ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಲಾಕ್‌ಡೌನ್‌ ವೇಳೆ ಹಳಿ ನಿರ್ವಹಣೆಗೆ ‘ಕೊಂಕಣ’ ಮನ್ನಣೆ

ಲಾಕ್‌ಡೌನ್ ಅವಧಿಯಲ್ಲಿ ರೈಲ್ವೇಯಿಂದ ಸರಕು ಸಾಗಣೆ ರೈಲುಗಳ ಸಂಚಾರ
Last Updated 14 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕಾರವಾರ:ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ರೈಲ್ವೇ ಇಲಾಖೆ ಕೂಡ ತನ್ನ ವಿವಿಧ ವಿಭಾಗಗಳ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ಕೊಂಕಣ ರೈಲ್ವೇಯು ಈ ಸಂದರ್ಭವನ್ನು ತನ್ನ ಹಳಿಗಳ ದುರಸ್ತಿ ಹಾಗೂ ನಿರ್ವಹಣೆಗೆ ಬಳಸಿಕೊಂಡಿದೆ.

ಹಳಿಗಳ ಕ್ಲಿಪ್ಪಿಂಗ್ ಸರಿಪಡಿಸುವುದು, ವೆಲ್ಡಿಂಗ್ ಕಾರ್ಯ, ರೈಲ್ವೇ ನಿರ್ವಹಣಾ ವ್ಯಾನ್ (ಆರ್.ಎಂ.ವಿ) ಮೂಲಕ ಹಳಿಗಳ ಪರಿಶೀಲನೆ ಸೇರಿದಂತೆ ಎಲ್ಲ ರೀತಿಯ ಸುರಕ್ಷತಾ ಕಾರ್ಯಗಳನ್ನೂ ನಿಗಮದ ಸಿಬ್ಬಂದಿ ಮಾಡುತ್ತಿದ್ದಾರೆ. ಕಾರವಾರ, ಭಟ್ಕಳ ಮತ್ತು ಉಡುಪಿಯಲ್ಲಿಆರ್.ಎಂ.ವಿ.ಗಳಿವೆ. ಅವುಗಳ ಮೂಲಕ ಪ್ರತಿ ದಿನ ಎರಡುಸಲ ಅಧಿಕಾರಿಗಳು ಸಂಚರಿಸಿ ಗುಣಮಟ್ಟ ಪರೀಕ್ಷಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಗಮನಿಸಲು ಕಷ್ಟವಾಗುವಂಥ ಸಣ್ಣ ಕೆಲಸಗಳನ್ನೂ ಈಗ ಮಾಡಲಾಗುತ್ತಿದೆ ಎಂದು ಕೊಂಕಣ ರೈಲ್ವೇಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲು ಮಾರ್ಗದಲ್ಲಿ ಪ್ರಯಾಣಿಕರ ರೈಲುಗಳ ಸಂಚಾರ ಅಧಿಕವಾಗಿರುತ್ತದೆ. ಲಾಕ್‌ಡೌನ್ ಮುಗಿದು ಜನಜೀವನ ಸಹಜವಾಗುವಷ್ಟರಲ್ಲಿ ಮಳೆಗಾಲ ಆರಂಭವಾಗುತ್ತದೆ. ಆಗ ರೈಲುಹಳಿಗಳುಸಾಗುವ ಸುರಂಗ ಮಾರ್ಗಗಳ, ಸೇತುವೆಗಳ ನಿರ್ವಹಣೆಯು ಸಿಬ್ಬಂದಿಗೆ ಒತ್ತಡದ ಕೆಲಸವಾಗುತ್ತದೆ. ಆದ್ದರಿಂದ ಅದನ್ನು ಈಗಲೇ ಪೂರ್ಣಗೊಳಿಸಲು ಗಮನ ಹರಿಸಲಾಗಿದೆ.

ಮಹಾರಾಷ್ಟ್ರದ ನವಿ ಮುಂಬೈನ ಬೇಲಾಪುರದಿಂದ ಆರಂಭವಾಗಿ ಮಂಗಳೂರು ಸಮೀಪದ ತೋಕುರುವರೆಗೂ ಇದೇ ರೀತಿಯ ನಿರ್ವಹಣಾ ಕಾರ್ಯವನ್ನು ಮಾಡಲಾಗುತ್ತಿದೆ. ಮಹಾರಾಷ್ಟ್ರದ ರತ್ನಗಿರಿ, ಗೋವಾಹಾಗೂ ಉತ್ತರ ಕನ್ನಡ ಕಾರವಾರ ಸುತ್ತಮುತ್ತ ಈಗಾಗಲೇ ಅಗತ್ಯ ಕೆಲಸಗಳನ್ನು ಪೂರೈಸಲಾಗಿದೆ.

ರೈಲ್ವೇ ಇಲಾಖೆಯ ಇತರ ವಿಭಾಗಗಳ ಮಾದರಿಯಲ್ಲೇ ಸದ್ಯಕ್ಕೆಕೊಂಕಣ ರೈಲ್ವೇ ಕೂಡ ಕೇವಲ ಸರಕು ಸಾಗಣೆಯ ರೈಲುಗಳ ಸಂಚಾರ ಮುಂದುವರಿಸಿದೆ. ಜೊತೆಗೇ ವಿಶಿಷ್ಟವಾದ ‘ರೋರೋ’ ಸೇವೆಯೂ ಚಾಲ್ತಿಯಲ್ಲಿದೆ.ಅವುಗಳ ಮೂಲಕ ಲಾಕ್‌ಡೌನ್ ಅವಧಿಯಲ್ಲಿಜೀವನಾವಶ್ಯಕ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ.‌

ಔಷಧಿ, ವಿವಿಧ ಚಿಕಿತ್ಸಾ ಸಲಕರಣೆಗಳು, ಮಂಗಳೂರಿನ ಎಂ.ಆರ್.ಪಿ.ಎಲ್‌.ನಿಂದ ಪೆಟ್ರೋಲಿಯಂ ಉತ್ಪನ್ನಗಳು, ಆಹಾರ ಸಾಮಗ್ರಿ, ಬೇಳೆ ಕಾಳು, ಅಡಿಕೆಯಂತಹ ಕೃಷಿ ಉತ್ಪನ್ನಗಳನ್ನು ಸಾಗಿಸಲಾಗುತ್ತಿದೆ.

ಪಾಳಿಗಳಲ್ಲಿ ಕೆಲಸ:‘ಕೊಂಕಣ ರೈಲ್ವೆಯಲ್ಲಿಅತ್ಯಂತ ಕಡಿಮೆ ಸಿಬ್ಬಂದಿಯನ್ನು ಬಳಸಿಕೊಂಡು ಪಾಳಿಗಳ ಮೂಲಕ ಕೆಲಸ ನಿರ್ವಹಿಸಲಾಗುತ್ತಿದೆ. ಕರ್ತವ‌್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ’ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

‘ಸದ್ಯ ಸರಕು ಸಾಗಣೆ ರೈಲುಗಳು ಮಾತ್ರ ಸಂಚರಿಸುತ್ತಿವೆ. ಹಾಗಾಗಿನಿಲ್ದಾಣಗಳಲ್ಲಿ ಕೇವಲ ಅತ್ಯಗತ್ಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಟೇಷನ್ ಮಾಸ್ಟರ್, ಪಾಯಿಂಟ್‌ಮೆನ್ ಹಾಗೂ ಲೋಕೋ ಪೈಲಟ್‌ಗಳು ಕರ್ತವ್ಯದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಕೊಂಕಣ ರೈಲ್ವೇ: ಅಂಕಿ ಅಂಶ

26 ಜೋಡಿ – ಪ್ರಯಾಣಿಕರ ರೈಲುಗಳು

5,566 – ಒಟ್ಟು ಸಿಬ್ಬಂದಿ

1,300 – ಸದ್ಯ ಕಾರ್ಯ ನಿರ್ವಹಿಸುವವರು

741 ಕಿ.ಮೀ – ಹಳಿಯ ಒಟ್ಟು ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT