ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಯಾಣ: ಗೋಕರ್ಣಕ್ಕೆ ಶಾಪವಾದ ’ಪ್ಲಾಸ್ಟಿಕ್ ತ್ಯಾಜ್ಯ’

ಪ್ರವಾಸಿ ತಾಣದಲ್ಲಿ ಅಸ್ವಚ್ಛತೆಯೇ ಸಮಸ್ಯೆ:ಎಲ್ಲೆಂದರಲ್ಲಿ ಕಸದ ರಾಶಿ
Published 3 ಏಪ್ರಿಲ್ 2024, 4:43 IST
Last Updated 3 ಏಪ್ರಿಲ್ 2024, 4:43 IST
ಅಕ್ಷರ ಗಾತ್ರ

ಗೋಕರ್ಣ: ಧಾರ್ಮಿಕ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಪ್ರಸಿದ್ಧಿ  ಪಡೆದ ಗೋಕರ್ಣದಲ್ಲಿ ಕಸದ ರಾಶಿಯೇ ದೊಡ್ಡ ತಲೆನೋವಾಗಿದೆ. ಪ್ಲಾಸ್ಟಿಕ್ ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವೂ ಪಾಲನೆಯಾಗಿಲ್ಲ.

ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ತ್ಯಾಜ್ಯ ವಿಲೇವಾರಿ ಮಾಡುವುದೇ ಸ್ಥಳೀಯ ಆಡಳಿತಕ್ಕೆ ಸವಾಲಿನ ಕೆಲಸವಾಗಿದೆ. ಊರಿನ ತ್ಯಾಜ್ಯ ಮತ್ತು ಕಸವನ್ನು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿ ಹಾಕುತ್ತಿದ್ದು, ಇದರಿಂದ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ.

ಕಸವನ್ನು ಅಶೋಕೆಗೆ ಸಂಪರ್ಕಿಸುವ ಓಂ ಬೀಚ್ ರಸ್ತೆಯ ತಿರುವಿನಲ್ಲಿ ಮುಕ್ತವಾಗಿ ಎಸೆಯಲಾಗುತ್ತಿದೆ. ಕೆಲವೊಮ್ಮೆ ಊರಿನ ತ್ಯಾಜ್ಯ ಮತ್ತು ಕಸವನ್ನು ಇಲ್ಲಿಯ ಮುಖ್ಯ ಕಡಲತೀರದಲ್ಲಿರುವ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಸ್ಥಳದಲ್ಲಿ ಹಾಕಲಾಗುತ್ತಿದೆ. ಈ ಸ್ಥಳವು ಮಹಾಬಲೇಶ್ವರ ದೇವಸ್ಥಾನಕ್ಕೆ ಅನತಿ ದೂರದಲ್ಲಿದೆ. ಅಲ್ಲದೆ, ಇದೇ ಸ್ಥಳದ ಬಳಿಯೇ ಭೋಜನ ಶಾಲೆಯೂ ಇದ್ದು, ಅಲ್ಲಿನ ನಿತ್ಯ ನೂರಾರು ಜನರು ಪ್ರಸಾದ ಸ್ವೀಕರಿಸುತ್ತಾರೆ. ಅಲ್ಲಿಂದ ಬರುವ ತ್ಯಾಜ್ಯದ ದುರ್ವಾಸನೆ ಉಸಿರಾಟಕ್ಕೂ ತೊಂದರೆಯಾಗುತ್ತಿದೆ ಎಂಬುದು ಜನರ ದೂರು.

‘ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿಯೇ ತ್ಯಾಜ್ಯ, ಮಲೀನ ವಸ್ತುಗಳನ್ನು ಹಾಕಲಾಗುತ್ತಿದೆ. ದೇವಸ್ಥಾನಕ್ಕೆ ತೆರಳುವ ಭಕ್ತರು ಈ ತ್ಯಾಜ್ಯವನ್ನೇ ಮೆಟ್ಟಿಕೊಂಡು ಹೋಗುವುದ ಅನಿವಾರ್ಯವಾಗಿದೆ. ದೇವಸ್ಥಾನದ ಬಳಿಯೇ ತ್ಯಾಜ್ಯ ಸಂಗ್ರಹಣೆಯ ಘಟಕ ನಿರ್ಮಾಣವಾಗಿರುವುದು ಭಕ್ತರ ಭಾವನೆಗೂ ಧಕ್ಕೆ ತರುತ್ತಿದೆ’ ಎನ್ನುತ್ತಾರೆ ಅರ್ಚಕರು.

‘ಕಸ ಎಸೆದವರಿಗೆ ದಂಡ ವಿಧಿಸಲಾಗುವುದು ಎಂದು ಫಲಕ ಅಳವಡಿಸಿದರೂ, ಅದರ ಕೆಳಗೇ ತ್ಯಾಜ್ಯದ ರಾಶಿ ಎಸೆಯುತ್ತಿದ್ದಾರೆ. ಪ್ರಜ್ಞಾವಂತ ಜನರೇ ಇಂತಹ ಕೃತ್ಯ ಎಸಗುತ್ತಿದ್ದಾರೆ. ಪೌರ ಕಾರ್ಮಿಕರು ಸ್ವಚ್ಛತೆ ಕಾರ್ಯ ಕೈಗೊಂಡರೂ ಸ್ವಲ್ಪ ಹೊತ್ತಿನಲ್ಲಿಯೇ ಮತ್ತೆ ಕಸದ ರಾಶಿ ಬಂದು ಬೀಳುತ್ತಿರುವುದು ನೋಡುಗರಿಗೆ ಅಸಹ್ಯ ಎನಿಸುತ್ತಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀರಾಮ ಸುರೆ.

ಗೋಕರ್ಣದ ಅಶೋಕೆಗೆ ಹೋಗುವ ಓಂ ಬೀಚ್ ತಿರುವಿನಲ್ಲಿ ಊರಿನ ತ್ಯಾಜ್ಯ ಮತ್ತು ಕಸವನ್ನು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿ ಹಾಕಿರುವುದು
ಗೋಕರ್ಣದ ಅಶೋಕೆಗೆ ಹೋಗುವ ಓಂ ಬೀಚ್ ತಿರುವಿನಲ್ಲಿ ಊರಿನ ತ್ಯಾಜ್ಯ ಮತ್ತು ಕಸವನ್ನು ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿ ಹಾಕಿರುವುದು
ಗೋಕರ್ಣದ ಮೇನ್ ಬೀಚಿನಲ್ಲಿ ಗ್ರಾಮ ಪಂಚಾಯ್ತಿಗೆ ಸಂಬಂಧಪಟ್ಟ ಸ್ಥಳದಲ್ಲಿ ತ್ಯಾಜ್ಯ  ಕಸ ಸುರಿದಿದ್ದು ಜಾನುವಾರು ಅದನ್ನು ತಿನ್ನುತ್ತಿರುವುದು
ಗೋಕರ್ಣದ ಮೇನ್ ಬೀಚಿನಲ್ಲಿ ಗ್ರಾಮ ಪಂಚಾಯ್ತಿಗೆ ಸಂಬಂಧಪಟ್ಟ ಸ್ಥಳದಲ್ಲಿ ತ್ಯಾಜ್ಯ  ಕಸ ಸುರಿದಿದ್ದು ಜಾನುವಾರು ಅದನ್ನು ತಿನ್ನುತ್ತಿರುವುದು
ಗೋಕರ್ಣದ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿ ತ್ಯಾಜ್ಯ ಕಸ ಹಾಕಿರುವುದು
ಗೋಕರ್ಣದ ಮಹಾಗಣಪತಿ ದೇವಸ್ಥಾನದ ಪಕ್ಕದಲ್ಲಿ ತ್ಯಾಜ್ಯ ಕಸ ಹಾಕಿರುವುದು
ಗೋಕರ್ಣ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕಸ ತ್ಯಾಜ್ಯ ಸುರಿದಿರುವುದು
ಗೋಕರ್ಣ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕಸ ತ್ಯಾಜ್ಯ ಸುರಿದಿರುವುದು

ಕ್ಷೇತ್ರದ ಪ್ರಾವಿತ್ರ್ಯತೆ ಉಳಿಯಬೇಕಾದರೆ ಸ್ವಚ್ಛತೆಗೆ ಆದ್ಯತೆ ಅತ್ಯವಶ್ಯ. ಪ್ಲಾಸ್ಟಿಕ್ ಮುಕ್ತ ಕ್ಷೇತ್ರವನ್ನಾಗಿ ಪರಿವರ್ತಿಸಲು ಎಲ್ಲ ನಾಗರಿಕರೂ ಇಚ್ಛಾಶಕ್ತಿ ತೋರಿಸಬೇಕು

–ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ

ಕ್ಷೇತ್ರಕ್ಕೆ ಬರುವ ಪ್ರವಾಸಗರಿಂದಲೇ ರಸ್ತೆಯ ಮೇಲೆ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಮನಸ್ಸಿಗೆ ಬಂದ ಕಡೆ ಪ್ಲಾಸ್ಟಿಕ್ ಕಸ ಎಸೆಯುವುದರಿಂದ ಸ್ಥಳೀಯರು ಪರಿಣಾಮ ಎದುರಿಸುವಂತಾಗಿದೆ

– ಲಕ್ಷೀಶ ಗೌಡ ಗ್ರಾಮ ಪಂಚಾಯಿತಿ ಸದಸ್ಯ

ಒಳಚರಂಡಿ ನಿರ್ಮಾಣಕ್ಕೆ ಆಗ್ರಹ

ಗೋಕರ್ಣದಲ್ಲಿ ದಿನದಿಂದ ದಿನಕ್ಕೆ ವಸತಿಗೃಹ ಹೊಟೆಲ್‍ಗಳ ಸಂಖ್ಯೆಯೂ ಹೆಚ್ಚುತ್ತಿದೆ. ದೇಶಿಯ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗುತ್ತಿದ್ದು ಸ್ವಚ್ಛತೆ ಕಾಯ್ದುಕೊಳ್ಳುವುದು ಸವಾಲಾಗಿದೆ. ಹೆಚ್ಚುತ್ತಿರುವ ವಸತಿ ಗೃಹಗಳು ಹೊಟೆಲ್‍ಗಳು ತ್ಯಾಜ್ಯದ ನೀರು ಬಿಡಲು ಸ್ಥಳವಿಲ್ಲದೆ ಮಳೆಗಾಲಕ್ಕೆಂದು ಮೀಸಲಿಟ್ಟ ಚರಂಡಿಗೆ ಬಿಡುತ್ತಿರುವುದು ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ದೂರು. ‘ಮಲೀನ ನೀರನ್ನು ತೆರೆದ ಚರಂಡಿಗೆ ನೇರವಾಗಿ ಬಿಡುತ್ತಿರುವುದರಿಂದ ಗೋಕರ್ಣದಲ್ಲಿ ಜನವಸತಿ ಪ್ರದೇಶದಲ್ಲಿ ಹಲವು ಬಾವಿಗಳ ನೀರು ಉಪಯೋಗಿಸಲು ನಿರುಪಯುಕ್ತವಾಗಿದೆ. ಕುಡಿಯಲು ನೀರಿಗಾಗಿ ಪರದಾಡುವಂತಾಗಿದೆ. ಗೋಕರ್ಣಕ್ಕೆ ವ್ಯವಸ್ಥಿತ ಒಳಚರಂಡಿ ನಿರ್ಮಿಸಬೇಕು ಎಂಬ ಹಲವು ವರ್ಷದ ಬೇಡಿಕೆಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ’ ಎಂದೂ ಹೇಳುತ್ತಾರೆ.

ನಿರ್ವಹಣೆಯಿಲ್ಲದೇ ಸೊರಗುತ್ತಿರುವ ಘಟಕ

ಗೋಕರ್ಣ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿಯೇ ಮೊದಲ ಮಾದರಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿ ಲಾಭದಾಯಕವಾದ ಉದ್ಯಮವಾಗಿ ಪರಿವರ್ತಿಸಿತ್ತು. ಆದರೆ ಅದು ಈಗ ಸಮರ್ಪಕ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ದ್ರವ ತ್ಯಾಜ್ಯ ಘಟಕವಂತೂ ಸಂಪೂರ್ಣ ಮುಚ್ಚಲ್ಪಟ್ಟಿದೆ. ಘನ ಮತ್ತು ದ್ರವ ತ್ಯಾಜ್ಯ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಬೇರೆ ಬೇರೆಯಾಗಿ ಪ್ರಾರಂಭಿಸಿತ್ತು. ನಿರ್ವಹಣೆಯೂ ಉತ್ತಮವಾಗಿತ್ತು. ನಾಡಿನ ಅನೇಕ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಶಾಲಾ ಮಕ್ಕಳು ತ್ಯಾಜ್ಯ ಘಟಕಕ್ಕೆ ಭೇಟಿ ಮಾಡಿ ಅಭ್ಯಸಿಸಿದ್ದರು. ಕಳೆದ ವರ್ಷದಿಂದ ಸಾಕಷ್ಟು ದ್ರವ ತ್ಯಾಜ್ಯ ಪೂರೈಕೆಯಾಗದೇ ದ್ರವ ತ್ಯಾಜ್ಯ ಘಟಕ ಮುಚ್ಚಲ್ಪಟ್ಟಿತ್ತು. ಕೆಲವು ದಿನಗಳಿಂದ ಘನ ತ್ಯಾಜ್ಯ ಘಟಕವೂ ಸ್ಥಗಿತಗೊಂಡಿತ್ತು. ‘ಘನ ತ್ಯಾಜ್ಯ ಘಟಕವನ್ನು ಪುನಃ ಪ್ರಾರಂಭಿಸಲಾಗಿದೆ. ಗ್ರಾಮ ಪಂಚಾಯ್ತಿಯ ಸಹಾಯದಿಂದಲೇ ಘಟಕದ ನಿರ್ವಹಣೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಪಿಡಿಒ ವಿನಯಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT