ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸಂಕಷ್ಟ ಹರಿಸಿದ ಗಂಗಾವಳಿ

ಅಂಕೋಲಾದ ಡೊಂಗ್ರಿಯಲ್ಲಿ ರಸ್ತೆ ಮುಳುಗಡೆ: ಭಾರಿ ಮಳೆ ಮುಂದುವರಿದರೆ ಅಪಾಯ
Last Updated 5 ಆಗಸ್ಟ್ 2020, 13:12 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ, ಮತ್ತೆ ಆತಂಕ ಸೃಷ್ಟಿಸಿದೆ. ಅಂಕೋಲಾ ತಾಲ್ಲೂಕಿನಲ್ಲಿ ಗಂಗಾವಳಿ ನದಿಯು ಉಕ್ಕಿ ಹರಿಯುತ್ತಿದೆ. ಅದರ ದಡಗಳಲ್ಲಿರುವ ಜನ ಕಂಗಾಲಾಗಿದ್ದು, ಸುಮಾರು ಎಂಟು ಕುಟುಂಬದವರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಡೊಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಾರದ ಎಂಕಣ್ಣ ಕತ್ರಿಯಲ್ಲಿ ಗಂಗಾವಳಿ ನದಿ ಅಪಾಯದ ಮಟ್ಟ ಮೀರಿ ಹರಿದಿದೆ. ಇದರಿಂದ ಗುಳ್ಳಾಪುರ– ಕಮ್ಮಾಣಿ ಮುಖ್ಯರಸ್ತೆಯಲ್ಲಿ ಸುಮಾರು ಮೂರು ಅಡಿಗಳಷ್ಟು ನೀರು ನಿಂತು ವಾಹನ ಸಂಚಾರ ಸ್ಥಗಿತವಾಗಿತ್ತು. ಶೇವ್ಕಾರ ಗ್ರಾಮದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದೆ. ಸಿದ್ದರ ಕೊಪ್ಪದಲ್ಲಿ ಕೆಲವು ಮನೆಗಳ ಸುತ್ತ ನೀರು ತುಂಬಿದೆ. ಹಾಗಾಗಿ ಅಲ್ಲಿನವರು ಗುಡ್ಡದ ಮೇಲೆ ತಾಡಪಾಲು ಅಳವಡಿಸಿಕೊಂಡು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.

ರಸ್ತೆ ಸಂಪರ್ಕ ಸ್ಥಗಿತ

ಗಂಗಾವಳಿ ಉಕ್ಕಿ ಹರಿದ ಪರಿಣಾಮ ಸುಂಕಸಾಳ ಬಳಿ ರಸ್ತೆಯಲ್ಲಿ ನೀರು ತುಂಬಿತ್ತು. ಇದರಿಂದ ಯಲ್ಲಾಪುರ ಮತ್ತು ಅಂಕೋಲಾ ನಡುವೆ ಸ್ವಲ್ಪ ಹೊತ್ತು ರಸ್ತೆ ಸಂಪರ್ಕ ಕಡಿತವಾಗಿತ್ತು. ಈ ಎರಡು ಪಟ್ಟಣಗಳ ನಡುವೆ ಸಂಚರಿಸುವವರು ಶಿರಸಿ ಮೂಲಕ ಪ್ರಯಾಣಿಸಿದರು.

ಗೋಕರ್ಣದಲ್ಲಿ ಮಂಗಳವಾರ ರಾತ್ರಿಯಿಂದಲೇ ಭಾರಿ ಗಾಳಿ, ಮಳೆಯಾಯಿತು. ಸಮುದ್ರದಲ್ಲಿ ಅಲೆಯ ಅಬ್ಬರ ಜಾಸ್ತಿಯಾಗಿದ್ದು, ದುಬ್ಬನಸಸಿಯಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದವು. ಇಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

‘ರಭಸದ ಗಾಳಿಗೆ ವಿದ್ಯುತ್ ತಂತಿಗಳ ಮೇಲೆ ಮರಗಳು ಮುರಿದು ಬಿದ್ದಿವೆ. ಇದರ ಪರಿಣಾಮ ಗ್ರಾಮದಲ್ಲಿ ಮೂರು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಗ್ರಾಮದಿಂದ ಹೊರಗೆ ಇರುವ ಹಲವರು ಕರೆ ಮಾಡಿ ತಮ್ಮ ಜಮೀನಿನ ಸ್ಥಿತಿಗತಿಯ ಬಗ್ಗೆ ವಿಚಾರಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ನರಸಿಂಹ ಗಾಂವ್ಕರ್ ಹೇಳಿದರು.

‘ಈ ವರ್ಷವೂ ಅಡಿಕೆ ತೋಟ ಮುಳುಗಿದೆ. ಕಳೆದ ವರ್ಷ ಆ.5ರಂದು ಪ್ರವಾಹ ಶುರುವಾಗಿ ಆ.9ರಂದು ಇಡೀ ಊರಿನಲ್ಲಿ ನೀರು ಭರ್ತಿಯಾಗಿತ್ತು. ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಮಳೆ ಜೋರಾಗಿರುವ ಕಾರಣ ಇಲ್ಲಿ ಆತಂಕ ಹೆಚ್ಚಿದೆ’ ಎಂದರು.

‘ಡೊಂಗ್ರಿ ಗ್ರಾಮದಲ್ಲಿ ಬೆಳಿಗ್ಗೆ ರಸ್ತೆಯ ಮೇಲೆ ನೀರು ಹರಿದು ಸಂಪರ್ಕ ಸ್ಥಗಿತವಾಗಿತ್ತು. ಇಲ್ಲಿ ಸುಮಾರು 25 ಮನೆಗಳಿವೆ. ಮಳೆ ಮುಂದುವರಿದರೆ ಕಳೆದ ವರ್ಷದ ಪರಿಸ್ಥಿತಿಯೇ ಎದುರಾಗಬಹುದು. ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕಿ ರೂಪಾಲಿ ನಾಯ್ಕ ಶಿಲಾನ್ಯಾಸ ನೆರವೇರಿಸಿದ್ದಾರೆ. ನೀರು ಉಕ್ಕಿ ಹರಿಯುವ ಪ್ರದೇಶವನ್ನು ಮಣ್ಣು ತುಂಬಿ ಎತ್ತರಿಸುವ ಕಾಮಗಾರಿಯೂ ಯೋಜನೆಯಲ್ಲಿ ಸೇರಿದೆ’ ಎಂದು ಡೊಂಗ್ರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಾರವಾರದಲ್ಲಿ ಕೂಡ ಭಾರಿ ಗಾಳಿ ಹಾಗೂ ಮಳೆ ಸುರಿಯಿತು. ಅರಬ್ಬಿ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT