ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ಅರೆಬರೆಯಾದ ಹೆದ್ದಾರಿ: ಅಪಘಾತಕ್ಕೆ ರಹದಾರಿ

Published 5 ಡಿಸೆಂಬರ್ 2023, 7:39 IST
Last Updated 5 ಡಿಸೆಂಬರ್ 2023, 7:39 IST
ಅಕ್ಷರ ಗಾತ್ರ

ಕುಮಟಾ: ಹಲವು ಅಡೆತಡೆಗಳ ಕಾರಣದಿಂದ ಕುಮಟಾದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ತೆವಳುತ್ತಾ ಸಾಗಿದೆ.

ಅರೆಬರೆ ಕಾಮಗಾರಿ ನಡೆದ ಸ್ಥಳಗಳಲ್ಲಿ ರಾತ್ರಿ ಹೊತ್ತು ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಜೀವ ತೆತ್ತ ಹತ್ತಾರು ಘಟನೆಗಳು ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿದೆ.

ತಾಲ್ಲೂಕಿನ ಅಳ್ವೆಕೋಡಿ ಬಳಿ ಹೆದ್ದಾರಿ ಪಕ್ಕದಲ್ಲಿ ಹಾದು ಹೋಗಿರುವ ಕುಮಟಾ-ಹೊನ್ನಾವರ ಮರಾಕಲ್ ಕುಡಿಯುವ ನೀರು ಯೋಜನೆಯ ಪೈಪ್‍ಲೈನ್ ತೆರವು ಕಾರ್ಯ ನಡೆಯದ ಕರಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಭೂಸ್ವಾಧೀನ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಕಾಮಗಾರಿ ಮುಂದುವರೆಸಿಲ್ಲ. ಇದರಿಂದಾಗಿ ವಾಹನ ಸವಾರರೂ ಗೊಂದಲಕ್ಕೆ ತುತ್ತಾಗುವ ಸ್ಥಿತಿ ಇದೆ.

‘ಹೆದ್ದಾರಿಯ ಒಂದು ಬದಿ ಕೆಲಸ ಮುಗಿಸಿದ್ದೇವೆ. ಆದರೆ, ಇನ್ನೊಂದು ಬದಿ ಕಾಮಗಾರಿ ನಡೆಸಲು ಜಲ್ಲಿ ಕಲ್ಲಿನ ಕೊರತೆ ಉಂಟಾಗಿದೆ’ ಎಂದು ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಐ.ಆರ್.ಬಿ ಕಂಪನಿಯ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಹೇಳಿದರು.

‘ಪಟ್ಟಣ ವ್ಯಾಪ್ತಿಯಲ್ಲಿ ಹೆದ್ದಾರಿಯ ಎರಡೂ ಬದಿಯ ಸುಮಾರು ಒಂದೂವರೆ ಕಿ.ಮೀ.ನಷ್ಟು ಅಲ್ಲಲ್ಲಿ ಹೆದ್ದಾರಿ ಜಾಗದ ಅತಿಕ್ರಮಣ ಇನ್ನೂ ತೆರವುಗೊಂಡಿಲ್ಲ. ಅತಿಕ್ರಮಣ ಇಲ್ಲದ ಪ್ರದೇಶಗಳಲ್ಲಿ ಹೆದ್ದಾರಿ ಬದಿಯ ಮರಗಳನ್ನು ಕಡಿಯಲಾಗುತ್ತಿದ್ದು, ವಿದ್ಯುತ್ ಕಂಬಗಳ ಸ್ಥಳಾಂತರ ಎಲ್ಲೆಡೆ ಹೆಚ್ಚು ಕಡಿಮೆ ಮುಗಿದಿದೆ’ ಎಂದೂ ಸಮಸ್ಯೆ ವಿವರಿಸಿದರು.

‘ಅಳ್ವೆಕೋಡಿಯಲ್ಲಿ ಅಲ್ಲಲ್ಲಿ ಹೆದ್ದಾರಿ ವಿಸ್ತರಣೆ ಮಾಡಿ ಡಾಂಬರು ಹಾಕಿದ ರಸ್ತೆ ವಾಹನಗಳ ಪಾರ್ಕಿಂಗ್ ಪ್ರದೇಶವಾಗಿ ಬಳಕೆಯಾಗುತ್ತಿದೆ. ರಾತ್ರಿ ಹೊತ್ತು ಚತುಷ್ಪಥದಲ್ಲಿ ವೇಗವಾಗಿ ಬರುವ ವಾಹನಗಳು ಕಾಮಗಾರಿ ನಡೆಯದ ಹಳೆಯ ರಸ್ತೆಗೆ ಇಳಿದಾಗ ಅಪಘಾತ ಸಂಭವಿಸುತ್ತಿವೆ. ಪಟ್ಟಣದ ಹೊನಮಾಂವ್ ಸೇತುವೆ ವಿಸ್ತರಣೆ ಮಾಡದೆ ಚತುಷ್ಪಥ ಕಾಮಗಾರಿ ಹೇಗೆ ನಡೆಯುತ್ತದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮಳೆಗಾಲ ಮುಗಿದರೂ ಚತುಷ್ಪಥ ಕಾಮಗಾರಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ’ ಎಂದು ಅಳ್ವೆಕೋಡಿ ನಿವಾಸಿ ವಿನಾಯಕ ನಾಯ್ಕ ದೂರಿದರು.

‘ಅಳ್ವೆಕೋಡಿ, ಹೊನಮಾಂವ್ ಭಾಗದಲ್ಲಿ ಜಾಗ ಅತಿಕ್ರಮಣವಾದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಯಾವುದೇ ಮಾಹಿತಿ ಇಲ್ಲ. ಅವರು ಸೂಕ್ತ ದಾಖಲೆಯೊಂದಿಗೆ ಬಂದರೆ ಅತಿಕ್ರಮಣ ತೆರವಿಗೆ ನೆರವಾಗುತ್ತೇನೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.

ಕುಮಟಾ ಸಮೀಪದ ಅಳ್ವೆಕೋಡಿ ಬಳಿ ಚತುಷ್ಪಥ ಕಾಮಗಾರಿ ನಿಂತಿರುವುದು.
ಕುಮಟಾ ಸಮೀಪದ ಅಳ್ವೆಕೋಡಿ ಬಳಿ ಚತುಷ್ಪಥ ಕಾಮಗಾರಿ ನಿಂತಿರುವುದು.
ಹೊನಮಾಂವ್ ಬಳಿ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಇದೆ. ಆದರೆ ಹೊಸ ಬಸ್ ನಿಲ್ದಾಣ ಬಳಿ ರೈಲ್ವೆ ಕೆಳ ಸೇತುವೆಯ ಬಳಿ ಯಾವ ರೀತಿ ಅನುಕೂಲಕರ ಮಾರ್ಗ ನಿರ್ಮಿಸುತ್ತಾರೆ ಎನ್ನುವ ಮಾಹಿತಿ ಇಲ್ಲ.
ದಿನಕರ ಶೆಟ್ಟಿ ಶಾಸಕ ಕುಮಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT