ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ ಕ್ಷೇತ್ರ ಸ್ಥಿತಿಗತಿ | ಮಲ್ಲಿಗೆ ನಾಡಲ್ಲಿ ಸೈದ್ಧಾಂತಿಕ ಸಂಘರ್ಷ

ಹಿಂದುತ್ವದ ಅಲೆಯಲ್ಲಿ ದಡ ಸೇರಲು ತವಕ: ಭಿನ್ನಮತದ ಏಟಿನ ಸಾಧ್ಯತೆ
Last Updated 24 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಕಾರವಾರ: ಮಲ್ಲಿಗೆ ಕಂಪಿನ ನಾಡು ಭಟ್ಕಳ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿಯನ್ನೂ ಹೊತ್ತಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಎದುರಾಳಿಗಳು.

ಹಾಲಿ ಶಾಸಕ ಬಿಜೆಪಿಯ ಸುನೀಲ್ ನಾಯ್ಕ ಕಳೆದ ಬಾರಿ ಹಿಂದುತ್ವದ ಅಲೆಯಲ್ಲಿ ಗೆಲುವಿನ ದಡ ಸೇರಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲದ ನಡುವೆಯೇ ಸುನೀಲ್‍ಗೆ ಮತ್ತೊಮ್ಮೆ ಪಕ್ಷ ಮಣೆ ಹಾಕಬಹುದು ಎಂಬ ಲೆಕ್ಕಾಚಾರವಿದೆ. 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಮಂಕಾಳು ವೈದ್ಯ ಕಳೆದ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಅವರೇ ಕೈ ಪಾಳಯದಿಂದ ಸ್ಪರ್ಧೆಗೆ ಇಳಿಯುವುದು ಬಹುತೇಕ ನಿಚ್ಚಳವಾಗಿದೆ.

2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮಂಕಾಳು ವೈದ್ಯಗೆ ಜೆಡಿಎಸ್ ಅಭ್ಯರ್ಥಿ ಇನಾಯತುಲ್ಲಾ ಶಾಬಂದ್ರಿ ಪ್ರಬಲ ಪೈಪೋಟಿ ನೀಡಿದ್ದರು. ಕಾಂಗ್ರೆಸ್, ಬಿಜೆಪಿ ನಂತರ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. 2018ರ ಚುನಾವಣೆಯಲ್ಲಿ ಇನಾಯತುಲ್ಲಾ ಸ್ಪರ್ಧೆಗೆ ತಂಜೀಮ್ ನಿರಾಕರಿಸಿತ್ತು. ತಂಜೀಮ್ ಬಹಿರಂಗವಾಗಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದನ್ನು ಸೈದ್ಧಾಂತಿಕವಾಗಿ ಬಿಜೆಪಿ ತನ್ನ ಮತ ಕ್ರೋಢೀಕರಣಕ್ಕೆ ಬಳಸಿಕೊಂಡಿತ್ತು. ಮುಸ್ಲಿಂ ಮತದಾರರೂ ನಿರ್ಣಾಯಕ ಪಾತ್ರ ವಹಿಸಲಿರುವ ಕಾರಣ ಈ ಬಾರಿ ತಂಜೀಮ್ ಅಧ್ಯಕ್ಷರೂ ಆಗಿರುವ ಇನಾಯತುಲ್ಲಾ ಪೈಪೋಟಿ ನೀಡುವ ನಿರೀಕ್ಷೆ ಹೊಂದಲಾಗಿತ್ತು.

ಜೆಡಿಎಸ್‍ನಿಂದ ಸ್ಪರ್ಧೆಗೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದ ಇನಾಯತುಲ್ಲಾಗೆ ಸ್ಪರ್ಧಿಸಿದಂತೆ ತಂಜೀಮ್ ಒತ್ತಡ ಹೇರಿದೆ. ಈಚೆಗೆ ಮತದಾನದ ಮೂಲಕ ತಂಜೀಮ್ ಕಾರ್ಯಕಾರಿ ಮಂಡಳಿ ಮುಸ್ಲಿಂ ಅಭ್ಯರ್ಥಿಗಳ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದೆ.

ಭಟ್ಕಳ ಮತ್ತು ಹೊನ್ನಾವರದ ಅರ್ಧ ಭಾಗವನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಬಿಜೆಪಿ 1990ರ ದಶಕದಿಂದ ಪ್ರಬಲವಾಗಿದೆ. ಕಾಂಗ್ರೆಸ್ ಕೂಡ ಅಷ್ಟೆ ಗಟ್ಟಿಯಾಗಿದೆ. ನಾಮಧಾರಿ, ಮೀನುಗಾರ, ಒಕ್ಕಲಿಗ, ದೇವಾಡಿಗ, ಬ್ರಾಹ್ಮಣ ಸಮುದಾಯದ ಮತಗಳು ಸಾಕಷ್ಟಿವೆ. ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸುವ ಜಿಲ್ಲೆಯ ಏಕೈಕ ಕ್ಷೇತ್ರ ಇದಾಗಿದೆ.

ಇಂದು.....

ಹಿಂದುತ್ವದ ಅಲೆಯಲ್ಲಿ ಗೆದ್ದಿದ್ದ ಶಾಸಕ ಸುನೀಲ್ ನಾಯ್ಕ ಈ ಬಾರಿ ಸ್ವಜನ ಪಕ್ಷಪಾತ, ದುರ್ವರ್ತನೆಯ ಆರೋಪ ಎದುರಿಸುತ್ತಿದ್ದಾರೆ. ಇದರಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿಯ ಹಲವು ಮೂಲ ಕಾರ್ಯಕರ್ತರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್‍ನಿಂದ ವಲಸೆ ಬಂದವರು ಎಂಬ ಹಣೆಪಟ್ಟಿ ಅವರಿಗೆ ಅಂಟಿಕೊಂಡಿದೆ. ಸದ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿರುವ ಗೋವಿಂದ ನಾಯ್ಕ ಅಭ್ಯರ್ಥಿಯಾಗಬೇಕು ಎಂಬ ಒತ್ತಾಯ ಬಿಜೆಪಿಯ ಕೆಲ ಕಾರ್ಯಕರ್ತರ ವಲಯದಲ್ಲಿದೆ.

ಪಕ್ಷೇತರರಾಗಿ ಸ್ಪರ್ಧಿಸಬೇಕೊ ಅಥವಾ ಕಾಂಗ್ರೆಸ್‍ನಿಂದ ಸ್ಪರ್ಧಿಸಬೇಕೊ ಎಂಬ ಗೊಂದಲದಲ್ಲಿದ್ದ ಮಂಕಾಳ ವೈದ್ಯ ಕಾಂಗ್ರೆಸ್ ಅಭ್ಯರ್ಥಿಯಾಗುವುದು ನಿಚ್ಚಳವಾಗಿದೆ. ಬಿಜೆಪಿಯ ಭಿನ್ನಮತ, ಮುಸ್ಲಿಂ ಅಭ್ಯರ್ಥಿ ಸ್ಪರ್ಧೆಗೆ ವಿರೋಧ ವರವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗುವ ಆಸೆಯಲ್ಲಿದ್ದ ಇನಾಯತುಲ್ಲಾ ಶಾಬಂದ್ರಿಗೆ ತಂಜೀಮ್ ಅಡ್ಡಗಾಲಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯಾಗಲು ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಪ್ರಯತ್ನದಲ್ಲಿದ್ದಾರೆ.

ಪೂರಕ ಮಾಹಿತಿ:ಮೋಹನ ನಾಯ್ಕ, ಎಂ.ಜಿ.ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT