ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾವರ ಪ.ಪಂ: ಪುರಸಭೆ ದರ್ಜೆಗೇರಿಸಲು ಕಾತರ

ಅಲ್ಪ ಜನಸಂಖ್ಯೆ ಕೊರತೆಯಿಂದ ದಶಕಗಳ ಹಿಂದೆಯೇ ತಪ್ಪಿದ್ದ ಅವಕಾಶ
Published 24 ಮಾರ್ಚ್ 2024, 6:23 IST
Last Updated 24 ಮಾರ್ಚ್ 2024, 6:23 IST
ಅಕ್ಷರ ಗಾತ್ರ

ಹೊನ್ನಾವರ: ಹೆಚ್ಚಿನ ಜನಸಂಖ್ಯೆ, ಸಂಪನ್ಮೂಲಗಳನ್ನು ಹೊಂದಿದ್ದರೂ ಹೊನ್ನಾವರ ಪಟ್ಟಣ ಪಂಚಾಯಿತಿಯು ಪುರಸಭೆ ಮೇಲ್ದರ್ಜೆಗೇರಿಲ್ಲ ಎಂಬ ಅಪಸ್ವರ ಸಾರ್ವಜನಿಕ ವಲಯದಲ್ಲಿದೆ.

2011ರ ಜನಗಣತಿ ವೇಳೆ ಪಟ್ಟಣದ ಜನಸಂಖ್ಯೆ 19,109 ಇತ್ತು. ಪುರಸಭೆಯಾಗಲು ಕನಿಷ್ಠ 20 ಸಾವಿರ ಜನಸಂಖ್ಯೆ ಇರಬೇಕೆಂಬ ನಿಯಮ ಇದ್ದುದರಿಂದ ಆಗ ಕೇವಲ 900 ಜನಸಂಖ್ಯೆಯ ಕೊರತೆಯಿಂದ ಇದು ಅರ್ಹತಾ ಪಟ್ಟಿಯಿಂದ ಹೊರಗುಳಿಯುವಂತಾಗಿತ್ತು. ನಂತರದ ವರ್ಷಗಳಲ್ಲಿ ನಿಗದಿತ ಜನಸಂಖ್ಯೆಯ ಮಾನದಂಡ ಲಭ್ಯವಾದರೂ ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸಾಧ್ಯವಾಗಲಿಲ್ಲ.

ಹೊನ್ನಾವರವು 9.25 ಚ.ಕಿ.ಮೀ.ವಿಸ್ತೀರ್ಣ ಹೊಂದಿದ್ದು, 2019-20ನೇ ಸಾಲಿನಲ್ಲಿ ಇಲ್ಲಿ ₹1.5 ಕೋಟಿ ಮೊತ್ತದ ರಾಜಸ್ವ ಸಂಗ್ರಹವಾಗಿದೆ. ಶೇ 35.25 ಕೃಷಿಯೇತರ ಚಟುವಟಿಕೆಗಳಿದ್ದು, ಶೇ 36.15 ಉದ್ಯೋಗಾವಕಾಶಗಳಿವೆ ಎಂದು ಹಿಂದಿನ ಅಧ್ಯಯನಗಳಿಮದ ಅಂದಾಜಿಸಲಾಗಿದೆ. 20 ವಾರ್ಡ್‍ಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿಯ ಕಮಟೆಹಿತ್ತಲ, ವಡಗೇರಿ, ಉದ್ಯಮನಗರ, ಬಾಂದೇಗದ್ದೆ, ರಾಯಲಕೇರಿ, ಭಾಗಶಃ ತುಳಸಿನಗರ, ಸಾಳೇಹಿತ್ತಲ ಮತ್ತು ಜಡ್ಡಿಕೇರಿ ಇವುಗಳನ್ನು ಪ್ರಸ್ತಾವಿತ ಪುರಸಭೆಯ ವ್ಯಾಪ್ತಿಯ ಪ್ರದೇಶಗಳೆಂದು ಗುರುತಿಸಲಾಗಿದೆ.

ಶರಾವತಿ ನದಿಯಲ್ಲಿನ ಬೋಟಿಂಗ್, ಇಕೋ ಬೀಚ್, ಅಪ್ಸರಕೊಂಡ ಸೇರಿದಂತೆ ಪಟ್ಟಣ ಹಾಗೂ ಸುತ್ತಮುತ್ತ ಅಭಿವೃದ್ಧಿಗೊಂಡಿರುವ ತಾಣಗಳು ಇತ್ತೀಚಿನ ದಿನಗಳಲ್ಲಿ ಭಾರಿ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿನ ವಾಣಿಜ್ಯ ವಹಿವಾಟುಗಳು ಬೆಳೆಯುತ್ತಿವೆ. ಇದರ ಜತೆಗೆ ನೀರು, ರಸ್ತೆ ಮೊದಲಾದ ಮೂಲ ಸೌಕರ್ಯಗಳ ಪೂರೈಕೆ, ನಗರ ನೈರ್ಮಲೀಕರಣ ಮೊದಲಾದವುಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚುತ್ತಿವೆ ಎಂಬುದು ಜನರ ದೂರು.

‘ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಪುರಸಭೆ ಸ್ಥಾನಮಾನ ಸಿಕ್ಕರೆ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಅವಕಾಶ ಆಗುತ್ತದೆ. ಅಲ್ಲದೇ, ಅನುದಾನವೂ ದುಪ್ಪಟ್ಟಾಗುವುದರಿಂದ ಜನರಿಗೆ ಹೆಚ್ಚಿನ ಸೌಕರ್ಯ ಒದಗಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿಯ ಅಧಿಕಾರಿಯೊಬ್ಬರು.

‘ಪುರಸಭೆ ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಪ್ರಸ್ತಾವನೆ ಮತ್ತೊಮ್ಮೆ ಸಲ್ಲಿಕೆಯಾಗಿದ್ದು ಕಳೆದ ಫೆ.3ರಂದು ಪ್ರಸ್ತಾವನೆ ಶಿಫಾರಸ್ಸುಗೊಂಡು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯಕ್ಕೆ ರವಾನೆಯಾಗಿದೆ’ ಎಂದೂ ಹೇಳಿದರು.

ಪುರಸಭೆ ಆಗಬೇಕೆಂಬುದು ಜನರ ಒತ್ತಾಸೆಯಾಗಿದ್ದು ಪುರಸಭೆ ಆಗುವುದರಿಂದ ಪಟ್ಟಣದಲ್ಲಿ ಹೆಚ್ಚಿನ ಸೌಕರ್ಯಗಳನ್ನು ನಿರೀಕ್ಷಿಸಬಹುದು

- ಶಿವರಾಜ ಮೇಸ್ತ ಹೊನ್ನಾವರ ಪ.ಪಂ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT