ಸೋಮವಾರ, ಡಿಸೆಂಬರ್ 5, 2022
21 °C
ಜಿ.ಪಿ.ಎಸ್ ಆದವರಿಗೆ ತೊಂದರೆ ಕೊಡದಂತೆ ಅರಣ್ಯ ಇಲಾಖೆಗೆ ತಾಕೀತು: ಸಚಿವ ಕೋಟ

ಅರಣ್ಯ ಹಕ್ಕು ಸಮಸ್ಯೆ ಅಂತ್ಯಗೊಳಿಸಲು ಒಂದು ವಾರದಲ್ಲಿ ಸಭೆ: ಸಚಿವ ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಅರಣ್ಯ ಹಕ್ಕು ಬಗ್ಗೆ ಇರುವ ಗೊಂದಲಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಒಂದು ವಾರದಲ್ಲಿ ಎಲ್ಲ ಶಾಸಕರು, ಸಚಿವ ಶಿವರಾಮ ಹೆಬ್ಬಾರ ಮತ್ತು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಜೊತೆ ಸಭೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದಲ್ಲಿ ಬುಧವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅರಣ್ಯ ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಜಿ.ಪಿ.ಎಸ್ ಆದವರಿಗೆ ಮೂಲ ಸೌಕರ್ಯಗಳ ದುರಸ್ತಿಗೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟವಾದ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅರಣ್ಯ ಹಕ್ಕಿನಡಿ 88,453 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 2,855 ಅರ್ಜಿದಾರರಿಗೆ ಹಕ್ಕುಪತ್ರಗಳನ್ನು ಕೊಡಲಾಗಿದೆ. 69,505 ಸಾವಿರ ವಿಲೇ ಆಗಬೇಕಿದ್ದು, 16 ಸಾವಿರ ಅರ್ಜಿಗಳು ತನಿಖೆಯ ಹಂತದಲ್ಲಿವೆ’ ಎಂದು ಮಾಹಿತಿ ನೀಡಿದರು.

‘ಜಿ.ಪಿ.ಎಸ್ ಆದವರಿಗೆ ಹಕ್ಕುಪತ್ರ ಮಂಜೂರಿಗೆ ತೊಡಕು ಇರುವ ಬಗ್ಗೆ ದೂರುಗಳಿವೆ. ಮನೆ, ಆವರಣ ಗೋಡೆ, ರಸ್ತೆ, ಬಾವಿ ಮುಂತಾದ ಅಗತ್ಯ ಸೌಲಭ್ಯಗಳ ದುರಸ್ತಿಗೆ ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿರುವ ಬಗ್ಗೆ ಆರೋಪಗಳಿವೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಜಿ.ಪಿ.ಎಸ್ ಆಗಿರುವ ಅರ್ಜಿದಾರರಿಗೆ ಆಡಳಿತಾತ್ಮಕ ತೊಂದರೆಯಾಗದಂತೆ ತಾಕೀತು ಮಾಡಲಾಗಿದೆ. ಇದರಿಂದ ಜನರಿಗೆ ತೊಂದರೆ ಕಡಿಮೆಯಾಗುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೋವಿಡ್ ನಂತರ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಿಲ್ಲ. ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ರಚನೆ ಮಾಡಬೇಕು. ಈ ಸಂಬಂಧ ಬಾಕಿ ಇರುವ ಅರ್ಜಿಗಳ ತನಿಖೆಗೆ ಸೂಚನೆ ನೀಡಲಾಗಿದೆ. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳಿಗೆ ಈಗಿರುವ ಮಾರ್ಗದಲ್ಲೇ ಮರಗಳನ್ನು ಕಡಿಯದೇ ಅಭಿವೃದ್ಧಿಗೆ ಅವಕಾಶ ಕೊಡಲು ತಿಳಿಸಲಾಗಿದೆ’ ಎಂದೂ ಹೇಳಿದರು.

27 ಅರ್ಜಿ ಸಲ್ಲಿಕೆ:

‘ಮತ್ಸ್ಯಸಂಪದ ಯೋಜನೆಯಡಿ ಜಿಲ್ಲೆಯಿಂದ 27 ಅರ್ಜಿಗಳು ಸಲ್ಲಿಕೆಯಾಗಿವೆ. ಈಗ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ದೋಣಿಗಳ ಮಾದರಿಗಳು ಕರ್ನಾಟಕದ ಕರಾವಳಿಗೆ ಸೂಕ್ತವಾಗಿಲ್ಲ. ಆದ್ದರಿಂದ ಅವುಗಳನ್ನು ಪರ್ಸೀನ್ ದೋಣಿಗಳನ್ನಾಗಿ ಪರಿವರ್ತನೆ ಮಾಡುವಂತೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.

ಶಾಸಕಿ ರೂಪಾಲಿ ನಾಯ್ಕ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹಾಗೂ ಪ್ರಮುಖರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು