ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ವೈದ್ಯರ ಕೊರತೆ: ಪಶು ಚಿಕಿತ್ಸಾಲಯದ ಬಾಗಿಲಿಗೆ ‘ಬೀಗ’

ಆರೋಗ್ಯ ಸೇವೆ ವ್ಯತ್ಯಯದಿಂದ ಹೈನುಗಾರಿಕೆ ಕುಂಠಿತ
Published : 26 ಆಗಸ್ಟ್ 2024, 6:16 IST
Last Updated : 26 ಆಗಸ್ಟ್ 2024, 6:16 IST
ಫಾಲೋ ಮಾಡಿ
Comments

ಕಾರವಾರ: ಕೃಷಿ, ಮೀನುಗಾರಿಕೆಯಂತೆ ಹೈನುಗಾರಿಕೆಯೂ ಜಿಲ್ಲೆಯ ಜನರ ಜೀವನೋಪಾಯಕ್ಕೆ ಮುಖ್ಯ ಆಧಾರಸ್ತಂಭ. ಆದರೆ, ಪಶು ಸಂಗೋಪನಾ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯು ಹೈನುಗಾರಿಕೆ ವೃತ್ತಿಯಿಂದ ಜನರು ಹಿಂದೆ ಸರಿಯಲು ಕಾರಣವಾಗುತ್ತಿದೆ ಎಂಬ ಆರೋಪವಿದೆ.

ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಕಾಣಸಿಗುವ ‘ಬಾಗಿಲು ಮುಚ್ಚಿದ’ ಪಶು ಚಿಕಿತ್ಸಾಲಯಗಳು ಈ ಆರೋಪಕ್ಕೆ ಪುಷ್ಟಿ ನೀಡುತ್ತವೆ. ವೈದ್ಯರು ಇರಬೇಕಾದ ಜಾಗದಲ್ಲಿ ಡಿ ದರ್ಜೆಯ ನೌಕರ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇಲಾಖೆಗೆ ಬಂದೊದಗಿದೆ.

84 ಪಶು ಚಿಕಿತ್ಸಾಲಯ, 12 ತಾಲ್ಲೂಕು ಪಶು ಆಸ್ಪತ್ರೆ, 26 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಇದ್ದರೂ ಬಹುತೇಕ ಕಡೆ ವೈದ್ಯರೇ ಇಲ್ಲದ ಸ್ಥಿತಿ ಇದೆ. ಶೇ.78 ರಷ್ಟು ಸಿಬ್ಬಂದಿ ಇಲ್ಲದ ಇಲಾಖೆಗೆ ಹೈನುಗಾರರಿಗೆ ಸೇವೆ ಒದಗಿಸುವುದು ಕಷ್ಟದಾಯಕವಾಗುತ್ತಿದೆ ಎಂಬುದು ಇಲಾಖೆಯ ಅಧಿಕಾರಿಗಳ ಅಳಲು.

ಶಿರಸಿ ನಗರ ಸೇರಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ಇಲ್ಲದ ಪರಿಣಾಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದೆ. ತಾಲ್ಲೂಕಿನಲ್ಲಿ 24 ಪಶು ಚಿಕಿತ್ಸಾ ಕೇಂದ್ರಗಳಿದ್ದು, ಕೇವಲ 3ರಿಂದ 4 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರ ಭಾಗದಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿದ್ದು, ಚಿಕಿತ್ಸೆ ನೀಡುವವರಿಲ್ಲದೆ ರೋಗಪೀಡಿತ ಪಶುಗಳು ಸಾವನ್ನಪ್ಪುತ್ತಿವೆ.

‘ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ನಿಭಾಯಿಸುವುದು ಕಷ್ಟ’ ಎಂಬುದಾಗಿ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಗಜಾನನ ಹೇಳುತ್ತಾರೆ.

ಹೊನ್ನಾವರ ತಾಲ್ಲೂಕಿನಲ್ಲಿ ಜಾನುವಾರುಗಳನ್ನು ಸಾಕುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಪಶು ವೈದ್ಯರ ಕೊರತೆ ಇದೆ. ಪ್ರತಿ ಬಾರಿ ಕೆಡಿಪಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗುತ್ತಿದ್ದರೂ, ಸಮಸ್ಯೆ ಬಗೆಹರಿಯುತ್ತಿಲ್ಲ. ಸಂಚಾರಿ ಪಶು ಚಿಕಿತ್ಸಾಲಯ ಕೂಡ ಕಳೆದ ಒಂದು ವಾರದಿಂದ ಕೆಟ್ಟು ನಿಂತಿದೆ.

ಅಂಕೋಲಾ ತಾಲ್ಲೂಕಿನ ಹಲವು ಪಶು ಚಿಕಿತ್ಸಾಲಯಗಳಲ್ಲಿ ಮೂರು ವರ್ಷಗಳಿಂದ ವೈದ್ಯರ ಕೊರತೆ ಕಾಡುತ್ತಿದೆ. ಕೊಡ್ಲಗದ್ದೆ, ರಾಮನಗುಳಿ, ಹಲವಳ್ಳಿ, ಹಿಲ್ಲೂರು, ಅಗಸೂರು, ಅಡಿಗೋಣ, ಬಾಸಗೋಡ, ಹಾರವಾಡ ಭಾಗದಲ್ಲಿ ಸುಸಜ್ಜಿತ ಪಶು ಚಿಕಿತ್ಸಾಲಯ ಕಟ್ಟಡವಿದ್ದರೂ, ವೈದ್ಯರಿಲ್ಲ.

ಹಳಿಯಾಳ ಮುಖ್ಯ ಪಶು ವೈದ್ಯಾಧಿಕಾರಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 9 ಪಶು ವೈದ್ಯಾಧಿಕಾರಿ, ಜಾನುವಾರು ಅಧಿಕಾರಿ ಹುದ್ದೆಗಳು ಖಾಲಿ ಇದೆ. ಮುರ್ಕವಾಡ, ತೇರಗಾಂವ, ಭಾಗವತಿ, ಯಡೋಗಾ ಪಶು ಚಿಕಿತ್ಸೆ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ವೈದ್ಯರು ನೇಮಕಗೊಂಡಿದ್ದು, ಈವರೆಗೂ ವೈದ್ಯರು ಹಾಜರಾಗಿಲ್ಲ.

‘ಮೈತ್ರಿ’ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಿದ್ದು, ಪ್ರತಿ ಮನೆ ಬಾಗಿಲಿಗೆ ತೆರಳಿ ದನ ಕರುಗಳಿಗೆ ಲಸಿಕೆಯನ್ನು ನೀಡುತ್ತಿದ್ದಾರೆ. ತೀವ್ರ ಸಮಸ್ಯೆ ಇದ್ದಾಗ ಪಶು ವೈದ್ಯರು ತೆರಳಿ ಲಸಿಕೆ, ಇನ್ನಿತರ ಚಿಕಿತ್ಸೆ ನೀಡುತ್ತಾರೆ’ ಎಂದು ಪಶು ವೈದ್ಯಾಧಿಕಾರಿ ಡಾ.ಕೆ.ಎಂ.ನದಾಫ್ ಹೇಳುತ್ತಾರೆ.

ಮುಂಡಗೋಡ ತಾಲ್ಲೂಕಿನಲ್ಲಿ ಪಶು ಆಸ್ಪತ್ರೆಗಳಿದ್ದರೂ ಸಿಬ್ಬಂದಿ ಕೊರತೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ಕೆಲವೆಡೆ ಸುಸಜ್ಜಿತ ಕಟ್ಟಡಗಳಿದ್ದರೂ ವೈದ್ಯರ ಕೊರತೆಯಿದೆ. ಇನ್ನೂ ಕೆಲವೆಡೆ 'ಡಿ' ದರ್ಜೆಯ ಸಿಬ್ಬಂದಿಯೇ ಪಶು ಆಸ್ಪತ್ರೆ ತೆರೆಯುವ ಕೆಲಸ ಮಾಡುತ್ತಿದ್ದಾರೆ.

ಪಶುಪಾಲನೆ ಕಸುಬು ಮಾಡಿಕೊಂಡು ಬಂದಿರುವ ದನಗರ ಗೌಳಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗುಂಜಾವತಿ, ಕಳಕಿಕೇರಾ, ಗೋದ್ಘಾಳ, ಬಸನಾಳ, ಯರೇಬೈಲ್, ಕುಸೂರ, ಕೆಂದಲಗೇರಿ, ಬಸನಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಪಶು ಆಸ್ಪತ್ರೆಯ ಸೌಲಭ್ಯಕ್ಕೆ ಬೇಡಿಕೆ ಇದೆ.

‘ಪಾಳಾ, ಚಿಗಳ್ಳಿ, ಬಾಚಣಕಿ, ಇಂದೂರ ಸೇರಿದಂತೆ ಹಲವೆಡೆ ಹೈನುಗಾರಿಕೆ ಮಾಡುವ ರೈತರ ಸಂಖ್ಯೆ ಹೆಚ್ಚಿದೆ. ಪಶು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ’ ಎಂದು ಹೈನುಗಾರ ಗುಡ್ಡಪ್ಪ ಕಾತೂರ ಹೇಳಿದರು.

ಭಟ್ಕಳ ತಾಲ್ಲೂಕಿನ ಭಟ್ಕಳ, ಮುರುಡೇಶ್ವರ, ಬೆಂಗ್ರೆ, ಕುಂಟವಾಣಿ, ಕಟಗಾರಕೊಪ್ಪ ಹಾಗೂ ಬೈಲೂರಿನಲ್ಲಿ ಒಟ್ಟೂ 6 ಆಸ್ಪತ್ರೆಗಳಿವೆ. ಒಟ್ಟೂ 6 ಆಸ್ಪತ್ರೆಗಳಿಗೆ ಒಬ್ಬರೇ ಸರ್ಕಾರಿ ವೈದ್ಯರಿದ್ದಾರೆ. ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಇದೆ.

ಯಲ್ಲಾಪುರ ತಾಲ್ಲೂಕಿನ ಕಿರವತ್ತಿ, ಅಲ್ಕೇರಿ ಗೌಳಿವಾಡಾ, ತೆಂಗಿನಗೇರಿ, ಮದನೂರು ಸುತ್ತಮುತ್ತಲ ಪ್ರದೇಶದಲ್ಲಿ ಪರಂಪರಾಗತವಾಗಿ ದನಸಾಕುತ್ತ ಬಂದ ಗೌಳಿ ಸಮುದಾಯದವರಿದ್ದಾರೆ. ಆದರೆ ಈ ಪ್ರದೇಶದಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ ಎನ್ನುವ ಆರೋಪವಿದೆ. ಕಿರವತ್ತಿಯಲ್ಲಿ ಪಶು ಚಿಕಿತ್ಸಾಲಯ ಇದ್ದರೂ ಅಲ್ಲಿ ವೈದ್ಯರ ಕೊರತೆ ಇದೆ.

ಕುಮಟಾ ತಾಲ್ಲೂಕಿನಲ್ಲಿ ಖಾಲಿ ಇರುವ ಒಟ್ಟೂ 9 ಪಶು ವೈದ್ಯರ ಹುದ್ದೆಗಳ ಪೈಕಿ ಇಬ್ಬರನ್ನು ಮಾತ್ರ ಭರ್ತಿ ಮಾಡಲಾಗಿದೆ. ‘ಪಶು ವೈದ್ಯರ ಹುದ್ದೆ ಖಾಲಿ ಇರುವ ಗ್ರಾಮೀಣ ಪಶು ಆಸ್ಪತ್ರೆಗಳಲ್ಲಿ ಮೈತ್ರಿ ಕಾರ್ಯಕರ್ತರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಹಿರಿಯ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ ಹೆಗಡೆ ಹೇಳುತ್ತಾರೆ.

ಸಿದ್ದಾಪುರ ತಾಲ್ಲೂಕಿನಲ್ಲಿ 13 ಪಶುವೈದ್ಯ ಸಂಸ್ಥೆಗಳಿಂದ 40 ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಕೊರತೆಯಿಂದ ಜಾನುವಾರುಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದು ಕಷ್ಟವಾಗಿದೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಅಂಕಿ–ಅಂಶ

ಪಶು ಸಂಗೋಪನಾ ಇಲಾಖೆಯಲ್ಲಿನ ಹುದ್ದೆಗಳ ವಿವರ

ಹುದ್ದೆ;ಮಂಜೂರು;ಭರ್ತಿ;ಖಾಲಿ

ಉಪನಿರ್ದೇಶಕ;02;02;00

ಸಹಾಯಕ ನಿರ್ದೇಶಕ;15;05;10

ಪಶುವೈದ್ಯ ಅಧಿಕಾರಿ;114;15;99

ಜಾನುವಾರು ಅಭಿವೃದ್ಧಿ ಅಧಿಕಾರಿ;12;08;04

ಜಾನುವಾರು ಅಧಿಕಾರಿ;11;08;03

ಹಿರಿಯ ಪಶುವೈದ್ಯಕೀಯ ಪರೀಕ್ಷಕ;47;13;34

ಪಶುವೈದ್ಯಕೀಯ ಪರೀಕ್ಷಕ;75;16;59

ಪಶುವೈದ್ಯಕೀಯ ಸಹಾಯಕ;70;31;39

ವಾಹನ ಚಾಲಕ;13;01;12

ಡಿ–ದರ್ಜೆ ನೌಕರ;236;20;216

ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದ ಪಶು ಆಸ್ಪತ್ರೆಯು ಬಾಗಿಲು ಮುಚ್ಚಿಕೊಂಡಿರುವುದು.
ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದ ಪಶು ಆಸ್ಪತ್ರೆಯು ಬಾಗಿಲು ಮುಚ್ಚಿಕೊಂಡಿರುವುದು.
ಇಲಾಖೆಯಲ್ಲಿ ಕಾಯಂ ವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲವು ವೈದ್ಯರ ನೇಮಕಾತಿ ಮಾಡಲಾಗಿದೆ. ಬಹುತೇಕ ವೈದ್ಯರು ಇನ್ನಷ್ಟೆ ಕರ್ತವ್ಯಕ್ಕೆ ಹಾಜರಾಗಬೇಕಿದೆ.
ಡಾ.ಮೋಹನ ಕುಮಾರ್ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ
ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಿಸಿದರೆ ಗ್ರಾಮೀಣ ಭಾಗದಲ್ಲಿ ಹೈನುಗಾರರು ಜಾನುವಾರು ಸಾಕಣೆಗೆ ಆಸಕ್ತಿ ತೋರಿಸುತ್ತಾರೆ.
ಮಹಾಲೇಶ್ವರ ಜಿವೋಜಿ ಬಸವಳ್ಳಿ (ಹಳಿಯಾಳ)‌ ರೈತ
ವೈದ್ಯರು ಇಲ್ಲದಿರುವ ಸಮಯದಲ್ಲಿ ಆಸ್ಪತ್ರೆಯ ಸಹಾಯಕರು ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಔಷಧ ನೀಡುತ್ತಾರೆ. ಕಿರವತ್ತಿಯಲ್ಲಿ ಪಶುಚಿಕಿತ್ಸಾಲಯಕ್ಕೆ ಕಾಯಂ ವೈದ್ಯರನ್ನು ನೇಮಿಸಬೇಕು.
ರಾಮು ಮಲಗೊಂಡೆ ಅಲ್ಕೇರಿ ಗೌಳಿವಾಡಾ (ಯಲ್ಲಾಪುರ) ಹೈನುಗಾರ
ಹಳ್ಳಿಯಲ್ಲಿ ಪಶು ಚಿಕಿತ್ಸಾಲಯ ಇದ್ದರೂ ವೈದ್ಯರಿಲ್ಲದ ಕಾರಣಕ್ಕೆ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿವೆ.
ಗೋವಿಂದ ಗೌಡ ಅಗಸೂರ (ಅಂಕೋಲಾ) ಹೈನುಗಾರ
ನೂರಾರು ಕಿ.ಮೀ ಬೈಕ್‍ನಲ್ಲೇ ಸುತ್ತಬೇಕು!
ಜೊಯಿಡಾ ತಾಲ್ಲೂಕಿನಲ್ಲಿ ಒಟ್ಟು 9 ಪಶು ವೈದ್ಯಾಧಿಕಾರಿ ಹುದ್ದೆ ಮಂಜೂರಾತಿ ಇದ್ದು ತಾಲ್ಲೂಕು ವೈದ್ಯಾಧಿಕಾರಿ ಸೇರಿದಂತೆ ಇಬ್ಬರು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಬಾರವಾಡ ಉಳವಿ ಗುಂದ ರಾಮನಗರ ಜಗಲಪೇಟ ಆಖೇತಿಯಲ್ಲಿನ ಆರು ಆಸ್ಪತ್ರೆಗಳ ಪೈಕಿ ಒಬ್ಬರೇ ವೈದ್ಯರಿದ್ದಾರೆ. ‘ಸೂಕ್ತ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿದಿನವೂ ಸುಮಾರು 150 ರಿಂದ 200 ಕಿ.ಮೀ ದ್ವಿಚಕ್ರ ವಾಹನದಲ್ಲಿ ಹಳ್ಳಿಗಳಿಗೆ ಜಾನುವಾರುಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ ನೀಡಲು ಓಡಾಡುವ ಸ್ಥಿತಿ ಬಂದಿದೆ’ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಒಬ್ಬರು. ‘ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ಆರೋಗ್ಯ ಸೇವೆ ನೀಡಲು ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಮಂಜಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT