ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕೊಂಕಣಿ ಭಾಷಿಕರ ಕನ್ನಡ ಪ್ರೇಮ

ಸ್ವಂತ ವೆಚ್ಚ ಭರಿಸಿ ಪಾತ್ರ ನಿಭಾಯಿಸುವ ರಂಗಭೂಮಿ ಕಲಾವಿದರು
Last Updated 4 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಕಾರವಾರ: ಗೋವಾ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ಕೊಂಕಣಿ ಭಾಷಿಕರ ಸಂಖ್ಯೆ ಹೆಚ್ಚಿದೆ. ಇಲ್ಲಿನ ಜನರು ಮಾತೃಭಾಷೆಯ (ಕೊಂಕಣಿ) ಜತೆಗೆ ನಾಡಭಾಷೆ (ಕನ್ನಡ) ಪ್ರೀತಿಸುವಲ್ಲಿ ರಂಗಭೂಮಿಯ ಪಾತ್ರ ಪ್ರಮುಖವಾಗಿದೆ.

ನವೆಂಬರ್ ತಿಂಗಳಿನಿಂದ ಆರಂಭಿಸಿ ಮೇ ವರೆಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಾಲು ಸಾಲು ಜಾತ್ರೆ, ದೇವಸ್ಥಾನಗಳ ಉತ್ಸವಗಳು ನಡೆಯುತ್ತಿರುತ್ತವೆ. ಅಂದಾಜಿನ ಪ್ರಕಾರ ಕೇವಲ ಆರು ತಿಂಗಳ ಅವಧಿಯಲ್ಲೇ ತಾಲ್ಲೂಕಿನಲ್ಲಿ 290ಕ್ಕೂ ಹೆಚ್ಚು ಕಡೆಗಳಲ್ಲಿ ಅಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ.

ಹೀಗೆ ನಡೆಯುವ ಉತ್ಸವ, ಜಾತ್ರೆಗಳಲ್ಲಿ ನಾಟಕ ಪ್ರದರ್ಶಿಸುವುದನ್ನು ಕಾರವಾರಿಗರು ರೂಢಿಸಿಕೊಂಡಿದ್ದಾರೆ. ಇದು ಇಲ್ಲಿನ ಕಡ್ಡಾಯ ಪರಂಪರೆಯಾಗಿ ಜಾರಿಯಲ್ಲಿದೆ. ಈ ಮೊದಲು ಕೆಲವೆಡೆ ಜಾತ್ರೆಗಳಲ್ಲಿ ಮರಾಠಿ ಭಾಷೆಯ ನಾಟಕ ಪ್ರದರ್ಶಿಸುವ ವಾಡಿಕೆ ಇತ್ತು. ಗಡಿಭಾಗ ಮಾಜಾಳಿ, ದೇವಭಾಗದಲ್ಲಿ ದಶಕಗಳ ಹಿಂದೆ ಅಂತಹ ಪದ್ಧತಿ ಹೆಚ್ಚಿತ್ತು.

ಆದರೆ ಈಗ ಕನ್ನಡ ಭಾಷೆಯ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳುತ್ತಿವೆ. ಜತೆಗೆ ಕೊಂಕಣಿ, ಮರಾಠಿ ಭಾಷೆಯ ನಾಟಕಗಳನ್ನೂ ಪ್ರದರ್ಶಿಸಲಾಗುತ್ತಿದೆ. ವರ್ಷಕ್ಕೆ ಸರಾಸರಿ 250ಕ್ಕೂ ಹೆಚ್ಚು ಕನ್ನಡ ನಾಟಕಗಳು ಪ್ರದರ್ಶನ ಗೊಳ್ಳುತ್ತಿರುವುದು ಜನರಲ್ಲಿ ಕನ್ನಡ ಭಾಷೆಯ ಕಲಿಕೆಗೂ ನೆರವಾಗುತ್ತಿದೆ.

‘ತಾಲ್ಲೂಕಿನಲ್ಲಿ ಬಹುಪಾಲು ಕೊಂಕಣಿ ಮಾತೃಭಾಷಿಕರಿದ್ದಾರೆ. ಮನೆಗಳಲ್ಲಿ ಕೊಂಕಣಿ ಬಳಕೆ ಹೆಚ್ಚಿರುವ ಕಾರಣ ಕನ್ನಡ ಕಲಿಕೆ ಕೆಲವರಿಗೆ ಕಷ್ಟವಾಗುತ್ತಿತ್ತು. ಈಚಿನ ವರ್ಷಗಳಲ್ಲಿ ಬಹುಪಾಲು ಜನರು ಕನ್ನಡ ಕಲಿತಿದ್ದಾರೆ. ಈ ರೀತಿಯ ಬದಲಾವಣೆಗೆ ರಂಗಭೂಮಿಯ ಕೊಡುಗೆ ಹೆಚ್ಚಿದೆ’ ಎನ್ನುತ್ತಾರೆ ಹಣಕೋಣದ ಸಾಕಾರ ಕಲಾ ಸಂಘದ ಸುನೀಲ ನಾಯ್ಕ.

‘ಕನ್ನಡ ನಾಟಕಗಳ ಪ್ರದರ್ಶನಕ್ಕೆ ಈ ಭಾಗದಲ್ಲಿ ಒಲವು ಹೆಚ್ಚು. ಗಡಿಭಾಗದ ಮಾಜಾಳಿ, ದೇವಭಾಗದಲ್ಲಿಯೂ ಕನ್ನಡ ನಾಟಕಗಳ ಪ್ರದರ್ಶನಕ್ಕೆ ಬೇಡಿಕೆ ಇದೆ. ಮಹಾದೇವ ದೇವಸ್ಥಾನದ ಜಾತ್ರೆಯಿಂದ ಆರಂಭಿಸಿ ಬಂಡಿಹಬ್ಬದವರೆಗೆ ನಡೆಯುವ ಉತ್ಸವಗಳಲ್ಲೆಲ್ಲ ನಾಟಕ ಪ್ರದರ್ಶನಕ್ಕೆ ಒತ್ತು ನೀಡಲಾಗುತ್ತಿದೆ. ಈಗಿನ ಪೀಳಿಗೆಯವರಿಗೂ ಕನ್ನಡ ಕಲಿಕೆಯತ್ತ ನಾಟಕಗಳು ಆಸಕ್ತಿ ಮೂಡಿಸಿವೆ’ ಎನ್ನುತ್ತಾರೆ ಗೀತಾಂಜಲಿ ಕಲಾಬಳಗದ ಕೃಷ್ಣಾನಂದ ನಾಯ್ಕ.

ಸ್ವಂತ ವೆಚ್ಚ ಭರಿಸುತ್ತೇವೆ:

‘ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆ, ವಾರ್ಷಿಕೋತ್ಸವದ ವೇಳೆ ಸಮಿತಿಯವರು ನಾಟಕ ಪ್ರದರ್ಶನಕ್ಕೆ ಆಹ್ವಾನಿಸುತ್ತಾರೆ. ಕೆಲವರು ಪೂರ್ಣ ಹಣ ಪಾವತಿಸಿದರೆ ಮತ್ತೆ ಕೆಲವರು ಅರ್ಧದಷ್ಟು ಪಾವತಿಸುತ್ತಾರೆ. ಉಳಿದ ಮೊತ್ತವನ್ನು ತಂಡದ ಕಲಾವಿದರು ಭರಿಸಿ ನಾಟಕ ಪ್ರದರ್ಶಿಸುವ ರೂಢಿಯೂ ಇದೆ’ ಎನ್ನುತ್ತಾರೆ ಕೃಷ್ಣಾನಂದ ನಾಯ್ಕ.

‘ಕಲಾವಿದರೇ ಸೇರಿ ರಂಗಭೂಮಿ ಕಲಾವಿದರ ವೇದಿಕೆ ರಚಿಸಿಕೊಂಡಿದ್ದೇವೆ. ವರ್ಷಕ್ಕೊಮ್ಮೆ ಗ್ರಾಮೀಣ ಭಾಗದಲ್ಲಿ ಕನ್ನಡ ನಾಟಕ ಪ್ರದರ್ಶಿಸಲಾಗುತ್ತಿದೆ. ಕಲಾವಿದರೇ ಮೊತ್ತ ಭರಿಸಿಕೊಳ್ಳುವ ರೂಢಿ ಇಟ್ಟುಕೊಳ್ಳಲಾಗಿದೆ. ರಂಗಭೂಮಿ ಉಳಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ರಾಮಾ ನಾಯ್ಕ.

------------------

ಕಾರವಾರದಲ್ಲಿ ಜಾತ್ರೆ, ಉತ್ಸವಗಳಲ್ಲಿ ನಾಟಕ ಪ್ರದರ್ಶನಕ್ಕೆ ಸಿಗುತ್ತಿರುವ ಉತ್ತೇಜನ ಭಾಷಾ ಸಾಮರಸ್ಯ ವೃದ್ಧಿಸುವ ಜತೆಗೆ ಕನ್ನಡ ಭಾಷೆಯನ್ನು ಗಡಿಭಾಗದಲ್ಲಿ ಉಳಿಸಲು ನೆರವಾಗುತ್ತಿದೆ.

ರಾಮಾ ನಾಯ್ಕ

ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT