ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ದಡ ಸೇರಿದ ದೋಣಿ– 27 ಮಂದಿ ಅಪಾಯದಿಂದ ಪಾರು

ಕಾರವಾರದಿಂದ 30 ನಾಟಿಕಲ್ ಮೈಲು ದೂರದಲ್ಲಿ ರಕ್ಷಣೆ ಕಾರ್ಯ
Published 5 ಡಿಸೆಂಬರ್ 2023, 16:32 IST
Last Updated 5 ಡಿಸೆಂಬರ್ 2023, 16:32 IST
ಅಕ್ಷರ ಗಾತ್ರ

ಕಾರವಾರ: ಎಂಜಿನ್ ಸಮಸ್ಯೆ, ಸಮುದ್ರದ ಅಲೆಗಳ ಅಬ್ಬರಕ್ಕೆ ದಡದಿಂದ 30 ನಾಟಿಕಲ್ ಮೈಲು ದೂರಕ್ಕೆ ಸಾಗಿ ಸಂಪರ್ಕ ಕಡಿತಗೊಂಡಿದ್ದ ಗೋವಾದ ಪಣಜಿಯ ಕ್ರಿಸ್ಟೊ ರೇ ಹೆಸರಿನ ಮೀನುಗಾರಿಕೆ ದೋಣಿಯನ್ನು ತಟರಕ್ಷಕ ಪಡೆಯು ಮಂಗಳವಾರ ಸುರಕ್ಷಿತವಾಗಿ ಇಲ್ಲಿನ ವಾಣಿಜ್ಯ ಬಂದರಿಗೆ ಕರೆತಂದಿದೆ. ಆರು ದಿನಗಳಿಂದ ಸಂಪರ್ಕ ಸಿಗದೆ ಆತಂಕಕ್ಕೆ ಒಳಗಾಗಿದ್ದ ದೋಣಿಯಲ್ಲಿ ಕಾಲ ಕಳೆದಿದ್ದ 27 ಮಂದಿ ಕಾರ್ಮಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ.

ಗೋವಾದ ಫ್ಲೋಸಿ ರೋಡ್ರಿಗಸ್ ಎಂಬುವವರ ಮಾಲಿಕತ್ವದ ದೋಣಿಯು ನ.29 ರಂದು ಪಣಜಿಯಿಂದ ಮೀನುಗಾರಿಕೆಗೆ ತೆರಳಿತ್ತು. ಎರಡು ದಿನಗಳ ಬಳಿಕ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿತ್ತು.

‘ಹವಾಮಾನ ವೈಪರಿತ್ಯದ ಎದುರಾದ ಪರಿಣಾಮ ಅಂಕೋಲಾದ ಬೇಲೆಕೇರಿ ಬಂದರಿಗೆ ಬರಲು ಪ್ರಯತ್ನಿಸಿದ್ದರು. ಆದರೆ ದೋಣಿಯ ಎಂಜಿನ್‍ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ದೋಣಿ ಚಲಾಯಿಸಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲಿ ರಭಸದ ಗಾಳಿ, ಅಲೆಗಳ ಆರ್ಭಟದ ಪರಿಣಾಮ ದೋಣಿಯು ಆಳಸಮುದ್ರದತ್ತ ಸಾಗಿತು. ಕಾರವಾರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ದೋಣಿ ಪತ್ತೆ ಹಚ್ಚಲಾಯಿತು’ ಎಂದು ಭಾರತೀಯ ತಟರಕ್ಷಕ ಪಡೆಯ ಅಧಿಕಾರಿಗಳು ತಿಳಿಸಿದರು.

‘ಐಸಿಜಿಎಸ್ ಸಾವಿತ್ರಿ ಬಾಯಿ ಫುಲೆ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿಯು ದೋಣಿ ಪತ್ತೆ ಹಚ್ಚಲು ನೆರವಾಯಿತು. ಬೇರೊಂದು ದೋಣಿಯ ಮೂಲಕ ಅಪಾಯಕ್ಕೆ ಸಿಲುಕಿದ್ದ ದೋಣಿಯಲ್ಲಿ ಎಳೆದು ತರಲಾಯಿತು’ ಎಂದರು.

‘ದೋಣಿಯಲ್ಲಿ ನೀರು, ಆಹಾರ ಇತ್ತು. ಇಂಧನವೂ ಇತ್ತು. ಆದರೆ ದಡಕ್ಕೆ ಬರಲು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯೆ ಹುಸಿಯಾಗಿತ್ತು. ಅಪಾಯದಿಂದ ಪಾರಾಗಿದ್ದು ಅದೃಷ್ಟ’ ಎಂದು ದೋಣಿಯಲ್ಲಿದ್ದ ಕಾರ್ಮಿಕರೊಬ್ಬರು ಪ್ರತಿಕ್ರಿಯಿಸಿದರು.

ಕಾರವಾರದ ವಾಣಿಜ್ಯ ಬಂದರಿಗೆ ಮಂಗಳವಾರ ರಾತ್ರಿ ತಲುಪಿದ ಕ್ರಿಸ್ಟೋ ರೇ ಮೀನುಗಾರಿಕೆ ದೋಣಿ.
ಕಾರವಾರದ ವಾಣಿಜ್ಯ ಬಂದರಿಗೆ ಮಂಗಳವಾರ ರಾತ್ರಿ ತಲುಪಿದ ಕ್ರಿಸ್ಟೋ ರೇ ಮೀನುಗಾರಿಕೆ ದೋಣಿ.
ಅಪಾಯದಿಂದ ಪಾರಾಗಿ ಬಂದ ಸಮಾಧಾನದಲ್ಲಿ ಕ್ರಿಸ್ಟೊ ರೇ ದೋಣಿಯಲ್ಲಿದ್ದ ಕಾರ್ಮಿಕರು.
ಅಪಾಯದಿಂದ ಪಾರಾಗಿ ಬಂದ ಸಮಾಧಾನದಲ್ಲಿ ಕ್ರಿಸ್ಟೊ ರೇ ದೋಣಿಯಲ್ಲಿದ್ದ ಕಾರ್ಮಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT