ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನಗುರು ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆಗೆ ಶಿಷ್ಯರಿಂದ ಸನ್ಮಾನ

ಹಿರಿಯ ಗಾಯಕರಿಂದ ಸಂಗೀತ ಕಚೇರಿ
Last Updated 20 ಜನವರಿ 2020, 12:34 IST
ಅಕ್ಷರ ಗಾತ್ರ

ಶಿರಸಿ: ಗಾನಗುರು, ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆ ಅವರಿಗೆ ಅವರ ಸಂಗೀತ ಶಿಷ್ಯರು, ಅಭಿಮಾನಿಗಳು ಅದ್ಧೂರಿಯಾಗಿ ಸನ್ಮಾನಿಸಿದರು.

ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶಯ ಮಾತನಾಡಿದ ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಅವರು, ’ಯುವ ಪೀಳಿಗೆ ಮೊಬೈಲ್‌ಗೆ ಹೆಚ್ಚು ಆಕರ್ಷಿತವಾಗಿ, ಶಾಸ್ತ್ರೀಯ ಸಂಗೀತ, ಸಾಹಿತ್ಯವನ್ನು ಮರೆಯುವ ಜತೆಗೆ ಬಾಹ್ಯ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿದೆ. ಮೊಬೈಲ್‌ನಿಂದ ಸಕಾರಾತ್ಮಕ ಫಲಿತಾಂಶಕ್ಕಿಂತ ನಕಾರಾತ್ಮಕ ಫಲಿತಾಂಶವೇ ಹೆಚ್ಚಿದೆ. ಈ ಎಚ್ಚರ ಯುವಜನರಲ್ಲಿ ಬರಬೇಕು’ ಎಂದರು.

‘ಮಾನಸಿಕ ಏಕಾಗ್ರತೆ ಕೊಡುವ ಶಕ್ತಿ ಸಂಗೀತಕ್ಕಿದೆ. ಭಗವಂತ ಕಣ್ಣಿಗೆ ಕಾಣದೇ ಇರಬಹುದು. ಆದರೆ, ಸಂಗೀತದ ರಾಗ, ತಾಳ, ಲಯದಲ್ಲಿ ಆತ ನೆಲೆಸಿದ್ದಾನೆ. ಹೀಗಾಗಿಯೇ ಸಂಗೀತ ಕೇಳಿದರೆ ನೆಮ್ಮದಿ ಸಿಗುತ್ತದೆ. ಮೊಬೈಲ್ ಎಂಬ ನರಕದಿಂದ ಹೊರಬಂದು ಸಂಗೀತವೆಂಬ ಸ್ವರ್ಗದಲ್ಲಿ ಖುಷಿ ಕಾಣುವಂತೆ ಪಾಲಕರು, ಗುರುಗಳು ವಿದ್ಯಾರ್ಥಿಗಳಿಗೆ ತಿಳಿಹೇಳಬೇಕಾಗಿದೆ ಎಂದು ಹೇಳಿದರು.

ನಟ ನೀರ್ನಳ್ಳಿ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳು, ಶಿಷ್ಯರಿಂದ ಗುರುವಂದನೆಯನ್ನು ಸ್ವೀಕರಿಸಿದ ಎಂ.ಪಿ ಹೆಗಡೆ ಅವರು, ಭಾವುಕರಾಗಿ ಮಾತನಾಡಿ, ಸಾಧನೆಗೆ ಸಹಕರಿಸಿದವರನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಎಂ.ಪಿ ಹೆಗಡೆ ದಂಪತಿ, ಗುರು ಮಾತೆಯರಾದ ಯಮುನಾ ರಂಗನಾಥ್ ಹೆಗಡೆ ಶೀಗೆಹಳ್ಳಿ ಮತ್ತು ಶಾಂತವ್ವ ಚಂದ್ರಶೇಖರ ಪುರಾಣಿಕಮಠ ಧಾರವಾಡ ಅವರಿಗೆ ಗೌರವ ಸಮರ್ಪಣೆ ಮಾಡಿದರು.

ಪಡಿಗೆರೆಯವರ ಹಿರಿಯ ಶಿಷ್ಯಂದಿರಾದ ವಿಘ್ನೇಶ್ವರ ಭಟ್ ಕೊಡೆಗದ್ದೆ, ಶ್ರೀಧರ ಹೆಗಡೆ ದಾಸನಕೊಪ್ಪ, ರವಿ ಮುರೂರು, ರಾಧಾ ದೇಸಾಯಿ ಧಾರವಾಡ, ಗುರುಪ್ರಸಾದ ಗಿಳಿಗುಂಡಿ, ಶ್ರೀಪಾದ ಹೆಗಡೆ ಸೋಮನಮನೆ, ನಾಗಭೂಷಣ ಹೆಗಡೆ ಸಾಗರ ಸಂಗೀತ ಕಚೇರಿ ನಡೆಸಿಕೊಟ್ಟರು. ಶಿಷ್ಯರು ಗುರುವಿಗೆ ₹ 2ಲಕ್ಷ ಹಮ್ಮಿಣಿ ಅರ್ಪಿಸಿದರು. ಕೊನೆಯಲ್ಲಿ ಎಂ.ಪಿ.ಹೆಗಡೆ ರಾಗ್ ಪೂರ್ವಿ ಪ್ರಸ್ತುತಪಡಿಸಿದರು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ, ಹಾರ್ಮೋನಿಯಂನಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಸಹಕರಿಸಿದರು.

ಚೇತನಾ ಹೆಗಡೆ, ಅನುಷಾ ಹೆಗಡೆ ಪ್ರಾರ್ಥನೆ ಹಾಡಿದರು. ಪ್ರೊ. ಕೆ.ವಿ.ಭಟ್ಟ ಸ್ವಾಗತಿಸಿದರು. ರಾಧಾ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎನ್.ಭಟ್ಟ ಸುಗಾವಿ ವಂದಿಸಿದರು. ಸಿಂಚನಾ ಸದಾಶಿವ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT