ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಾಪುರ | ಮಂಗನ ಕಾಯಿಲೆ: ಗ್ರಾಮಸ್ಥರ ಆತ್ಮಸ್ಥೈರ್ಯ ಕುಸಿತ

ಸುಜಯ್ ಭಟ್
Published 27 ಫೆಬ್ರುವರಿ 2024, 7:20 IST
Last Updated 27 ಫೆಬ್ರುವರಿ 2024, 7:20 IST
ಅಕ್ಷರ ಗಾತ್ರ

ಸಿದ್ದಾಪುರ(ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚಿದ್ದು, ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ. ಕೃಷಿ ಚಟುವಟಿಕೆಗೂ ಅಡ್ಡಿಯಾಗಿದೆ ಅಲ್ಲದೇ ಜಿಡ್ಡಿ ಭಾಗದ ಜನರು ಪೇಟೆಗೆ ಹೋಗಲು ಬೇಸರ ಪಡುವಂತಾಗಿದೆ.

ತಾಲ್ಲೂಕಿನಲ್ಲಿ ಒಂದೂವರೆ ತಿಂಗಳಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕೊರ್ಲಕೈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 35, ಬಿಳಗಿ ವ್ಯಾಪ್ತಿಯಲ್ಲಿ 4, ಕೋಲಸಿರ್ಸಿ ವ್ಯಾಪ್ತಿಯಲ್ಲಿ 2, ಕ್ಯಾದಗಿ ಮತ್ತು ಹೇರೂರು ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ.

‘ಬೇಸಿಗೆಯಲ್ಲಿ ಬೆಟ್ಟ ಪ್ರದೇಶದಲ್ಲಿ ಬೀಳುವ ಒಣಗಿದ ಎಲೆ ಸಂಗ್ರಹಿಸಿ ತೋಟಕ್ಕೆ ಹಾಸಲಾಗುತ್ತದೆ. ಗೊಬ್ಬರ ಉತ್ಪಾದನೆಗೂ ಬಳಸಲಾಗುತ್ತದೆ. ಮಂಗನ ಕಾಯಿಲೆ ಕಾರಣಕ್ಕೆ ಆರೋಗ್ಯ ಇಲಾಖೆ ಬೆಟ್ಟ ಪ್ರದೇಶಕ್ಕೆ ತೆರಳದಂತೆ ನಿರ್ಬಂಧಿಸಿದೆ. ಇದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿದೆ’ ಎಂದು ಜಿಡ್ಡಿ ಗ್ರಾಮಸ್ಥರು ತಿಳಿಸಿದರು.

‘ಗ್ರಾಮದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಗ್ರಾಮಕ್ಕೆ ಹೊರಗಿನವರು ಬರಲು ಹಿಂಜರಿಯುತ್ತಾರೆ.  ಮನೆಗಳಿಗೆ ಬಂಧುಗಳು ಬರುತ್ತಿಲ್ಲ. ಗ್ರಾಮದ ಜನರು ಹೊರ ಹೋದರೆ ಅಸ್ಪೃಶ್ಯರಂತೆ ಕಾಣುತ್ತಾರೆ. ಪೇಟೆಗೆ ಹೋದರೆ ಜನರು ನಮ್ಮಿಂದ ದೂರ ಸರಿಯುತ್ತಾರೆ. ಇದರಿಂದ ಬೇಸರವಾಗಿದೆ’ ಎಂದು ಅಳಲು ತೋಡಿಕೊಂಡರು.

‘ಸ್ವಲ್ಪ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ. ಗೊಬ್ಬರಕ್ಕೆ ಸೊಪ್ಪು, ತರಗೆಲೆ ತರುವುದು ನಿತ್ಯದ ಕೆಲಸ. ಪ್ರತಿ ವರ್ಷ ಗೊಬ್ಬರ ಮಾರಿ ₹ 70 ಸಾವಿರ ಆದಾಯ ಗಳಿಸುತ್ತಿದ್ದೆ. ಆದರೆ, ಈ ಸಲ ಬೆಟ್ಟಕ್ಕೆ ಹೋಗದಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಹೀಗಾದರೆ ಬದುಕು ಸಾಗಿಸುವುದು ಕಷ್ಟ’ ಎಂದು ಗ್ರಾಮಸ್ಥ ಗಣಪತಿ ಮಡಿವಾಳ ಬೇಸರ ವ್ಯಕ್ತಪಡಿಸಿದರು.

ಸಿದ್ದಾಪುರ ತಾಲ್ಲೂಕಿನ ಮಂಡಗಳಲೆಯಲ್ಲಿ ಮಂಗ ಸಾವನ್ನಪ್ಪಿದ ಪ್ರದೇಶಕ್ಕೆ ಜನರ ಓಡಾಟ ನಿರ್ಬಂಧಿಸಲು ರಸ್ತೆ ಪಕ್ಕ ಆರೋಗ್ಯ ಇಲಾಖೆ ಅಳವಡಿಸಿದ ಫಲಕ
ಸಿದ್ದಾಪುರ ತಾಲ್ಲೂಕಿನ ಮಂಡಗಳಲೆಯಲ್ಲಿ ಮಂಗ ಸಾವನ್ನಪ್ಪಿದ ಪ್ರದೇಶಕ್ಕೆ ಜನರ ಓಡಾಟ ನಿರ್ಬಂಧಿಸಲು ರಸ್ತೆ ಪಕ್ಕ ಆರೋಗ್ಯ ಇಲಾಖೆ ಅಳವಡಿಸಿದ ಫಲಕ
ಸಿದ್ದಾಪುರ ತಾಲ್ಲೂಕಿನ ಮಂಡಗಳಲೆಯಲ್ಲಿ ಮಂಗ ಸಾವನ್ನಪ್ಪಿದ ಪ್ರದೇಶಕ್ಕೆ ಜನರ ಓಡಾಟ ನಿರ್ಬಂಧಿಸಲು ರಸ್ತೆ ಪಕ್ಕ ಆರೋಗ್ಯ ಇಲಾಖೆ ಅಳವಡಿಸಿದ ಫಲಕ.
ಸಿದ್ದಾಪುರ ತಾಲ್ಲೂಕಿನ ಮಂಡಗಳಲೆಯಲ್ಲಿ ಮಂಗ ಸಾವನ್ನಪ್ಪಿದ ಪ್ರದೇಶಕ್ಕೆ ಜನರ ಓಡಾಟ ನಿರ್ಬಂಧಿಸಲು ರಸ್ತೆ ಪಕ್ಕ ಆರೋಗ್ಯ ಇಲಾಖೆ ಅಳವಡಿಸಿದ ಫಲಕ.
ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜನ ಸ್ವಲ್ಪ ದಿನ ಅರಣ್ಯ ಪ್ರದೇಶಕ್ಕೆ ಹೋಗದಂತೆ ಎಚ್ಚರ ವಹಿಸುವುದು ಅನಿವಾರ್ಯ.
–ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉತ್ತರ ಕನ್ನಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT