ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನನೆಗುದಿಗೆ ಇ.ವಿ.ಚಾರ್ಜಿಂಗ್ ಕೇಂದ್ರ ಸ್ಥಾಪನೆ ಯೋಜನೆ

ಹೆಸ್ಕಾಂ ಶಿರಸಿ ವೃತ್ತದಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಸಿಗದ ಅನುಮೋದನೆ
Published 27 ಮೇ 2023, 4:47 IST
Last Updated 27 ಮೇ 2023, 4:47 IST
ಅಕ್ಷರ ಗಾತ್ರ

ಕಾರವಾರ: ಹೆದ್ದಾರಿಗಳ ಅಂಚಿನಲ್ಲಿ, ಸರ್ಕಾರಿ ಕಚೇರಿ ಆವರಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ (ಇ.ವಿ. ಚಾರ್ಜಿಂಗ್ ಸೆಂಟರ್) ಸ್ಥಾಪನೆ ಯೋಜನೆ ನನೆಗುದಿಗೆ ಬಿದ್ದಿದೆ.

ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡಲು ಸಲಹೆ ನೀಡುತ್ತಿದೆ. ಇದಕ್ಕೆ ಅನುಗುಣವಾಗಿ ವಾಹನಗಳ ಖರೀದಿ ಮೇಲೆ ಸಹಾಯಧನವನ್ನೂ ನೀಡಲಾಗುತ್ತಿದೆ. ಆದರೆ ವಾಹನಗಳ ಬಳಕೆಗೆ ತಕ್ಕ ವ್ಯವಸ್ಥೆ ಇಲ್ಲ ಎಂಬುದು ಗ್ರಾಹಕರ ಆರೋಪ.

ದ್ವಿಚಕ್ರ ವಾಹನ, ಕಾರುಗಳು ಸೇರಿದಂತೆ ಎಲ್ಲ ವಿಧದ ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜಿಂಗ್ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಇ.ವಿ.ಚಾರ್ಜಿಂಗ್ ಕೇಂದ್ರ ಸ್ಥಾಪಿಸುವುದಾಗಿ ಇಂಧನ ಇಲಾಖೆ ತಿಳಿಸಿತ್ತು. ಆದರೆ ಹೆಸ್ಕಾಂನಿಂದ ಜಿಲ್ಲೆಯ 28 ಸ್ಥಳಗಳಲ್ಲಿ ಕೇಂದ್ರ ಸ್ಥಾಪನೆಗೆ ಸಲ್ಲಿಕೆಯಾಗಿದ್ದ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿಲ್ಲ. ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಖಾಸಗಿ ಕಂಪನಿಯ ಇ.ವಿ.ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅನುಮತಿ ಸಿಕ್ಕಿದೆ.

ಏನಿದು ಚಾರ್ಜಿಂಗ್ ಕೇಂದ್ರ?

ವಾಹನಗಳಿಗೆ ಇಂಧನ ಭರ್ತಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಸ್ಥಾಪಿಸಿದ ಪೆಟ್ರೋಲ್ ಬಂಕ್‍ಗಳ ಮಾದರಿಯಲ್ಲೇ ವಿದ್ಯುತ್‍ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಬೇಕಿದೆ. ಇಲ್ಲಿ ವೇಗವಾಗಿ ವಾಹನ ಚಾರ್ಜಿಂಗ್ ಮಾಡುವ ಸೌಲಭ್ಯ ಒದಗಿಸಲಾಗುತ್ತದೆ. ಮನೆಗಳಲ್ಲಿ ಒಂದು ವಾಹನ ಪೂರ್ತಿ ಚಾರ್ಜ್ ಆಗಲು ಸರಾಸರಿ ಮೂರು ಗಂಟೆ ತಗುಲಿದರೆ ಚಾರ್ಜಿಂಗ್ ಕೇಂದ್ರಗಳಲ್ಲಿ ಒಂದು ತಾಸಿನ ಅವಧಿಯಲ್ಲೇ ವಾಹನ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲಿದೆ.

ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಕಡೆಯಲ್ಲಿ ಮಾತ್ರ ಖಾಸಗಿ ಕಂಪನಿಗಳು ಇ.ವಿ.ಚಾರ್ಜಿಂಗ್ ಕೇಂದ್ರ ಸ್ಥಾಪಿಸಿವೆ. ಹೊನ್ನಾವರ, ಹಳಿಯಾಳ, ಶಿರಸಿಯಲ್ಲಿ ಮಾತ್ರ ಇವು ಕಾಣಸಿಗುತ್ತಿವೆ. ಅದರ ಹೊರತಾಗಿ ಉಳಿದೆಡೆ ಚಾರ್ಜಿಂಗ್ ಕೇಂದ್ರಗಳಿಲ್ಲ.

ಇ.ವಿ.ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಿ ಪ್ರಸ್ತಾವ ಸಲ್ಲಿಸಲಾಗಿತ್ತು. ಕಾರಣಾಂತರದಿಂದ ಅದಕ್ಕೆ ಅನುಮೋದನೆ ಸಿಕ್ಕಿಲ್ಲ.
-ದೀಪಕ್ ಕಾಮತ್, ಹೆಸ್ಕಾಂ ಶಿರಸಿ ವೃತ್ತದ ಎಸ್.ಇ.

‘ವಿದ್ಯುತ್‍ಚಾಲಿತ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನಗಳು ಹೆಚ್ಚು ದೂರ ಸಂಚರಿಸಲು ಸಾಧ್ಯವಾಗದು. ಹೆದ್ದಾರಿಗಳ ಪಕ್ಕದಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ ಮಾಡಿದರೆ ಸವಾರರಿಗೆ ಅನುಕೂಲವಾಗಲಿದೆ. ಪರಿಸರ ಸ್ನೇಹಿ ವಾಹನ ಬಳಕೆಗೆ ಒತ್ತು ನೀಡುತ್ತೇವೆ ಎಂಬುದು ಕೇವಲ ಘೋಷಣೆಗೆ ಸೀಮಿತವಾದಂತಿದೆ. ಅದಕ್ಕೆ ಪೂರಕ ಕ್ರಮಗಳ ಜಾರಿಯಾಗುತ್ತಿಲ್ಲ’ ಎಂದು ಕುಮಟಾದ ಶಶಿಧರ್ ಶೇಟ್ ಬೇಸರ ವ್ಯಕ್ತಪಡಿಸಿದರು.  

ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರಿಗೆ ಅನುಕೂಲ ಕಲ್ಪಿಸಲು ಇ.ವಿ.ಚಾರ್ಜಿಂಗ್ ಕೇಂದ್ರಗಳನ್ನು ಹೆದ್ದಾರಿಗಳ ಪಕ್ಕದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಬೇಕು.
ಭಾನುಕುಮಾರ್. ವಿದ್ಯುತ್ ಚಾಲಿತ ವಾಹನಗಳ ಮಾರಾಟಗಾರ
ಎಲ್ಲೆಲ್ಲಿ ಜಾಗ ಗುರುತು? ರಾಜ್ಯ ಹೆದ್ದಾರಿ ಹಾದುಹೋಗಿರುವ ಶಿರಸಿ ನಗರದ 7 ಕಡೆಗಳಲ್ಲಿ ಸಿದ್ದಾಪುರ ತಾಲ್ಲೂಕಿನ ಕೊಂಡ್ಲಿ ಗ್ರಾಮದಲ್ಲಿ ಯಲ್ಲಾಪುರ ಮತ್ತು ಮುಂಡಗೋಡದಲ್ಲಿ ತಲಾ ಒಂದು ಕಡೆಯಲ್ಲಿ ಹಳಿಯಾಳ ಪಟ್ಟಣದ 5 ಸ್ಥಳಗಳಲ್ಲಿ ದಾಂಡೇಲಿಯ 6 ಕಡೆಗಳಲ್ಲಿ ಅಂಕೋಲಾದ 3 ಕುಮಟಾ ಕಾರವಾರ ಹೊನ್ನಾವರ ಮತ್ತು ಭಟ್ಕಳದ ತಲಾ ಒಂದು ಸ್ಥಳದಲ್ಲಿ ಇ.ವಿ.ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಸ್ಥಳಗಳೆಲ್ಲವೂ ವಿವಿಧ ಸರ್ಕಾರಿ ಕಚೇರಿಗಳ ಆವರಣಗಳೇ ಆಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT