ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ:‘ಕೈ’, ‘ಕಮಲ’ದ ನಡುವೆ ಹಣಾಹಣಿ

ಪಕ್ಷದ ಜತೆಗೆ ವೈಯಕ್ತಿಕ ವರ್ಚಸ್ಸು ಗೆಲುವಿಗೆ ನಿರ್ಣಾಯಕವಾಗಿರುವ ಕ್ಷೇತ್ರ
Last Updated 21 ಮಾರ್ಚ್ 2023, 4:20 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದ ಗಡಿಭಾಗದ ಕ್ಷೇತ್ರದಲ್ಲೊಂದಾದ ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ಎದುರಾಳಿಗಳಾಗುವುದು ಬಹುತೇಕ ನಿಶ್ಚಿತವಾಗಿದೆ. ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಇದೆಯಾದರೂ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಹಾಲಿ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಎಂಬ ಪಟ್ಟ ಹೊತ್ತಿದ್ದಾರೆ. ಈ ಬಾರಿಯೂ ಪಕ್ಷ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‍ನಿಂದ ಮಾಜಿ ಶಾಸಕ ಸತೀಶ್ ಸೈಲ್ ಅಭ್ಯರ್ಥಿಯಾಗುವುದು ಬಹುತೇಕ ಅಂತಿಮಗೊಂಡಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ವಿಜಯ ಸಂಕಲ್ಪ ರ‍್ಯಾಲಿ, ಸಮಾವೇಶ ನಡೆಸುವ ಮೂಲಕ ಬಿಜೆಪಿ ಚುನಾವಣೆಗೆ ಭರದ ಸಿದ್ಧತೆ ನಡೆಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸ್ವಲ್ಪ ಹಿಂದೆ ಬಿದ್ದಿದೆ. ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಸತೀಶ್ ಸೈಲ್ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಎರಡೂ ಪಕ್ಷಗಳು ತಮ್ಮದೇ ಮತಬ್ಯಾಂಕ್ ಹೊಂದಿವೆ.

2018ರ ಚುನಾವಣೆಯಲ್ಲಿ ಪರೇಶ್ ಮೇಸ್ತ ಸಾವಿನ ವಿಚಾರ, ಅಂಕೋಲಾದ ಬಂಡಿಹಬ್ಬದಲ್ಲಿ ಹರಕೆ ಅರ್ಪಿಸಲು ಅಡ್ಡಿ ಆಗಿದ್ದು ಬಿಜೆಪಿಯ ದೊಡ್ಡ ಅಂತರದ ಗೆಲುವಿಗೆ ಕಾರಣವಾಗಿತ್ತು. ಇವೆರಡೂ ವಿಷಯಗಳನ್ನು ಭಾವನಾತ್ಮಕವಾಗಿ ಬಳಕೆ ಮಾಡಿಕೊಂಡ ಬಿಜೆಪಿ ಗೆಲುವಿನ ದಡ ಸೇರಿತ್ತು. 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿಯೂ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದ ಸತೀಶ್ ಸೈಲ್ ಬಳಿಕ ಕಾಂಗ್ರೆಸ್ ಸೇರಿದ್ದರು. 2018ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚಕಾರ ಎತ್ತಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಬಳಿಕ ಸತತ ಎರಡು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆದರೂ ಕ್ಷೇತ್ರದಲ್ಲಿ ಅವರದೇ ಮತಬ್ಯಾಂಕ್ ಹೊಂದಿದ್ದಾರೆ. ಅವರು ಕಣಕ್ಕೆ ಇಳಿದರೆ ರಾಜಕೀಯ ಚಿತ್ರಣ ಬದಲಾಗುವ ಸಾಧ್ಯತೆ ಇದ್ದು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ.

ಅಂದು (2018):

2015ರ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಚೆಂಡಿಯಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ರೂಪಾಲಿ ನಾಯ್ಕ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷದ ಟಿಕೆಟ್ ಗಿಟ್ಟಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಹಲವು ಬಿಜೆಪಿ ನಾಯಕರ ದಂಡು ಕ್ಷೇತ್ರದಲ್ಲಿ ಉಳಿದು ಅಭ್ಯರ್ಥಿಯ ಪರ ನಿರಂತರ ಪ್ರಚಾರ ನಡೆಸಿದ್ದರು. ಅಂದು ಶಾಸಕರಾಗಿದ್ದ ಸತೀಶ್ ಸೈಲ್ ವಿರುದ್ಧ ಶೇ.20ರಷ್ಟು ಲಂಚ ಪಡೆಯುತ್ತಾರೆಂಬ ಆರೋಪ ಇದ್ದರೂ ಬಿಜೆಪಿ ಇದರ ಹೊರತಾಗಿ ಭಾವನಾತ್ಮಕ ವಿಚಾರವನ್ನೇ ಮುಂದಿಟ್ಟು ಗೆಲುವು ಸಾಧಿಸಿತ್ತು.

ಬಿಜೆಪಿಯಲ್ಲಿದ್ದ ಆನಂದ್ ಅಸ್ನೋಟಿಕರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಐದು ವರ್ಷ ಕ್ಷೇತ್ರದಿಂದ ದೂರವೇ ಇದ್ದ ಅವರು ಚುನಾವಣೆಗೆ ಮೂರು ತಿಂಗಳ ಮೊದಲು ಕ್ಷೇತ್ರದಾದ್ಯಂತ ಓಡಾಟ ನಡೆಸಿ 46 ಸಾವಿರಗಳಷ್ಟು ಮತ ಪಡೆದಿದ್ದರು.

ಶಾಸಕರಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂಬುದು ಹಾಗೂ ಭ್ರಷ್ಟಾಚಾರದ ಆರೋಪ ಸತೀಶ್ ಸೈಲ್ ಅವರನ್ನು ಮೂರನೆ ಸ್ಥಾನಕ್ಕೆ ತಳ್ಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT