ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವಕ್ಕೆ ಸಜ್ಜಾದ ಕಾರವಾರ

ನಗರದ ವಿವಿಧೆಡೆ ದೇವಿ ಮೂರ್ತಿ ಪ್ರತಿಷ್ಠಾಪನೆ, ದಾಂಡಿಯಾ ನೃತ್ಯಕ್ಕೆ ಸಿದ್ಧತೆ
Last Updated 28 ಸೆಪ್ಟೆಂಬರ್ 2019, 12:30 IST
ಅಕ್ಷರ ಗಾತ್ರ

ಕಾರವಾರ: ನವರಾತ್ರಿ ಹಬ್ಬದ ಆಚರಣೆಗೆ ಜಿಲ್ಲೆಯಾದ್ಯಂತ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಸೆ.29ರಿಂದ ಒಂಬತ್ತು ದಿನ ನಡೆಯುವ ದೇವಿ ಆರಾಧನೆಗೆ ಮೂರ್ತಿಗಳೂ ಸಿದ್ಧಗೊಳ್ಳುತ್ತಿವೆ.

ವಿವಿಧೆಡೆ ಮೂರ್ತಿ ತಯಾರಕರು ಭಕ್ತ ಮಂಡಳಿಗಳ ಆಸಕ್ತಿಗೆ ಅನುಸಾರವಾಗಿ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಶನಿವಾರ ಅಂತಿಮ ಸ್ಪರ್ಶ ನೀಡುತ್ತಿದ್ದುದು ಕಂಡುಬಂತು.

‘ನವರಾತ್ರಿ ಎಂದರೆ ತುಂಬ ಖುಷಿ ಕೊಡುವ ಹಬ್ಬ. ದೇವಿಯ ಆರಾಧನೆಗೆ ಭಕ್ತರು ಸಜ್ಜಾಗುತ್ತಿದ್ದರೆ, ಆ ಪೂಜೆಗೆ ಮೂರ್ತಿಗಳನ್ನು ಸಿದ್ಧಪಡಿಸಿಕೊಡುತ್ತೇವೆ ಎಂಬ ಹೆಮ್ಮೆ ನಮ್ಮದು’ ಎನ್ನುತ್ತಾರೆ ಕಳಸವಾಡದ ಸೋಮೇಶ್ವರ ಪಿ.ಆಚಾರಿ.

‘ನಮ್ಮ ತಂದೆ ಪ್ರೇಮಾನಂದ ಆಚಾರಿ ಅವರ ಕಾಲದಿಂದಲೂ ಅಂದರೆ, ಸುಮಾರು 60 ವರ್ಷಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದೇವೆ. ಗೋವಾದವರೆಗೂ ಮೂರ್ತಿಗಳನ್ನು ಕಳುಹಿಸುತ್ತೇವೆ. ಈ ಬಾರಿ ಸೆ.29ರಂದು ಬೆಳಿಗ್ಗೆ 8ಕ್ಕೆ ಬಹುತೇಕ ಕಡೆಗಳಲ್ಲಿ ಮೂರ್ತಿಗಳ ಪ್ರತಿಷ್ಠಾಪನೆನೆರವೇರಲಿದೆ’ ಎಂದು ಹೇಳಿದರು.

ನೃತ್ಯ ನಮನ: ನಗರದಲ್ಲಿ ಒಂಬತ್ತು ದಿನ ಪೂಜೆಯ ಸಂದರ್ಭದಲ್ಲೂ ದೇವಿಗೆ ನೃತ್ಯ ನಮನ ಸಲ್ಲಿಸಲಾಗುತ್ತದೆ. ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ದೇವಸ್ಥಾನ ಅಥವಾ ಮಂಟಪದ ಎದುರು ರಾತ್ರಿ 9ರ ಸುಮಾರಿಗೆ ನೃತ್ಯ ಹಮ್ಮಿಕೊಳ್ಳಲಾಗುತ್ತದೆ. ವಿವಿಧೆಡೆ ದಾಂಡಿಯಾ ನೃತ್ಯಗಳನ್ನು ಆಯೋಜಿಸುವ ಪದ್ಧತಿಯೂ ಇದೆ.

ಕುಂಠಿ ಮಹಾಮಾಯಾ ದೇವಸ್ಥಾನ, ಸಂತೋಷಿಮಾತಾ ದೇವಸ್ಥಾನ, ಕೆ.ಎಚ್‌.ಬಿ ಕಾಲೊನಿಯ ಗಣಪತಿ ದೇವಸ್ಥಾನದ ಸಭಾಂಗಣ, ಕಳಸವಾಡದ ಬಯಲು, ಗುನಗಿವಾಡಾ, ಖಾರ್ವಿ ವಾಡಾ, ಸಾಯಿಕಟ್ಟಾ, ಕೋಡಿಬಾಗ, ಸದಾಶಿವಗಡ ಮುಂತಾದೆಡೆ ದಾಂಡಿಯಾ ನೃತ್ಯದ ಆಕರ್ಷಣೆ ಇರುತ್ತದೆ.

ವ್ಯಾಪಾರಕ್ಕಾಗಿ ಗುಜರಾತ್‌ನಿಂದ ವಲಸೆ ಬಂದಿರುವ ಗುಜರಾತ್, ರಾಜಸ್ತಾನದವರು ಈ ನೃತ್ಯವನ್ನು ಇಲ್ಲಿ ಆರಂಭಿಸಿದರು. ಬಳಿಕ ಕಾರವಾರದ ಜನರಿಗೂ ಅದರಲ್ಲಿ ಆಸಕ್ತಿ ಬೆಳೆಯಿತು.

ಹೊಸ ಬಟ್ಟೆ ತೊಟ್ಟು, ಗೇಣುದ್ದದ ಜೋಡಿ ಕೋಲಿಗೆ ಬಣ್ಣದ ಕಾಗದ ಸುತ್ತಿ ನೃತ್ಯ ಮಾಡುತ್ತಾರೆ.ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತದಲ್ಲಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತ ಸಂಭ್ರಮಿಸುತ್ತಾರೆ. ಆ ನೃತ್ಯವನ್ನು ನೋಡಲು ನೂರಾರು ಜನರು ಸೇರಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT