್ತಿದ್ದಾರೆ. ತೋಟಗಾರಿಕೆ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹಾವೇರಿ ಭಾಗದಿಂದ ವಲಸೆ ಬರುತ್ತಿದ್ದ ಕಾರ್ಮಿಕರ ಸಂಖ್ಯೆಯೂ ಇಳಿಕೆಯಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಕಲ್ಲಂಗಡಿ ಬೆಳೆ ಕೃಷಿಗೂ ಕೂಲಿಕಾರ್ಮಿಕರು ಸಿಗುತ್ತಿಲ್ಲ ಎಂಬುದು ಕೃಷಿಕರ ದೂರು.

ಬಿಸಿಲ ಝಳದಿಂದ ಬಚಾವಾಗಲು ಜನರು ಕೊಡೆ ಹಿಡಿದು ಸಾಗುವ ದೃಶ್ಯಗಳು ಸಾಮಾನ್ಯವಾಗಿ ಕಾಣಿಸುತ್ತಿವೆ. ಸೆಕೆಗೆ ಹೆದರಿ ಕಚೇರಿಗಳಿಗೆ ಬರುವವರು ಬಿಸಿಲು ಹೆಚ್ಚುವ ಸಮಯದ ಬದಲು ಮುಂಜಾನೆ ಬೇಗನೆ ಹಾಜರಾಗುತ್ತಿದ್ದಾರೆ. 

ಬಿಸಿಲಿನ ಝಳ ಹೆಚ್ಚುತ್ತಿರುವ ಬೆನ್ನಲ್ಲೇ ತಂಪುಪಾನೀಯಗಳ ಮಾರಾಟವೂ ಚುರುಕುಗೊಂಡಿದೆ. ಎಳನೀರು ಸೇರಿದಂತೆ ತಂಪುಪಾನೀಯಗಳ ಬೆಲೆಯಲ್ಲೂ ಹೆಚ್ಚಳವಾಗಿದೆ. ಸೆಕೆಯಿಂದ ಬಚಾವಾಗಲು ಜನರು ತಂಪುಪಾನೀಯಗಳ ಮೊರೆ ಹೋಗುತ್ತಿರುವುದು ಕಾಣಸಿಗುತ್ತಿದೆ. ಮಾರುಕಟ್ಟೆಯಲ್ಲಿ ಎಳನೀರು, ನಿಂಬೆ ಹಣ್ಣಿನ ಜ್ಯೂಸ್, ಹಣ್ಣಿನ ಜ್ಯೂಸ್‍ಗಳಿಗೆ ಬೇಡಿಕೆ ಹೆಚ್ಚಲಾರಂಭಿಸಿದೆ. ದಿನಕ್ಕೊಂದು ತಂಪುಪಾನೀಯ ಮಾರಾಟದ ತಾತ್ಕಾಲಿಕ ಮಳಿಗೆಗಳು ನಗರದಲ್ಲಿ ಅಲ್ಲಲ್ಲಿ ತೆರೆಯುತ್ತಿದೆ.

ಎಳನೀರಿನ ದರ ₹50ಕ್ಕೆ ಏರಿಕೆಯಾಗಿದೆ. ಲಿಂಬೆ ಜ್ಯೂಸ್, ಸೋಡಾ ಶರಬತ್ತಿನ ದರಗಳು ₹20 ರಿಂದ ₹25ಕ್ಕೆ ಏರಿಕೆಯಾಗಿದೆ. ಕೋಕಂ, ರಾಗಿನೀರು, ಎಳ್ಳುನೀರು ಸರಾಸರಿ ₹15ರಿಂದ ₹20ಕ್ಕೆ ಏರಿಕೆ ಕಂಡಿದೆ.

ಎಳನೀರು ಪೂರೈಕೆಯಲ್ಲಿ ವ್ಯತ್ಯಯ!

ಕರಾವಳಿ ಭಾಗದ ನಗರ, ಪಟ್ಟಣಗಳಿಗೆ ಎಳನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವದಾಗಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೇಡಿಕೆಯಷ್ಟು ಎಳನೀರು ಪೂರೈಕೆ ಆಗುತ್ತಿಲ್ಲ. ಕಾರವಾರ ಸೇರಿದಂತೆ ಬಹುತೇಕ ಕಡೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಸಾಗರ ಭಾಗದಿಂದ ಎಳನೀರು ತರಿಸಿಕೊಳ್ಳಲಾಗುತ್ತಿದೆ.

‘ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಎಳನೀರಿಗೆ ಎಲ್ಲೆಡೆಯೂ ಬೇಡಿಕೆ ಹೆಚ್ಚುತ್ತದೆ. ಕರಾವಳಿ ಭಾಗದಲ್ಲಿ ಅತ್ಯಧಿಕ ಬೇಡಿಕೆ ಇದೆ. ನಾವು ದಲ್ಲಾಳಿಗಳಿಗೆ 800 ರಿಂದ 1 ಸಾವಿರ ಎಳನೀರು ಒಮ್ಮೆ ಬೇಡಿಕೆ ಇಟ್ಟರೆ, ಅವರು ಕೇವಲ 400–500 ಮಾತ್ರ ಪೂರೈಸುತ್ತಾರೆ. ಬೇಸಿಗೆಯ ಹೊರತಾದ ದಿನದಲ್ಲಿ ಬೇಡಿಕೆಗಿಂತ ಹೆಚ್ಚು ಎಳನೀರು ತಂದುಕೊಡುತ್ತಾರೆ. ಸೆಕೆಯ ಪರಿಣಾಮ ತಂದಿಟ್ಟ ಎಳನೀರು ಎರಡು ಮೂರು ದಿನದಲ್ಲಿ ಒಣಗುತ್ತಿದೆ’ ಎಂದು ಎಳನೀರು ವ್ಯಾಪಾರಿ ರವಿ ನಾಯ್ಕ ಹೇಳುತ್ತಾರೆ.

ಬಿಸಿಲ ಝಳದಿಂದ ಕಂಗೆಟ್ಟ ಜನರು ತಂಪುಪಾನೀಯ ಸೇವನೆಗೆ ಕಾರವಾರ ನಗರದ ತಂಪುಪಾನೀಯ ಅಂಗಡಿಯೊಂದರ ಎದುರು ಸೇರಿರುವುದು.
ಬಿಸಿಲ ಝಳದಿಂದ ಕಂಗೆಟ್ಟ ಜನರು ತಂಪುಪಾನೀಯ ಸೇವನೆಗೆ ಕಾರವಾರ ನಗರದ ತಂಪುಪಾನೀಯ ಅಂಗಡಿಯೊಂದರ ಎದುರು ಸೇರಿರುವುದು.
ಕಾರವಾರದಲ್ಲಿ ರಸ್ತೆಬದಿಯಲ್ಲಿ ಲಿಂಬು ಶರಬತ್ ವ್ಯಾಪಾರ ಜೋರಾಗಿದೆ.
ಕಾರವಾರದಲ್ಲಿ ರಸ್ತೆಬದಿಯಲ್ಲಿ ಲಿಂಬು ಶರಬತ್ ವ್ಯಾಪಾರ ಜೋರಾಗಿದೆ.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಉಷ್ಣಾಂಶ ಇರಲಿದ್ದು ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರಖರ ಬಿಸಿಲಿನ ಅವಧಿಯಲ್ಲಿ ಮನೆಯಿಂದ ಹೊರಹೋಗುವುದನ್ನು ತಪ್ಪಿಸಬೇಕು.
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ಸೆಕೆ ಹೆಚ್ಚಿರುವುದರಿಂದ ತಂಪುಪಾನೀಗಳಿಗೆ ಬೇಡಿಕೆ ಏರಿಕೆಯಾಗಿದೆ. ಫ್ರುಟ್ ಲಸ್ಸಿ ಸೇರಿ ಕೆಲವು ಪಾನೀಯಗಳು ಮಧ್ಯಾಹ್ನದೊಳಗೆ ಖಾಲಿಯಾಗುತ್ತಿದೆ.
ನವೀನ್ ದೇವರೂರಕರ ತಂಪುಪಾನೀಯ ಮಾರಾಟಗಾರ
ಬಿಸಿಲಿಗೆ ಬಸವಳಿದ ಜನರು ತಂಪುಪಾನೀಯಗಳ ಬದಲು ಎಳನೀರು ಸೇವನೆಗೆ ಆದ್ಯತೆ ಕೊಡುತ್ತಿದ್ದಾರೆ. ಆದರೆ ಜನರ ಬೇಡಿಕೆಯಷ್ಟು ಎಳನೀರು ಪೂರೈಕೆಯೇ ಸವಾಲಾಗಿದೆ
ನಾರಾಯಣ ಗೌಡ ಎಳನೀರು ವ್ಯಾಪಾರಿ
ಚರ್ಮ ಸುರಕ್ಷತೆಗೆ ಆದ್ಯತೆ ನೀಡಿ
‘ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಬಿರು ಬಿಸಿಲು ಇರುವ ಮಧ್ಯಾಹ್ನ 11.30 ರಿಂದ ಸಂಜೆ 4 ಗಂಟೆವರೆಗೆ ಮನೆ ಅಥವಾ ಕಚೇರಿಯಿಂದ ಹೊರಹೂಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಹೊರಹೋಗುವುದಿದ್ದರೆ ತೆಳುವಾದ ಹತ್ತಿಯ ಬಟ್ಟೆ ಧರಿಸಿ ಸಾಗಬಹುದು. ನೈಲಾನ್ ಪಾಲಿಸ್ಟರ್ ಬಟ್ಟೆ ಧರಿಸುವುದನ್ನು ತಪ್ಪಿಸಬೇಕು. ಇವು ಬೆವರು ಹೀರದ ಪರಿಣಾಮ ಚರ್ಮಕ್ಕೆ ಶಿಲೀಂದ್ರ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಬಿಸಿಲಿನ ಶಾಖದಿಂದ ರಕ್ಷಣೆ ಪಡೆಯಲು ದೇಹಕ್ಕೆ ಎಸ್.ಪಿ.ಎಫ್ ಶೇ 30ಕ್ಕಿಂತ ಹೆಚ್ಚಿರುವ ಸನ್‍ಸ್ಕ್ರೀನ್ ಲೋಶನ್ ಹಚ್ಚಬಹುದು. ಕಿಡ್ನಿ ಹೃದಯ ಸಮಸ್ಯೆ ಇದ್ದವರ ಹೊರತಾದವರು ದಿನಕ್ಕೆ ಸರಾಸರಿ 3 ರಿಂದ 5 ಲೀ. ನೀರು ಸೇವಿಸುವುದು ಉತ್ತಮ’ ಎನ್ನುತ್ತಾರೆ ಕ್ರಿಮ್ಸ್ ಸಂಸ್ಥೆಯ ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹಾಂತೇಶ ಪಿ.
ಜೀರ್ಣಕಾರಕ ಪದಾರ್ಥಗಳ ಸೇವನೆಗೆ ಆದ್ಯತೆ ಇರಲಿ
‘ಬೇಸಿಗೆ ಅವಧಿಯಲ್ಲಿ ಜೀರ್ಣಕ್ರಿಯೆ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಸುಲಭವಾಗಿ ಜೀರ್ಣವಾಗಬಲ್ಲ ಪದಾರ್ಥಗಳ ಸೇವನೆಗೆ ಆದ್ಯತೆ ನೀಡಬೇಕು. ಕಾರ್ಬೊನೇಟೆಡ್ ಪಾನೀಯಗಳ ಬದಲು ಹಣ್ಣಿನ ಜ್ಯೂಸ್ ಎಳನೀರು ಮಜ್ಜಿಗೆ ದೇಹಕ್ಕೆ ತಂಪು ನೀಡುವ ಪಾನೀಯಗಳ ಸೇವನೆಗೆ ಒತ್ತು ನೀಡಬೇಕು. ಆರೋಗ್ಯಕರವಾಗಿರುವ ಸೊಪ್ಪುಗಳನ್ನು ಬಳಸಿ ತಯಾರಿಸಿದ ತಂಬುಳಿಯಂತಹ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಹುರಳಿಕಾಳು ಹುಣಸೆಹಣ್ಣು ಹೀರೆಕಾಯಿ ಬದನೆಕಾಯಿ ಮುಂತಾದವುಗಳ ಬಳಕೆ ಹೆಚ್ಚಿಸಬೇಕು. ಬಿಸಿಲಿನ ವೇಳೆ ದೇಹಕ್ಕೆ ಹೆಚ್ಚು ದಣಿವು ನೀಡುವ ಕೆಲಸ ಮಾಡಬಾರದು. ಹಗಲಿನ ವೇಳೆ ನಿದ್ರೆಯೂ ಒಳ್ಳೆಯದಲ್ಲ’ ಎಂದು ಸಲಹೆ ನೀಡುತ್ತಾರೆ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಲಲಿತಾ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT