ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರದ ಜಾಗ, ಮನೆ ನಿರ್ಮಾಣ ಅನುದಾನದ ಭರವಸೆ: ನೆರೆ ಸಂತ್ರಸ್ತರಿಗೆ ಮನೆ ಮರೀಚಿಕೆ!

Published 30 ಏಪ್ರಿಲ್ 2024, 4:59 IST
Last Updated 30 ಏಪ್ರಿಲ್ 2024, 4:59 IST
ಅಕ್ಷರ ಗಾತ್ರ

ಹೊನ್ನಾವರ: ಮಳೆಗಾಲದಲ್ಲಿ ಪ್ರವಾಹದ ಸ್ಥಿತಿ ಎದುರಿಸುವ ತಾಲ್ಲೂಕಿನ ಗುಂಡಬಾಳ ನದಿ ದಂಡೆಯ ಹೆಚ್ಚಿನ ಪ್ರದೇಶಗಳು ಹಾಗೂ ಬಡಗಣಿ ನದಿ ಮತ್ತು ಭಾಸ್ಕೇರಿ ಹಳ್ಳ ದಂಡೆಗಳ ಕೆಲವು ಜಾಗಗಳಲ್ಲಿರುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮರೀಚಿಕೆಯಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಈ ಪ್ರದೇಶಕ್ಕೆ ನೆರೆ ನೀರು ನುಗ್ಗುತ್ತದೆ. ದಿಢೀರ್ ಪ್ರವಾಹ ಬರುವುದರಿಂದ ರಾತ್ರೋರಾತ್ರಿ ಮನೆ ಬಿಟ್ಟು ಸುರಕ್ಷಿತ ಜಾಗಗಳಿಗೆ ತೆರಳಬೇಕಾದ ಪರಿಸ್ಥಿತಿ ಹಲವು ಬಾರಿ ಇಲ್ಲಿ ನಿರ್ಮಾಣವಾಗಿದೆ. ಜನ ಹಾಗೂ ಜಾನುವಾರು ಸಾವು ಅನೇಕ ಬಾರಿ ಇಲ್ಲಿ ಸಂಭವಿಸಿದೆ.

ಹಿಂದಿನ ಬಿಜೆಪಿ ಸರ್ಕಾರ ಇದ್ದಾಗ ಗುಂಡಬಾಳ ನದಿ ದಂಡೆಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ್ದ ಅಂದಿನ ಕಂದಾಯ ಸಚಿವ ಆರ್.ಅಶೋಕ, ನಿರಾಶ್ರಿತರಿಗೆ ಮನೆ ಸಂಕೀರ್ಣ ನಿರ್ಮಿಸುವ ಭರವಸೆ ನೀಡಿದ್ದರು. ಕಳೆದ ಮಳೆಗಾಲದಲ್ಲಿ ನೆರೆ ಬಂದಾಗ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪ್ರತಿ ನೆರೆ ನಿರಾಶ್ರಿತ ಕುಟುಂಬಕ್ಕೆ ತಲಾ ಒಂದೂವರೆ ಗುಂಟೆ ಜಾಗ ಹಾಗೂ ಮನೆ ನಿರ್ಮಾಣಕ್ಕೆ ₹1.5 ಲಕ್ಷ ನೀಡುವ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

‘ಪ್ರವಾಹ ಬಂದಾಗ ತೆರೆಯಲಾಗುವ ಕಾಳಜಿ ಕೇಂದ್ರದಲ್ಲಿ ನೆರೆ ನಿರಾಶ್ರಿತರು ಆಶ್ರಯ ಪಡೆಯುವುದು ಹಾಗೂ ಅಲ್ಲಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ದಂಡು ಆಗಮಿಸಿ ಸಾಂತ್ವನ ಹೇಳುವುದು ಹಿಂದಿನಿಂದ ವಾಡಿಕೆಯಂತೆ ಪ್ರತಿ ವರ್ಷ ನಡೆದುಕೊಂಡು ಬಂದಿದೆ. ಹಲವು ವರ್ಷ ಕಳೆದರೂ ನಿರಾಶ್ರಿತರ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಮನೆಗೆ ನೀರು ನುಗ್ಗಿದಾಗ ನಿಯಮದಂತೆ ₹10 ಸಾವಿರ ತಾತ್ಕಾಲಿಕ ಪರಿಹಾರ, ಇತರ ಪರಿಕರಗಳನ್ನು ಬಿಟ್ಟರೆ ನಿರಾಶ್ರಿತರಿಗೆ ಮತ್ತೇನು ಸಿಕ್ಕಿಲ್ಲ’ ಎನ್ನುತ್ತಾರೆ ಗುಂಡಬಾಳ ನದಿಯಂಚಿನ ಗ್ರಾಮಗಳ ಜನರು.

‘ಮಳೆಗಾಲ ಸಮೀಪಿಸುತ್ತಿದ್ದು ಈ ವರ್ಷವೂ ಕಾಳಜಿ ಕೇಂದ್ರಗಳಲ್ಲಿ ನೆರೆ ಸಂತ್ರಸ್ತರು ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಮುಂದುವರಿಯುವ ಲಕ್ಷಣಗಳಿವೆ’ ಎಂದೂ ಹೇಳಿದರು.

‘ಸಚಿವರ ಸೂಚನೆಯಂತೆ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ನಿರ್ಣಯದ ಪ್ರತಿಯೊಂದಿಗೆ ಪ್ರಸ್ತಾವನೆ ಕಳಿಸಲಾಗಿದೆ. ಮುಂದೆ ಏನಾಗಿದೆ ಎಂಬ ಮಾಹಿತಿ ನಮಗಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ರಾಮ ಭಟ್ ತಿಳಿಸಿದರು.

‘ತಾಲ್ಲೂಕು ಪಂಚಾಯಿತಿಯಿಂದ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಜಿಲ್ಲಾ ಪಂಚಾಯಿತಿ ಹಂತದಲ್ಲಿ ಅನುಮೋದನೆ ಸಿಕ್ಕಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಮನೆ ಕಟ್ಟಲು ನಿವೇಶನ ನೀಡಿ ಎಂದು ಹಲವು ಬಾರಿ ಲಿಖಿತ ಮನವಿ ಸಲ್ಲಿಸಿದ್ದೇವೆ. ನೆರೆ ಬಂದಾಗಲಷ್ಟೇ ಶಾಶ್ವತ ಪರಿಹಾರದ ಮಾತು ಕೇಳಿ ಬರುತ್ತದೆ
ಗ್ರೇಸಿ ಫರ್ನಾಂಡಿಸ್ ಗುಂಡಿಬೈಲ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT