ಯಲ್ಲಾಪುರ:ಪ್ರಜಾಪ್ರಭುತ್ವದ ಅಡಿಗಲ್ಲು ಅಲ್ಲಾಡದಂತೆ ಕಾಪಾಡಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ ಭಾನುವಾರ ತಾಟವಾಳದಲ್ಲಿ ಆಯೋಜಿಸಿದ ಮಾನವ ಸರಪಳಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮಹತ್ವವನ್ನು ಅರ್ಥಮಾಡಿಕೊಂಡು ಅದನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಅನೇಕರ ಹೋರಾಟದ ಫಲವಾಗಿ ಅಸ್ತಿತ್ವಕ್ಕೆ ಬಂದ ಪ್ರಜಾಪ್ರಭುತ್ವದ ಅಡಿಗಲ್ಲು ಸದಾ ಭದ್ರವಾಗಿರಬೇಕು. ಪ್ರಜಾಪ್ರಭುತ್ವದ ಆಶಯಗಳು ಈಡೇರಬೇಕು’ ಎಂದರು.
ರಾಜ್ಯ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ‘ಪ್ರಜಾಪ್ರಭುತ್ವದಿಂದಾಗಿ ಭಾರತ ಇಂದು ಅಭಿವೃದ್ಧಿ ಸಾಧಿಸುತ್ತಿದೆ. ಜಾತಿ, ಧರ್ಮ, ಗಡಿ, ನೀರು, ಭಾಷೆ ಮೊದಲಾದ ಎಲ್ಲ ಭಿನ್ನತೆಯ ನಡುವೆಯೂ ನಾವು ಒಂದಾಗಿ ಪ್ರಜಾಪ್ರಭುತ್ವವನ್ನು ಕಾಪಾಡಬೇಕು’ ಎಂದರು.
ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಜ್ಯೋತಿ ನರೋಟಿ ಸಂವಿಧಾನದ ಪ್ರಸ್ತಾವನೆ ಓದಿದರು. ಯಲ್ಲಾಪುರ ತಹಶೀಲ್ದಾರ್ ಯಲ್ಲಪ್ಪ ಗೊನೆಣ್ಣವರ, ಮುಂಡಗೋಡ ತಹಶೀಲ್ದಾರ್ ಶಂಕರ ಗೌಡಿ, ಪೊಲೀಸ್ ಇನ್‌ಸ್ಪೆಪೆಕ್ಟರ್ ರಮೇಶ ಹಾನಾಪುರ, ಪ್ರಮುಖರಾದ ವಿಜಯ ಮಿರಾಶಿ, ಲಾರೆನ್ಸ್ ಸಿದ್ದಿ ಇದ್ದರು.
ಶಿಕ್ಷಕ ಚಂದ್ರಹಾಸ ನಾಯಕ ನಿರ್ವಹಿಸಿದರು. ಮೊರಾರ್ಜಿ ವಸತಿ ಶಾಲೆಯ ಎನ್‌ಸಿಸಿ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಪಟ್ಟಣದ ಬಿಸಗೋಡು ಕ್ರಾಸ್‌ನಿಂದ ಎಪಿಎಂಸಿ ವರೆಗೆ ಮಾನವ ಸರಪಳಿ ನಿರ್ಮಿಸಲಾಗಿತ್ತು.