ಸೋಮವಾರ, ಡಿಸೆಂಬರ್ 5, 2022
19 °C
ಭೂ ಸ್ವಾಧೀನ: ದರ ನಿಗದಿ ಸಭೆಯಲ್ಲಿ ತೀರ್ಮಾನ

ಮುಡಗೇರಿ ಕೈಗಾರಿಕಾ ಪ್ರದೇಶ: ಎಕರೆಗೆ ₹ 50 ಲಕ್ಷ ಪರಿಹಾರಕ್ಕೆ ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ ಮುಡಗೇರಿಯಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಪ್ರತಿ ಎಕರೆಗೆ ₹ 50 ಲಕ್ಷ ಪರಿಹಾರ ನೀಡುವಂತೆ ಶಿಫಾರಸು ಮಾಡಲು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮುಡಗೇರಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 73 ಎಕರೆ ಭೂ ಸ್ವಾಧೀನ ಕುರಿತು ರಾಜ್ಯ ಸರ್ಕಾರವು, 1997ರಲ್ಲಿ ಮೊದಲ ಅಧಿಸೂಚನೆ ಹೊರಡಿಸಿತ್ತು. ಅಂತಿಮ ಅಧಿಸೂಚನೆಯು 2005ರಲ್ಲಿ ಪ್ರಕಟವಾಗಿತ್ತು. ಆಗ ಹಮ್ಮಿಕೊಳ್ಳಲಾಗಿದ್ದ ಪರಿಹಾರ ಬೆಲೆ ನಿಗದಿ ಸಭೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆ.ಐ.ಡಿ.ಬಿ) ಪ್ರತಿ ಎಕರೆಗೆ ₹ 1.10 ಲಕ್ಷ ವಿತರಿಸುವುದಾಗಿ ತಿಳಿಸಿತ್ತು. ಆದರೆ, ಅದಕ್ಕೆ ಭೂಮಾಲೀಕರು ಸಹಮತ ತೋರಿರಲಿಲ್ಲ.

ಭೂಸ್ವಾಧೀನ ವಿಚಾರವು ಹಾಗೇ ಉಳಿದು, ಎರಡನೇ ಬಾರಿಗೆ ಬೆಲೆ ನಿಗದಿ ಸಭೆಯು 2011ರಲ್ಲಿ ನಡೆಯಿತು. ಆಗ ಕೆ.ಐ.ಡಿ.ಬಿ.ಯು ಪ್ರತಿ ಎಕರೆಗೆ ₹ 10 ಲಕ್ಷ ಪರಿಹಾರ ಪ್ರಕಟಿಸಿತ್ತು. ಆಗಲೂ ಭೂಮಾಲೀಕರು ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ಅಂತಿಮ ನಿರ್ಣಯಕ್ಕೆ ಬರುವ ಸಲುವಾಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು.

ಜಮೀನು ಮಾಲೀಕರಾದ ಶಿವಕಿರಣ ನಾಯ್ಕ, ರಾಜೇಂದ್ರ ಬಾನಾವಳಿ, ವಿಕಾಸ ಗಾಂವಕರ್, ಆರತಿ ಬಾನಾವಳಿ ಸೇರಿದಂತೆ ಹಲವರು ಮಾತನಾಡಿ, ‘ಕೈಗಾರಿಕೆಗಾಗಿ ಸ್ವಾಧೀನ ಮಾಡಲಾಗುವ ಜಮೀನಿಗೆ ಪ್ರತಿ ಎಕರೆಗೆ ಕನಿಷ್ಠ ₹ 50 ಲಕ್ಷ ಪರಿಹಾರ ಕೊಡಬೇಕು’ ಎಂದು ಬೇಡಿಕೆ ಮಂಡಿಸಿದರು.

‘ಸ್ವಾಧೀನ ಪಡಿಸಿಕೊಂಡ ಜಮೀನಿನಲ್ಲಿ ಆರಂಭಿಸುವ ಕೈಗಾರಿಕೆಗಳಲ್ಲಿ, ಜಮೀನು ಕಳೆದುಕೊಂಡ ಕುಟುಂಬಗಳಿಗೆ ತಲಾ ಒಂದು ಉದ್ಯೋಗ ನೀಡಬೇಕು. ಮಾಲಿನ್ಯ ಮಾಡದ ಕೈಗಾರಿಕೆಗಳನ್ನು ಆರಂಭಿಸಬೇಕು. ಜಮೀನು ಮಾಲೀಕರಿಗೆ  ತಕ್ಷಣವೇ ನಿರಾಶ್ರಿತರ ಪ್ರಮಾಣಪತ್ರ ವಿತರಿಸಬೇಕು. ಅಲ್ಲದೇ ಕಾರವಾರದಲ್ಲೇ ಪರಿಹಾರ ವಿತರಿಸಬೇಕು’ ಎಂದು ಒತ್ತಾಯಿಸಿದರು.

ಕೆ.ಐ.ಡಿ.ಬಿ.ಯ ವಿಶೇಷ ಭೂ ಸ್ವಾಧೀನಾಧಿಕಾರಿ ಮಮತಾ ಪ್ರತಿಕ್ರಿಯಿಸಿ, ‘ಸರ್ಕಾರದ ಮಾರ್ಗದರ್ಶಿ ದರದಂತೆ ಲೆಕ್ಕಾಚಾರ ಮಾಡಿದಾಗ ಮುಡಗೇರಿಯ ತರಿ ಜಮೀನಿಗೆ ಪ್ರಸ್ತುತ ಎಕರೆಗೆ ₹ 23.76 ಲಕ್ಷ ಪರಿಹಾರ ನೀಡಬಹುದು. ಮಾರುಕಟ್ಟೆಯಲ್ಲಿ ಪ್ರಚಲಿತವಿರುವ ದರವನ್ನು ಪರಿಗಣಿಸಿದಾಗ ಎಕರೆಗೆ ₹ 45.34 ಲಕ್ಷ ನೀಡಲು ಸಾಧ್ಯವಿದೆ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ‘ಇಲ್ಲಿ ಭೂ ಸ್ವಾಧೀನ ಸಂಬಂಧ ಮೊದಲ ಅಧಿಸೂಚನೆ ಪ್ರಕಟವಾಗಿ 25 ವರ್ಷಗಳಾದವು. ಉದ್ದೇಶಿತ ಕೈಗಾರಿಕಾ ಪ್ರದೇಶದ ಜಮೀನಿನಲ್ಲಿ ಕೃಷಿಯಾಗಲೀ ಉದ್ಯಮಗಳಾಗಲೀ ಇಲ್ಲ. ಈ ಭೂಸ್ವಾಧೀನ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ಪ್ರತಿ ಎಕರೆಗೆ ₹ 50 ಲಕ್ಷ ನಿಗದಿಯಾಗಲಿ’ ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ಮಮತಾ, ‘ಈ ಶಿಫಾರಸಿನ ಬಗ್ಗೆ ಕೆ.ಐ.ಡಿ.ಬಿ.ಯ ಮುಂದಿನ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು’ ಎಂದರು.

‘ಮತ್ತಷ್ಟು ಸ್ವಾಧೀನಕ್ಕೆ ಪ್ರಸ್ತಾಪ’:

‘ಮುಡಗೇರಿಯಲ್ಲಿ ಕೈಗಾರಿಕೆಗಾಗಿ ಇನ್ನೂ 200 ಎಕರೆ ಜಮೀನು ಭೂ ಸ್ವಾಧೀನದ ಪ್ರಸ್ತಾಪವಿದೆ. ಆ ಜಮೀನುಗಳ ಮಾಲೀಕರಿಗೂ ಎಕರೆಗೆ ₹ 50 ಲಕ್ಷದಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

‘ಈಗ ಮಾಡಲಾಗಿರುವ ಶಿಫಾರಸಿಗೆ ಕೆ.ಐ.ಡಿ.ಬಿ.ಯಿಂದ ಅನುಮೋದನೆ ಸಿಕ್ಕಿ, ಹಣ ಬಿಡುಗಡೆಯಾಗಲಿದೆ. ಬಳಿಕ ಜಮೀನು ಮಾಲೀಕರಿಗೆ ಸ್ಥಳೀಯವಾಗಿ ಪರಿಹಾರ ಜಮೆ ಮಾಡುವಂತೆ ತಿಳಿಸಲಾಗಿದೆ. ಅದಕ್ಕೆ ಬೇಕಾಗಿರುವ ಎಲ್ಲ ದಾಖಲೆಗಳನ್ನು ನೀಡಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ಜಯಂತ ಇದ್ದರು.

–––

* ಮುಡಗೇರಿಯ ಸಮಸ್ಯೆ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರಿಗೆ ಮನವರಿಕೆ ಮಾಡಿದ್ದೆ. ಅದಕ್ಕೆ ಅವರು ಸ್ಪಂದಿಸಿದ್ದು, ರೈತರಿಗೆ ಉತ್ತಮ ಬೆಲೆ ದೊರೆಯಲಿದೆ.

– ರೂಪಾಲಿ ನಾಯ್ಕ, ಶಾಸಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು