ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ: ಊರಕೇರಿಗೆ ಉಪ್ಪು ನೀರಿನ ಬವಣೆ

ಪ್ರತಿ ವರ್ಷ ಬೆಳೆ ಹಾನಿ ಸಮಸ್ಯೆ ಎದುರಿಸುವ ಗ್ರಾಮಸ್ಥರು
Published 16 ಆಗಸ್ಟ್ 2023, 4:01 IST
Last Updated 16 ಆಗಸ್ಟ್ 2023, 4:01 IST
ಅಕ್ಷರ ಗಾತ್ರ

ಕುಮಟಾ: ನೆರೆ ಹಾವಳಿ, ಭತ್ತದ ಗದ್ದೆಗೆ ಉಪ್ಪು ನೀರು ನುಗ್ಗುವುದು ತಾಲ್ಲೂಕಿನ ಗುಡನಕಟ್ಟು ಹಾಗೂ ಊರಕೇರಿ ಗ್ರಾಮಸ್ಥರು ಪ್ರತೀ ವರ್ಷದ ಅನುಭವಿಸುವ ಬವಣೆಯಾಗಿದೆ.

ಒಂದು ಬದಿ ಹಸಿರು ಕಾಡು, ಇನ್ನೊಂದೆಡೆ ಜನವಸತಿ, ತೋಟ, ಕೃಷಿ ಭೂಮಿ ಹೊಂದಿರುವ ಊರಕೇರಿ ಗ್ರಾಮ ತಾಲ್ಲೂಕಿನ ವಾಲಗಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ನೆರೆಯ ಹೊನ್ನಾವರ ತಾಲ್ಲೂಕನ್ನು ಬೇರ್ಪಡಿಸುವ ಊರಿನ ಬಡಗಣಿ ಹೊಳೆಗೆ ಪ್ರತೀ ವರ್ಷ ನೆರೆ ಬಂದಾಗ ಹತ್ತಾರು ಕಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗುತ್ತವೆ.

ನೆರೆ ನೀರಲ್ಲಿ ಹಾದು ಸುರಕ್ಷಿತ ಸ್ಥಳಕ್ಕೆ ಬರಲು ಅಗತ್ಯವಿರುವ ಕಾಲು ದಾರಿ ಸಮಸ್ಯೆ ಬಗ್ಗೆ ಕಳೆದ ವರ್ಷ ಗ್ರಾಮದಲ್ಲಿ ನಡೆದ `ಜಿಲ್ಲಾಧಿಕಾರಿ ನಡೆ ಹಳ್ಳಿಯಡೆ' ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಗಮನ ಸೆಳೆದಿದ್ದರು.

‘ಊರಿನ ನರಿಯಣ್ಣನ ಕಂಟದ ಬಳಿ ಜಂತ್ರಡಿ ಗೇಟು ದುರಸ್ತಿ ಮಾಡದೇ ಇರುವ ಕಾರಣ ಪ್ರತೀ ವರ್ಷ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಕೆಲವರು ಭತ್ತದ ಕೃಷಿಯನ್ನೇ ತೊರೆದಿದ್ದಾರೆ. ಗ್ರಾಮದ ರೈಲ್ವೆ ಮೇಲ್ಸೇತುವೆ ಅಡಿಯಲ್ಲಿರುವ ರಸ್ತೆ ದುರಸ್ತಿ ಕಾಣಬೇಕಾಗಿದೆ. ರಸ್ತೆ ದುರಸ್ತಿಯಾಗಿ ಕೊಂಚ ಎತ್ತರವಾದರೆ ರಸ್ತೆಯ ಮೇಲೆ ಹೋಗುವ ವಾಹನಗಳು ಮೇಲು ಸೇತುವೆಗೆ ತಗಲಿ ಧಕ್ಕೆಯಾಗಬಹುದು ಎನ್ನುವ ಕಾರಣಕ್ಕೆ ಕೊಂಕಣ ರೈಲ್ವೆ ನಿಗಮದವರು ರಸ್ತೆ ದುರಸ್ತಿಗೆ ಆಕ್ಷೇಪಿಸುತ್ತಿದ್ದಾರೆ’ ಎಂದು ಗ್ರಾಮಸ್ಥ ಎನ್.ಜಿ. ವೈದ್ಯ ಹೇಳಿದರು.

ಗ್ರಾಮದಲ್ಲಿ ಮಳೆ ಪ್ರಮಾಣ ಸಮರ್ಪಕವಾಗಿ ದಾಖಲಾಗದ ಕಾರಣ ಬೆಳೆ ವಿಮೆ ಮಾಡಿಸಿದ್ದರೂ ಪರಿಹಾರ ನೀಡಲು ಇರುವ ಮಾನದಂಡಕ್ಕೆ ಅನುಗುಣವಾಗಿರದ ಕಾರಣ ರೈತರು ಪರಿಹಾರ ವಂಚಿತರಾಗಬೇಕಾಗಿದೆ.
- ಹನುಮಂತ ಪಟಗಾರ ವಾಲಗಳ್ಳಿ ಗ್ರಾ.ಪಂ. ಸದಸ್ಯ

‘ಮಳೆ ಅಳತೆಯಲ್ಲಿ ವ್ಯತ್ಯಾಸವಾಗಿ ಗ್ರಾಮದ ಕೃಷಿಕರು ಬೆಳೆ ವಿಮೆಯಿಂದ ವಂಚಿತರಾಗಿದ್ದರು ಎಂಬ ಸಂಗತಿಯನ್ನು ಜಿಲ್ಲಾಧಿಕಾರಿ ಅವರು ಭೇಟಿ ನೀಡಿದ್ದಾಗ ಊರಿನವರು ಗಮನ ಸೆಳೆದಿದ್ದರು. ಆದರೆ, ಆ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತ ಪಟಗಾರ ತಿಳಿಸಿದರು.

‘ತಾಲ್ಲೂಕು ಪಂಚಾಯ್ತಿ ಹದಿನೈದನೇ ಹಣಕಾಸು ಯೋಜನೆಯಡಿ ಸುಮಾರು ₹4 ಲಕ್ಷ ವೆಚ್ಚದಲ್ಲಿ ಕಾಲು ದಾರಿ ನಿರ್ಮಾಣ ಮಾಡಿದ್ದರಿಂದ ಈ ವರ್ಷ ಜನರಿಗೆ ಅನುಕೂಲವಾಗಿದೆ. ಅಬ್ಬಿ ಕಳ್ಳಿಗದ್ದೆ ಬಳಿ ಊರಿನವರು ಬೇಡಿಕೆ ಇಟ್ಟ ಇನ್ನೊಂದು ಕಾಲು ದಾರಿ ಮಾಡಲು ತಾಲ್ಲೂಕು ಪಂಚಾಯ್ತಿ ಸಿದ್ಧವಿದ್ದರೂ ಜಾಗದ ಸಮಸ್ಯೆ ಎದುರಾಗಿದೆ. ಸಂಬಂಧಪಟ್ಟವರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ತಾಲ್ಲೂಕು ಪಂಚಾಯ್ತಿ ಇ.ಒ ನಾಗರತ್ನಾ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT