ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಸರ್ಕಾರದಿಂದ ಈಡಿಗರಿಗೆ ಅನ್ಯಾಯ: ಪ್ರಣವಾನಂದ ಸ್ವಾಮೀಜಿ ಆರೋಪ

Published 3 ಮಾರ್ಚ್ 2024, 6:34 IST
Last Updated 3 ಮಾರ್ಚ್ 2024, 6:34 IST
ಅಕ್ಷರ ಗಾತ್ರ

ಕಾರವಾರ: 'ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರು ನಿಗಮಕ್ಕೆ ಅನುದಾನ ನೀಡದೆ ನಿರ್ಲಕ್ಷಿಸಲಾಗಿದೆ' ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು.

'ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಂಡಿಸಿದ ಎರಡು ಬಜೆಟ್‌ನಲ್ಲಿಯೂ ಈಡಿಗ ಸಮುದಾಯಕ್ಕೆ ತಾರತಮ್ಯವಾಗಿದೆ' ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

'ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಡಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ಸಿಕ್ಕಿತ್ತು, ಮೂವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ, ಒಬ್ಬರಿಗೆ ನಿಗಮ ಮಂಡಳಿ ಸ್ಥಾನ ಸಿಕ್ಕಿದೆ. ಸಮುದಾಯವನ್ನು ಅಧಿಕಾರದಿಂದ ದೂರವಿಡಲು ಯತ್ನಿಸುತ್ತಿರುವ ಪ್ರಯತ್ನ ನಡೆಯುತ್ತಿದೆ' ಎಂದು ದೂರಿದರು.

'ಸರ್ಕಾರ ಬ್ರಹ್ಮಶ್ರೀ ನಿಗಮಕ್ಕೆ ₹500 ಕೋಟಿ ಅನುದಾನ ಒದಗಿಸಬೇಕು. ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಪ್ರತಿಮೆ ಸ್ಥಾಪಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಮಾರ್ಚ್ 20 ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುತ್ತೇವೆ' ಎಂದರು.

'ಕಾಂತರಾಜ್ ವರದಿಯನ್ನು ಸರ್ಕಾರ ಕೂಡಲೆ ಬಿಡುಗಡೆ ಮಾಡಬೇಕು' ಎಂದೂ ಒತ್ತಾಯಿಸಿದರು.

'ಬಿ.ಎಸ್‌.ಯಡಿಯೂರಪ್ಪ ಅವರು ಈಡಿಗ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಮುದಾಯದ ಕೈ ಹಿಡಿದವರಿಗೆ ಗೌರವ ಅರ್ಪಿಸುವುದು ಸಮಾಜದ ಜವಾಬ್ದಾರಿ' ಎಂದರು.

'ಉತ್ತರ ಕನ್ನಡ ಮತ್ತು ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನಾಮಧಾರಿ ಸಮುದಾಯದ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಕೊಡಬೇಕು' ಎಂದರು.

'ಬಿ.ಕೆ.ಹರಿಪ್ರಸಾದ್ ಅವರ ರಾಜಕೀಯ ಹೇಳಿಕೆ ಸಮರ್ಥಿಸಿಕೊಳ್ಳುವುದಿಲ್ಲ. ಅವರು ಸಮುದಾಯದ ನಾಯಕರು. ಹೀಗಾಗಿ ಅವರನ್ನು ಬೆಂಬಲಿಸುತ್ತೇವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

'ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟ ವಿಚಾರದಲ್ಲಿ ರಾಜಕೀಯ ಮಾಡದೆ ಸೂಕ್ತ ತನಿಖೆ ನಡೆಯಬೇಕು' ಎಂದರು.

ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ ನಾಯ್ಕ, ಕಾರ್ಯದರ್ಶಿ ಉಲ್ಲಾಸ ನಾಯ್ಕ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ ಇದ್ದರು.

‘ರಾಜ್‌ ಕುಟುಂಬದ ಸದಸ್ಯರು ರಾಜಕೀಯಕ್ಕೆ ಬರುವುದು ಸೂಕ್ತವಲ್ಲ’

'ಡಾ.ರಾಜಕುಮಾರ ಮನಸ್ಸು ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು. ಆದರೆ ರಾಜಕೀಯದಿಂದ ಅವರು ದೂರ ಉಳಿದಿದ್ದರು. ಅವರ ಕುಟುಂಬದ ಸದಸ್ಯರಾದವರು ರಾಜಕೀಯಕ್ಕೆ ಬರುವುದು ಸೂಕ್ತವಲ್ಲ' ಎಂದು ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT