ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ‘ಗೃಹಲಕ್ಷ್ಮಿ’ ಯೋಜನೆ: ಅಂಗನವಾಡಿ ಕಾರ್ಯಕರ್ತೆಯರಿಗಿಲ್ಲ ಭತ್ಯೆ!

ಅನ್ಯ ಕೆಲಸದ ಒತ್ತಡದಲ್ಲೇ ಹೈರಾಣಾಗುತ್ತಿರುವ ಸಿಬ್ಬಂದಿ
Published 13 ಆಗಸ್ಟ್ 2023, 5:09 IST
Last Updated 13 ಆಗಸ್ಟ್ 2023, 5:09 IST
ಅಕ್ಷರ ಗಾತ್ರ

ಕುಮಟಾ: ರಾಜ್ಯ ಸರ್ಕಾರದ ‘ಗೃಹಲಕ್ಷ್ಮೀ’ ಯೋಜನೆ ನೋಂದಾಯಿಸಿಕೊಳ್ಳದವರ ಮಾಹಿತಿ ಕಲೆ ಹಾಕಿ ಅದನ್ನು ಸರ್ಕಾರಕ್ಕೆ ನೀಡುವ ಕೆಲಸಕ್ಕೆ ತಮಗೆ ಯಾವುದೇ ಭತ್ಯೆ ಅಥವಾ ವೇತನವಾಗಲಿ ನೀಡುತ್ತಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಸಂಬಂಧ ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ಸೂಕ್ತ ಮಾಹಿತಿ ಕಲೆ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. ಅವರಿಂದ ತ್ವರಿತವಾಗಿ ಮಾಹಿತಿ ಸಂಗ್ರಹಿಸಿ ನೀಡಲು ಅಧಿಕಾರಿಗಳು ಸೂಚಿಸುತ್ತಿದ್ದಾರೆ ಎಂಬುದು ಅಂಗನವಾಡಿ ಕಾರ್ಯಕರ್ತರ ದೂರು.

‘ಮೇಲಾಧಿಕಾರಿಗಳು ಸಂಬಂಧಿಸಿದವರ ಮೊಬೈಲ್ ದೂರವಾಣಿ ಸಂಖ್ಯೆ, ವಾರ್ಡ್ ಮಾಹಿತಿ ನೀಡದೆ ಕೇವಲ ಹೆಸರು ಮತ್ತು ಪಡಿತರ ಕಾರ್ಡ್ ಮಾಹಿತಿ ನೀಡಿ ಮಾಹಿತಿ ಕಲೆಹಾಕಲು ಸೂಚಿಸಿದ್ದಾರೆ. ಒಂದು ಪ್ರದೇಶದಲ್ಲಿ ಒಂದೇ ಹೆಸರಿನವರು ಇಬ್ಬರು, ಮೂವರು ಇದ್ದಾಗ ಮಾಹಿತಿ ಕಲೆ ಹಾಕುವಾಗ ಗೊಂದಲ ಉಂಟಾಗುತ್ತದೆ’ ಎನ್ನುತ್ತಾರೆ ಪಟ್ಟಣದ ಅಂಗನವಾಡಿಯೊಂದರ ಕಾರ್ಯಕರ್ತೆಯೊಬ್ಬರು.

‘ಅಂಗನವಾಡಿಯ ನಿತ್ಯದ ಕೆಲಸಗಳನ್ನು ಮುಗಿಸಿದ ಬಳಿಕ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ತೆರಳುವಾಗ ಒಮ್ಮೊಮ್ಮೆ ಕತ್ತಲಾಗುತ್ತದೆ. ಅಷ್ಟಾಗಿಯೂ ನಮ್ಮ ಕೆಲಸಕ್ಕೆ ಯಾವುದೇ ಭತ್ಯೆ, ವೇತನ ಇಲ್ಲವಾಗಿದೆ. ಆರೋಗ್ಯ ಸಮೀಕ್ಷೆ ನಡೆಸುವ ಕೆಲಸಕ್ಕೆ ಆರೋಗ್ಯ ಇಲಾಖೆ ಕೇವಲ ₹500 ನೀಡಲು ಮುಂದಾದಾಗ ಅದನ್ನೇ ನಿರಾಕರಿಸಿದ್ದೇವೆ. ಚುನಾವಣೆಗೆ ಸಂಬಂಧಿಸಿದ ಮಾಹಿತಿ, ಪೋಷಣಾ ಅಭಿಯಾನ ಕಾರ್ಯ ಮುಂತಾದವನ್ನು ಅಂಗನವಾಡಿ ಕಾರ್ಯಕರ್ತರೇ ಕಡ್ಡಾಯವಾಗಿ ಮಾಡಬೇಕಾಗಿದ್ದು, ಕೆಲಸಕ್ಕೆ ಪ್ರತಿಫಲ ಇಲ್ಲವಾಗಿದೆ’ ಎಂದು ಬೇಸರದಿಂದ ಹೇಳಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಯೋಜನೆ ಮಾಹಿತಿ ಕಲೆ ಹಾಕುವುದು ಸೇರಿ ಅನ್ಯ ಕೆಲಸಗಳನ್ನು ನೀಡಬಾರದು. ಇದರಿಂದ ಅವರು ಅಂಗನವಾಡಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಕಷ್ಟವಾಗುತ್ತದೆ’ ಎಂಬುದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆಯ ಜಿಲ್ಲಾ ಘಟಕದ ಉಪಧ್ಯಕ್ಷೆ ಭಾಗೀರಥಿ ನಾಯ್ಕ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT