ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಟಾ: ಉದ್ಯಾನ ರೂಪಿಸಿ ಒತ್ತುವರಿ ತಡೆದರು!

Published 27 ಮೇ 2024, 1:20 IST
Last Updated 27 ಮೇ 2024, 1:20 IST
ಅಕ್ಷರ ಗಾತ್ರ

ಕುಮಟಾ (ಉತ್ತರ ಕನ್ನಡ ಜಿಲ್ಲೆ): ಅರಣ್ಯ ಭೂಮಿ ಒತ್ತುವರಿ ತಡೆಯುವ ನಿಟ್ಟಿನಲ್ಲಿ ಪಟ್ಟಣದ ಸಿದ್ಧನಬಾವಿ ವಾರ್ಡ್ ವ್ಯಾಪ್ತಿಯ ಸಮಾನ ಮನಸ್ಕರ ತಂಡವು ರೂಪಿಸಿದ ಉದ್ಯಾನ ಹಚ್ಚಹಸಿರಿನಿಂದ ಕಳಗೊಳಿಸುತ್ತಿದೆ.

ಪಟ್ಟಣದ ಅಂಚಿನಲ್ಲಿರುವ ಸಿದ್ದನಬಾವಿ ವಾರ್ಡ್ ಪ್ರದೇಶಕ್ಕೆ ಹೊಂದಿಕೊಂಡು ಅರಣ್ಯವಿದೆ. ಅರಣ್ಯದ ಕೆಲವು ಭಾಗ ಒತ್ತುವರಿಯಾಗಿತ್ತು. ಇನ್ನೂ ಖಾಲಿ ಇದ್ದ ಜಾಗದಲ್ಲಿ ಒತ್ತುವರಿ ಆಗಬಹುದು ಎಂಬ ಆತಂಕದಲ್ಲಿದ್ದ ಸ್ಥಳೀಯ ನಿವಾಸಿಗಳಾದ ಕೆಲ ನಿವೃತ್ತ ಸರ್ಕಾರಿ ನೌಕರರು, ಸಾರ್ವಜನಿಕರು ಚರ್ಚಿಸಿ ಉದ್ಯಾನ ರೂಪಿಸಲು ನಿರ್ಧರಿಸಿದ್ದರು.

‘ಸುಮಾರು 10 ಗುಂಟೆ ಜಾಗದಲ್ಲಿ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಹಣ್ಣು, ಔಷಧಿ, ಕಾಡಿನ ಜಾತಿ ಸಸಿಗಳನ್ನು ನೆಡಲಾಗಿತ್ತು. ಜಾನುವಾರು ತಿನ್ನದಂತೆ ಸುತ್ತಲೂ ತಂತಿಬೇಲಿ ಅಳವಡಿಸಿದ್ದೆವು. ನೂರಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿ ಅವುಗಳ ಬುಡದಲ್ಲಿ ಫಲಕವನ್ನೂ ಅಳವಡಿಸಿದ್ದೆವು. ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಈ ಭಾಗ ಒತ್ತುವರಿದಾರರಿಗೆ ಸಿಲುಕದೆ ಸುರಕ್ಷಿತವಾಗಿಸಿದ ನೆಮ್ಮದಿ ಸಿಕ್ಕಿದೆ’ ಎನ್ನುತ್ತಾರೆ ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಹೆಗಡೆ.

‘ಉದ್ಯಾನಕ್ಕೆ ‘ಸಿದ್ಧನವನ’ ಎಂದು ಹೆಸರಿಟ್ಟಿದ್ದೇವೆ. ಉದ್ಯಾನದಲ್ಲಿನ ಗಿಡಗಳಿಗೆ ಪ್ರತಿ ಎರಡು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಕಾಲಕಾಲಕ್ಕೆ ಗೊಬ್ಬರ ನೀಡುವುದು ಸೇರಿದಂತೆ ಸಸಿಗಳ ಆರೈಕೆ, ಉದ್ಯಾನದ ತಂತಿಬೇಲಿ ರಕ್ಷಣೆ ಸೇರಿದಂತೆ ನಿರ್ವಹಣೆ ಸಲುವಾಗಿ ವಾರ್ಡ್ ವ್ಯಾಪ್ತಿಯ ಸುಮಾರು 72 ಜನರಿಂದ ತಲಾ ₹2 ಸಾವಿರದಂತೆ ದೇಣಿಗೆ ಸಂಗ್ರಹಿಸಿದ್ದೇವೆ. ಈ ಮೊತ್ತ ಬಳಸಿ ಅರಣ್ಯದ ಮಾದರಿಯ ಉದ್ಯಾನ ಬೆಳೆಸುತ್ತಿದ್ದೇವೆ’ ಎಂದು ವಿವರಿಸಿದರು.

‘ಕೆಲವರು ತಮ್ಮ ಅಥವಾ ಮಕ್ಕಳ ಜನ್ಮದಿನ, ವಿವಾಹ ವಾರ್ಷಿಕೋತ್ಸವದ ನೆನಪಿಗೆ ಗಿಡಗಳಿಗೆ ಉಚಿತವಾಗಿ ನೀರು ಸರಬರಾಜು ಮಾಡಿದ್ದಾರೆ’ ಎಂದು ಸ್ಥಳೀಯರಾದ ಆರ್.ಎಚ್.ದೇಶಭಂಡಾರಿ, ಎನ್.ಜಿ.ಭಟ್ಟ, ಬಿ.ಜಿ.ಗುನಿ, ಖೈರನ್ ಮಾಸ್ತರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT