ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ವರ್ಷಾಂತ್ಯಕ್ಕೆ ಮದ್ಯ ಮಾರಾಟ ಬಂಪರ್

ಎರಡು ವರ್ಷದ ಬಳಿಕ ಪ್ರವಾಸಿಗರಿಂದ ಭರ್ತಿಯಾಗಿದ್ದ ರೆಸಾರ್ಟ್, ಹೊಟೆಲ್‍ಗಳು
Last Updated 2 ಜನವರಿ 2023, 22:45 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಕರಾಳತೆಯಿಂದ ಹೊರಬಂದ ಪ್ರವಾಸೋದ್ಯಮ ಈ ಬಾರಿಯ ವರ್ಷಾಂತ್ಯಕ್ಕೆ ಮದ್ಯ ಮಾರಾಟ ಕ್ಷೇತ್ರಕ್ಕೆ ಅದೃಷ್ಟ ತಂದುಕೊಟ್ಟಿದೆ. ಗೋವಾ ಸೆಳೆತದ ಹೊರತಾಗಿಯೂ ಜಿಲ್ಲೆಯಲ್ಲಿ ಮದ್ಯ ವಹಿವಾಟಿಗೆ ಪೆಟ್ಟು ಬಿದ್ದಿಲ್ಲ.

ಸಾಲು ರಜೆ, ಕ್ರಿಸ್ಮಸ್ ಸಡಗರ, ವರ್ಷಾಂತ್ಯದ ಮೋಜಿನ ಕಾರಣ ಕರಾವಳಿ, ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿತ್ತು. ಕಳೆದ ಎರಡು ವರ್ಷಗಳಿಂದ ಕೋವಿಡ್ ಭಯಕ್ಕೆ ತತ್ತರಿಸಿ ಹೊರಗೆ ಸುತ್ತಾಟ ಸ್ಥಗಿತಗೊಳಿಸಿದ್ದ ಜನ ಈ ಬಾರಿ ಸುತ್ತಾಟ ನಡೆಸಿ ನಿರಾಳರಾದರು.

ಅದರ ಭಾಗವಾಗಿಯೇ ಇಲ್ಲಿನ ಲಾಡ್ಜ್, ರೆಸಾರ್ಟ್, ಹೋಮ್‍ಸ್ಟೇಗಳು ಭರ್ತಿಯಾಗಿದ್ದವು. ಇದರೊಟ್ಟಿಗೆ ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ದಾಖಲೆಯ ಮದ್ಯ ವಹಿವಾಟು ಕೂಡ ನಡೆಯಿತು. ಅಬಕಾರಿ ಇಲಾಖೆಯ ಅಂಕಿ–ಅಂಶದ ‍ಪ್ರಕಾರ ಡಿಸೆಂಬರ್ ಕೊನೆಯಲ್ಲಿ ಜಿಲ್ಲೆಯ 8 ಅಬಕಾರಿ ವಲಯಗಳ ವ್ಯಾಪ್ತಿಯಲ್ಲಿ ಒಟ್ಟೂ 98,570 ಬಾಕ್ಸ್ ಭಾರತೀಯ ತಯಾರಿಕಾ ಮದ್ಯ (ಐ.ಎಂ.ಎಲ್.), 79,094 ಬಾಕ್ಸ್ ಬಿಯರ್ ಮಾರಾಟ ಕಂಡಿವೆ.

‘ಜಿಲ್ಲೆಯ ಕರಾವಳಿ ಭಾಗದಲ್ಲಿ ಬಿಯರ್ ಮಾರಾಟ ಹೆಚ್ಚಿದ್ದರೆ, ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಐ.ಎಂ.ಎಲ್. ವಹಿವಾಟು ಹೆಚ್ಚಿತ್ತು. ವೈನ್‍ಶಾಪ್‍ಗಳ ಜತೆಗೆ ಪರವಾನಗಿ ಹೊಂದಿದ ರೆಸಾರ್ಟ್, ಬಾರ್ ಆ್ಯಂಡ್ ರೆಸ್ಟೊರೆಂಟ್‍ಗಳಲ್ಲಿ ವಹಿವಾಟು ಹೆಚ್ಚಿದ್ದವು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಏಪ್ರಿಲ್‍ನಿಂದ ಮಾರ್ಚ್ ಅಂತ್ಯದವರೆಗೆ ನಡೆಯುವ ಮದ್ಯ ವಹಿವಾಟು ಲೆಕ್ಕ ಹಾಕಿ ಪ್ರತಿ ವರ್ಷ ಶೇ.10ರಷ್ಟು ಹೆಚ್ಚಳದ ಗುರಿ ನೀಡಲಾಗುತ್ತದೆ. ಎರಡು ವರ್ಷದಿಂದ ನಿಗದಿತ ಗುರಿ ಸಾಧಿಸಲು ಕಷ್ಟವಾಗಿತ್ತಾದರೂ ಈ ಬಾರಿ ಡಿಸೆಂಬರ್ ವೇಳೆಗೆ ಉತ್ತಮ ವಹಿವಾಟು ನಡೆದಿರುವುದು ಒತ್ತಡ ತಗ್ಗಿಸಿದೆ’ ಎಂದರು.

‘ವರ್ಷಾಂತ್ಯದ ಆಚರಣೆ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು. ವಿದೇಶಿ ಪ್ರವಾಸಿಗರೂ ಸಾಕಷ್ಟು ಸಂಖ್ಯೆಯಲ್ಲಿದ್ದರೂ ದೇಶೀಯ ಮದ್ಯಗಳಿಗೆ ಬೇಡಿಕೆ ಹೆಚ್ಚಿತ್ತು’ ಎಂದು ಗೋಕರ್ಣದ ಹೊಟೆಲ್ ಉದ್ಯಮಿ ನೀಲೇಶ್ ಹೇಳಿದರು.

ಹೆಚ್ಚಿದ ದಾಳಿ:

ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಜತೆಗೆ ಕರಾವಳಿ ಪ್ರದೇಶವನ್ನು ಒಳಗೊಂಡ ಜಿಲ್ಲೆಯಲ್ಲಿ ಗೋವಾದಿಂದ ಅನಧಿಕೃತವಾಗಿ ವ್ಯಾಪಕ ಪ್ರಮಾಣದಲ್ಲಿ ಮದ್ಯ ಪೂರೈಕೆ ಆಗುತ್ತಿದೆ. ಇದರ ತಡೆಗೆ ಅಬಕಾರಿ ಇಲಾಖೆ ನಿರಂತರ ದಾಳಿ ನಡೆಸಿ ಕಡಿವಾಣ ಹಾಕಲು ಯತ್ನಿಸುತ್ತಿದೆ.

‘2022ರಲ್ಲಿ ದಾಖಲೆಯ 2058 ದಾಳಿ ನಡೆಸಿದ್ದೇವೆ. 52 ಘೋರ ಪ್ರಕರಣವೂ ಸೇರಿದಂತೆ ಒಟ್ಟೂ 704 ಪ್ರಕರಣ ದಾಖಲಿಸಿ 568 ಜನರನ್ನು ಬಂಧಿಸಲಾಗಿತ್ತು. 7355 ಲೀ. ಗೋವಾ ಮದ್ಯ, 167 ಲೀ. ಅನಧಿಕೃತ ಐ.ಎಂ.ಎಲ್., 138 ಲೀ.ನಷ್ಟು ಬಿಯರ್ ವಶಕ್ಕೆ ಪಡೆಯಲಾಗಿತ್ತು. ನಿರಂತರ ದಾಳಿ ಸ್ವಲ್ಪಟ್ಟಿಗೆ ಅಕ್ರಮ ಮದ್ಯ ವಹಿವಾಟಿಗೆ ಕಡಿವಾಣ ಹಾಕಿರಬಹುದು’ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದರು.

ಅಕ್ರಮ ಮದ್ಯ ಮಾರಾಟಕ್ಕೆ ನಿಯಂತ್ರಣ ಹೇರಿದ ಪರಿಣಾಮ ಅಧಿಕೃತ ಮದ್ಯ ಮಾರಾಟ ವಹಿವಾಟು ಉತ್ತಮವಾಗಿದೆ.

ಎಂ.ವನಜಾಕ್ಷಿ

ಅಬಕಾರಿ ಉಪ ಆಯುಕ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT