ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡದ ಸಮಸ್ಯೆ ನಿವಾರಿಸಲು ಪ್ರಧಾನಿಗೆ ಪತ್ರ; ಆರ್.ವಿ. ದೇಶಪಾಂಡೆ

Published 28 ಏಪ್ರಿಲ್ 2024, 16:06 IST
Last Updated 28 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಶಿರಸಿ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಮಾರ್ಗ ಯೋಜನೆ ಅನುಷ್ಠಾನ ವಿಳಂಬ, ಅರಣ್ಯ ಹಕ್ಕು ಸಮಸ್ಯೆ, ವಿವಿಧ ಯೋಜನಾ ನಿರಾಶ್ರಿತರಿಗೆ ಉದ್ಯೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳ ನಿವಾರಿಸುವಂತೆ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.

ನಗರದ ಸುಪ್ರಿಯಾ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ‘ಕ್ಷೇತ್ರದ ಸಂಸದರು ನಿಷ್ಕ್ರಿಯರಾದ ಕಾರಣ ಹಲವು ಸಮಸ್ಯೆಗಳಿಗೆ ಪರಿಹಾರವೇ ಸಿಕ್ಕಿಲ್ಲ. ಹೀಗಾಗಿ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿ ನನ್ನ ಜವಾಬ್ದಾರಿ ನಿಭಾಯಿಸಬೇಕಿದೆ’ ಎಂದರು. 

‘ಜಿಲ್ಲೆಯಲ್ಲಿ ಅಂಕೋಲಾ- ಹುಬ್ಬಳ್ಳಿ ಮತ್ತು ತಾಳಗುಪ್ಪ- ಹೊನ್ನಾವರ ರೈಲು ಕಾಮಗಾರಿ ಎರಡು ದಶಕಗಳು ಕಳೆದರೂ ಮುಕ್ತಾಯವಾಗಿಲ್ಲ. ಅರಣ್ಯ ಹಕ್ಕುಗಳ ಕಾಯಿದೆ ಅಡಿ ಸಾಂಪ್ರದಾಯಿಕ ಅರಣ್ಯ ನಿವಾಸಿಗಳಿಗೆ ಹಕ್ಕುಗಳ ಗುರುತಿಸುವಿಕೆಗೆ ಸಂಬಂಧಿಸಿದಂತೆ ಅನೇಕ ನಿವಾಸಿಗಳಿಗೆ ಅರಣ್ಯ ಹಕ್ಕು ನೀಡಲಾಗಿಲ್ಲ. ಈ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರವು ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆಯ ಬಗೆ ಪತ್ರದಲ್ಲಿ ತಿಳಿಸಲಾಗಿದೆ’ ಎಂದರು. 

ಕೈಗಾ ಮತ್ತು ಸೀ ಬರ್ಡ್ ಯೋಜನೆಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಿಲ್ಲ. ಈ ಬಗ್ಗೆ ಆದ್ಯತೆ ನೀಡುವ ಅಗತ್ಯ ಇದೆ  ಎಂದ ಅವರು, ಕೊಂಕಣ ರೈಲ್ವೆ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಅವಶ್ಯಕತೆ ಇದೆ ಎಂದರು.

‘ಕಾರವಾರ- ಭಟ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಮುಕ್ತಾಯಗೊಳಿಸಬೇಕು. ಕುಣಬಿ ಮತ್ತು ಹಾಲಕ್ಕಿ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕು. ಕಾರವಾರ, ಗೋಕರ್ಣದ ಬಳಿಯ ಓಂ ಬೀಚ್, ಮುರ್ಡೇಶ್ವರ, ಭಟ್ಕಳ ಮತ್ತು ಕಾಸರಕೋಡ್ ಕಡಲತೀರಗಳಲ್ಲಿ ಕ್ರೀಡೆಗಳು ಮತ್ತು ಸಂಬಂಧಿತ ಚಟುವಟಿಕೆ ಪ್ರಾರಂಭಿಸಬೇಕು. ಗೋಕರ್ಣವನ್ನು ವಾರಣಾಸಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಖಾನಾಪುರದಿಂದ ಭಟ್ಕಳಕ್ಕೆ ರಾಷ್ಟ್ರೀಯ ಹೆದ್ದಾರಿ ಅವಶ್ಯಕತೆ ಇದ್ದು, ಇದರ ಅನುಷ್ಠಾನಕ್ಕೆ ಮುಂದಾಗಬೇಕು. ಅಂಕೋಲಾದ ನಾಗರಿಕ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆಗಳಿಗೆ ತ್ವರಿತ ಚಾಲನೆ ನೀಡಬೇಕು. ಮೀನುಗಾರರಿಗೆ ಸಮುದ್ರದ ಕಾರ್ಯಾಚರಣೆಗಳಿಗೆ ಡೀಸೆಲ್ ಸಬ್ಸಿಡಿ, ಕೇಂದ್ರ ನೀಡಿದ ಗುರುತಿನ ಚೀಟಿ, ಸಮುದ್ರದಲ್ಲಿ ನಾಪತ್ತೆಯಾದ ಮೀನುಗಾರರಿಗಾಗಿ ತ್ವರಿತ ಶೋಧ ಪ್ರಯತ್ನ, ಅವರ ಕುಟುಂಬಗಳಿಗೆ ಅಗತ್ಯ ನೆರವು, ದೋಣಿಗಳಿಗೆ ವಿಮೆ ಸೇರಿದಂತೆ ಹಲವಾರು ಸೌಲಭ್ಯ ನೀಡಬೇಕು. ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ ಮತ್ತು ಭಟ್ಕಳದ ಪ್ರಮುಖ ಸ್ಥಳಗಳಲ್ಲಿ ಬಂದರು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಲಾಗಿದೆ’ ಎಂದರು. 

ಶಾಸಕ ಭೀಮಣ್ಣ ನಾಯ್ಕ, ಪಕ್ಷದ ಪ್ರಮುಖರಾದ ವೆಂಕಟೇಶ ಹೆಗಡೆ, ರವೀಂದ್ರ ನಾಯ್ಕ, ಅಬ್ಬಾಸ್ ತೋನ್ಸೆ, ಸಂತೋಷ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT