ಶಿರಸಿ: ಪ್ರತಿ ವರ್ಷ ಬೇಸಿಗೆಯಲ್ಲಿ ಬರಗಾಲಕ್ಕೆ ತುತ್ತಾಗುವ ಉತ್ತರ ಕನ್ನಡ ಜಿಲ್ಲೆಯ ನೀರಿನ ಮೂಲಗಳ ಮೇಲೆ ಸರ್ಕಾರಗಳ ಕಣ್ಣು ಬಿದ್ದಿರುವುದು ಇಲ್ಲಿನ ಜನರ ನಿದ್ದೆಗೆಡಿಸಿದೆ.
ರಾಜ್ಯ ಸರ್ಕಾರದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಸಾಗಿಸುವ, ಕಾಳಿ ನದಿ ನೀರನ್ನು ಬೆಳಗಾವಿ ಜಿಲ್ಲೆಗೆ ಹರಿಸುವ ಯೋಜನೆ ಹಾಗೂ ಕೇಂದ್ರ ಸರ್ಕಾರದ ಬೇಡ್ತಿ– ವರದಾ ನದಿ ಜೋಡಣೆ ಪ್ರಸ್ತಾವ, ಜನರ ಬದುಕನ್ನು ತಲ್ಲಣಗೊಳಿಸುವ ಮೂರು ಯೋಜನೆಗಳ ವಿರುದ್ಧ ಪ್ರತಿಭಟನೆಯ ಕಿಡಿಹೊತ್ತಿದೆ.
ಎರಡು ದಶಕಗಳಿಂದ ಈ ಜಲ ಯೋಜನೆಗಳು ಪುನಃ ಪುನಃ ಪ್ರಸ್ತಾಪವಾಗುತ್ತಿವೆ. ಆದರೆ, ಈ ಅವಧಿಯಲ್ಲಿ ಜಿಲ್ಲೆಯ ಜಲ ಹಾಗೂ ಪರಿಸರದ ಚಿತ್ರಣವೂ ಸಾಕಷ್ಟು ಬದಲಾಗಿದೆ. ನೀರಿಲ್ಲದೇ ಜೀವವೈವಿಧ್ಯ ನಾಶ, ವನ್ಯಪ್ರಾಣಿಗಳ ಸಾವು ಒಂದೆಡೆಯಾದರೆ, ನೀರಿಗಾಗಿ ಹಳ್ಳಿಗಳಲ್ಲಿ ಕಚ್ಚಾಟ ನಡೆಯುತ್ತಿದೆ.
ರಾಜ್ಯ ಸರ್ಕಾರ ಸಮಗ್ರ ಯೋಜನಾ ವರದಿಗೆ ಆದೇಶ ಮಾಡಿರುವ, ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆಯಿಂದ ಲಿಂಗನಮಕ್ಕಿ ವಿದ್ಯುತ್ ಉತ್ಪಾದನೆಗೆ ಭವಿಷ್ಯದಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಜೊತೆಗೆ, ಅಕ್ಕಪಕ್ಕದ ಜಿಲ್ಲೆಗಳ ನಡುವೆ ನೀರಿನ ಕಲಹಕ್ಕೆ ನಾಂದಿಯಾಗುತ್ತದೆ. ಕಾಳಿ ನದಿಗೆ ಈಗಾಗಲೇ ಐದು ಅಣೆಕಟ್ಟುಗಳಿವೆ. ಇಲ್ಲಿರುವ ಜಲ ವಿದ್ಯುತ್ ಯೋಜನೆ, ದಾಂಡೇಲಿ ಅಭಯಾರಣ್ಯದ ಪ್ರಾಣಿಗಳಿಗೆ ನೀರಿನ ಕೊರತೆ ಎದುರಾಗಲಿದೆ. ಹೀಗಾಗಿ ಕಾಳಿ ನದಿ ತಿರುವು ಸೂಕ್ತವಲ್ಲ ಎನ್ನುತ್ತಾರೆ ಪರಿಸರ ಕಾರ್ಯಕರ್ತ ಅನಂತ ಅಶೀಸರ.
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು 2001ರಲ್ಲಿ ಬೇಡ್ತಿ– ವರದಾ ನದಿ ಜೋಡಣೆ ಯೋಜನೆ ಪ್ರಸ್ತಾಪಿಸಿ, ಸಮೀಕ್ಷೆಗೆ ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರದ ವರ್ಷಗಳಲ್ಲಿ ಆಗಾಗ ಈ ಯೋಜನೆಯ ಗುಮ್ಮ ಕಾಡುತ್ತಲೇ ಇದೆ, ಪ್ರಸ್ತಾವ ಇನ್ನೂ ರದ್ದಾಗಿಲ್ಲ.
ವಿಪರ್ಯಾಸವೆಂದರೆ, ಬೇಡ್ತಿ ಹಾಗೂ ವರದಾ ಎರಡೂ ನದಿಗಳು ಪ್ರತಿ ವರ್ಷ ಏಪ್ರಿಲ್– ಮೇ ತಿಂಗಳಿನಲ್ಲಿ ಸಂಪೂರ್ಣ ಬತ್ತುತ್ತವೆ. ನದಿ ದಂಡೆಯ ಜನರು ನೀರಿಗಾಗಿ ಕಿಲೋ ಮೀಟರ್ ದೂರ ಅಲೆಯುತ್ತಾರೆ ಎನ್ನುತ್ತಾರೆ ಅವರು.
ಖಂಡಿತ ಸಾಧುವಲ್ಲ: ‘ದಖ್ಖನ್ ಪ್ರಸ್ಥಭೂಮಿಯ ಬಯಲು ನಾಡಿನಲ್ಲಿ ನದಿಗಳ ಜೋಡಣೆ ಪರಿಶೀಲಿಸಬಹುದು. ಆದರೆ, ಪಶ್ಚಿಮ ಘಟ್ಟದಂತಹ ತೀರಾ ಸೂಕ್ಷ್ಮ ಪ್ರದೇಶಗಳಿಗೆ ಇದು ಖಂಡಿತ ಸಾಧುವಲ್ಲ’ ಎಂದು ಪರಿಸರ ತಜ್ಞ ಮಾಧವ ಗಾಡ್ಗೀಳ್ ಹಿಂದೆಯೇ ಹೇಳಿದ್ದಾರೆ. ಅಲ್ಲದೇ, ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಹೆಚ್ಚು ನೀರಿದೆ ಎಂಬುದನ್ನು ಯಾವ ವೈಜ್ಞಾನಿಕ ವರದಿಯೂ ಈವರೆಗೆ ನಿಖರವಾಗಿ ಹೇಳಿಲ್ಲ. ನದಿ ಜೋಡಣೆಯ ಕಲ್ಪನೆಯೇ ಅವೈಜ್ಞಾನಿಕ. ಬಯಲು ನಾಡಿನಲ್ಲಿ ಅತಿಯಾದ ವಾಣಿಜ್ಯ ಬೆಳೆಯಿಂದ ಎದುರಾಗಿರುವ ನೀರಿನ ಕೊರತೆ ನೀಗಿಸಲು, ಇಲ್ಲಿಂದ 30–40 ಟಿಎಂಸಿ ಅಡಿ ನೀರು ಒಯ್ಯುವ ಬದಲಾಗಿ, ಅಲ್ಲಿಯ ಕೆರೆಗಳ ಪುನರುಜ್ಜೀವನ, ಮಳೆ ನೀರು ಇಂಗಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂಬುದು ಸಸ್ಯವಿಜ್ಞಾನಿ ಡಾ.ಕೇಶವ ಕೊರ್ಸೆ ಅಭಿಪ್ರಾಯ.
220 ಹಳ್ಳಿಗಳಿಗೆ ಟ್ಯಾಂಕರ್ ನೀರು
ಉತ್ತರ ಕನ್ನಡ ಜಿಲ್ಲಾಡಳಿತದ ಮಾಹಿತಿಯಂತೆ 220ಕ್ಕೂ ಹೆಚ್ಚು ಹಳ್ಳಿಗಳಿಗೆ ಕಳೆದ ಬೇಸಿಗೆಯ ಎರಡು ತಿಂಗಳು ಟ್ಯಾಂಕರ್ ನೀರು ಪೂರೈಕೆ ಮಾಡಲಾಗಿದೆ. ಹಳಿಯಾಳ, ಮುಂಡಗೋಡ ತಾಲ್ಲೂಕು, ಬನವಾಸಿ ಹೋಬಳಿ ತೀವ್ರ ಜಲಸಂಕಟ ಅನುಭವಿಸುತ್ತಿವೆ.
** ಈಗ ಬೇಕಿರುವುದು ನೀರು ಸಾಗಿಸುವ ಯೋಜನೆಯಲ್ಲ. ಜಲ– ವನ ಸಂವರ್ಧನೆ, ಸುಸ್ಥಿರ, ನೈಸರ್ಗಿಕ ಸಂಪನ್ಮೂಲ ಉಳಿಸುವ ಮಲೆನಾಡು ಅಭಿವೃದ್ಧಿ ಯೋಜನೆ
–ಅನಂತ ಅಶೀಸರ, ಪರಿಸರ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.